ಬೆಂಗಳೂರು,ಏ.9- ಜನಗಣತಿಗೆ ಸರ್ಕಾರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗಿದೆ. ಕೇಂದ್ರ ಸರ್ಕಾರ ಆರಂಭಿಸಿರುವ ಜನಗಣತಿಗೆ ಶಿಕ್ಷಕರ ಸಮುದಾಯ ಹಿಂದೆ ಸರಿದ ಹಿನ್ನೆಲೆಯಲ್ಲಿ ಈಗ ರಾಜ್ಯಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುತ್ತಿರುವುದರಿಂದ ಕಚೇರಿಯ ಕೆಲಸ ಕಾರ್ಯಗಳು ಸ್ತಬ್ದಗೊಳ್ಳುತ್ತಿವೆ.
ಪ್ರಮುಖವಾಗಿ ಖಜಾನೆ ಇಲಾಖೆ, ನೀರಾವರಿ, ಕಂದಾಯ ಇಲಾಖೆಗಳಿಂದ ಅಧಿಕಾರಿಗಳು ಸಿಬ್ಬಂದಿಗಳನ್ನು ನಿಯೋಜಿಸಿರುವುದರಿಂದ ರೈತರಿಗೆ ಪಹಣಿ, ಇಸಿ ಹಾಗೂ ವೇತನ ಬಿಡುಗಡೆ ಸೇರಿದಂತೆ ಹಲವಾರು ಸೇವೆಗಳು ವ್ಯತ್ಯಯಗೊಳ್ಳುತ್ತಿವೆ.
ಸರ್ಕಾರಿ ನೌಕರರು ಸೇರಿದಂತೆ ನಿಗಮಮಂಡಳಿಗಳು ಹಾಗೂ ಗುತ್ತಿಗೆ ಕಾರ್ಮಿಕರಿಗೆ ವೇತನ ಬಿಡುಗಡೆ ಮಾಡುವ ಖಜಾನೆ ಇಲಾಖೆಯಲ್ಲಿಯೂ ಕೂಡ ಬಹುತೇಕ ಸಿಬ್ಬಂದಿಗಳನ್ನು ಈ ಕಾರ್ಯಕ್ಕೆ ಬಳಸಿಕೊಂಡಿರುವುದರಿಂದ ಈ ಬಾರಿ ವೇತನದಲ್ಲಿ ವಿಳಂಬವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈಗಾಗಲೇ ಹಲವು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಇದರ ನಡುವೆ ಜನಗಣತಿಗೆ ನಿಯೋಜಿಸಿರುವುದರಿಂದ ಕಚೇರಿಯಲ್ಲಿ ಸಿಬ್ಬಂದಿಗಳಿಲ್ಲದೆ ಕಡತಗಳ ವಿಲೇವಾರಿ ಕೂಡ ವ್ಯತ್ಯಯವಾಗುತ್ತಿದೆ.
ಬೇಸಿಗೆಯ ಸುಡುಬಿಸಿಲಿನಲ್ಲಿ ಸಿಬ್ಬಂದಿಗಳು ಜನಗಣತಿಯಲ್ಲಿ ತೊಡಗಿದ್ದು, ಗಣತಿ ಆರಂಭಗೊಂಡ ನಾಲ್ಕು ದಿನಗಳಲ್ಲಿಯೇ ಬಸವಳಿದಿದ್ದಾರೆ.ಈಗ ಅಂತರ್ಜಾಲದಲ್ಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಸ್ವಯಂಪ್ರೇರಿತರಾಗಿ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಿದ್ದು, ಇದೇ 15 ರವರೆಗೆ ಅವಕಾಶ ಇದೆ. ನಂತರದ ದಿನಗಳಲ್ಲಿ ಸರ್ಕಾರಿ ಸಿಬ್ಬಂದಿಗಳು ನಿಗದಿತ ಸಮಯದಲ್ಲಿ ಈ ಗಣತಿ ಕಾರ್ಯವನ್ನು ಮುಗಿಸಬೇಕಾಗಿದೆ.
