Thursday, April 16, 2026
Homeರಾಜ್ಯAI ವೇಗಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌

AI ವೇಗಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌

Change is inevitable at the speed of AI: Governor Thawar Chand Gehlot

ಬೆಂಗಳೂರು,ಏ.4- ಪ್ರಖ್ಯಾತ ಕ್ರಿಕೆಟ್‌ ಪಟು ವೆಂಕಟೇಶ್‌ ಪ್ರಸಾದ್‌, ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಸೇರಿದಂತೆ ಆರು ಮಂದಿ ಗಣ್ಯರಿಗೆ ಡಾ. ಮನಮೋಹನ್‌ ಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಇಂದು ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿತು.

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಮಾತನಾಡಿ, ನಿಮ ಬೆಳವಣಿಗೆ ರಾಜ್ಯ ಮತ್ತು ರಾಷ್ಟ್ರದ ಪ್ರಗತಿಯೊಂದಿಗೆ ಮಿಳಿತವಾಗಿರಲಿ. ಕಠಿಣ ಪರಿಶ್ರಮಿಗಳಾಗಿ ಸಮಾಜ ಹಾಗೂ ದೇಶದ ಬಗ್ಗೆ ಕಾಳಜಿ ಉಳ್ಳವರಾಗಿ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.

ವೇಗವಾಗಿ ಬೆಳೆಯುತ್ತಿರುವ ಜಗತ್ತಿಗೆ ತಕ್ಕಂತೆ ಬದಲಾವಣೆ ಕಲಿಕೆ ಅನಿವಾರ್ಯವಾಗಿದೆ. ಉದ್ಯೋಗ, ಉದ್ಯಮ ಕ್ಷೇತ್ರದಲ್ಲೂ ಬದಲಾವಣೆಯಾಗುತ್ತಿವೆ. ಹಸಿರು ಇಂಧನಕ್ಕೆ ಒಲವು ಹೆಚ್ಚಾಗುತ್ತಿದೆ. ಕೃತಕ ಬುದ್ಧಿಮತ್ತೆ ವ್ಯಾಪಕವಾಗಿ ಬಳಕೆಯಾಗುತ್ತಿದ್ದು, ಅದಕ್ಕೆ ತಕ್ಕಂತೆ ನಾವೂ ಬದಲಾಗಬೇಕು. 2047ರ ವೇಳೆಗೆ ವಿಕಸಿತ ಭಾರತ ಮಾಡಲು ನಾವು ನಮ ಕೈಲಾದ ಕೊಡುಗೆಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.

ಡಾ.ಮನಮೋಹನ್‌ ಸಿಂಗ್‌ ಬೆಂಗಳೂರು ನಗರ ವಿವಿಯು ಅಲ್ಪಾವಧಿಯಲ್ಲಿಯೇ ದೊಡ್ಡ ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು.ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ವಿವಿಯ 5ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿವಿಯ ಕುಲಾಧಿಪತಿಗಳು ಹಾಗೂ ರಾಜ್ಯಪಾಲ ಡಾ.ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಿದರು.

ಶಿಕ್ಷಣ ತಜ್ಞ ಟಿ.ಕೆ.ನಾರಾಯಣಪ್ಪ, ಕ್ರೀಡಾ ಆಡಳಿತಗಾರರಾದ ಕೆ.ಗೋವಿಂದರಾಜ್‌, ಶಿಕ್ಷಣ ತಜ್ಞರಾದ ಡಾ.ಮೋಹನ್‌ ಆಳ್ವ ಹಾಗೂ ಉದ್ಯಮಿ ಹಾಗೂ ವಿಧಾನಪರಿಷತ್‌ ಮಾಜಿ ಸದಸ್ಯ ಬಾವಾ ಮೊಹಮದ್‌ ಫಾರೂಖ್‌ ಅವರು ಇಂದು ಗೌರವ ಡಾಕ್ಟರೇಟ್‌ ಪದವಿ ಸ್ವೀಕಾರ ಮಾಡಿದರು.

ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಒಳಗೊಂಡಂತೆ 37,397 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆದುಕೊಂಡರು. ವಿವಿಧ ವಿಷಯಗಳಲ್ಲಿ 23 ಸಂಶೋಧನಾ ವಿದ್ಯಾರ್ಥಿಗಳು ಪಿಎಚ್‌ ಡಿ ಪದವಿಯನ್ನು ಪಡೆದುಕೊಂಡರು.

ಒಟ್ಟು 71 ರ್ಯಾಂಕ್‌ ವಿಜೇತರಲ್ಲಿ 42 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗಳಿಗೆ ಸಂಬಂಧಿಸಿದ್ದರೆ ಅವರಲ್ಲಿ ಐವರು ಪುರುಷ ಮತ್ತು 37 ಮಹಿಳಾ ವಿದ್ಯಾರ್ಥಿನಿಯರಾಗಿದ್ದಾರೆ.
ಡಾ.ಮನಮೋಹನ್‌ ಸಿಂಗ್‌ ಬೆಂಗಳೂರು ನಗರ ವಿವಿಯ ರಸಾಯನ ಶಾಸ್ತ್ರ ವಿಭಾಗದ ಸ್ನೇಹ ಟಿ ಎಂಬ ವಿದ್ಯಾರ್ಥಿನಿ ರಸಾಯನ ಶಾಸ್ತ್ರ ವಿಷಯದಲ್ಲಿ ಗರಿಷ್ಠ ಅಂಕ ಗಳಿಸಿ 4 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಶೇಷಾದ್ರಿಪುರಂ ಇನ್ಸ್ಟಿಟ್ಯೂಟ್‌ ಆಫ್‌ ಕಾಮರ್ಸ್‌ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜಿನ ವಿದ್ಯಾರ್ಥಿ ಅಭಿಷೇಕ್‌ ಶ್ರೀರಾಮ್‌ ಮೂರು ಚಿನ್ನದ ಪದಕ ಹಾಗೂ ಕೃಪಾನಿಧಿ ಕಾಲೇಜ್‌ ಆಫ್‌ ಕಾಮರ್ಸ್‌ ಮತ್ತು ಮ್ಯಾನೇಜ್‌ಮೆಂಟ್‌ ಕಾಲೇಜಿನ ವಿದ್ಯಾರ್ಥಿನಿ ದಿವ್ಯಶ್ರೀ ಎಸ್‌‍. ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಸ್ನಾತಕೋತ್ತರದಲ್ಲಿ ಕಲಾನಿಕಾಯದಲ್ಲಿ 17 ವಿದ್ಯಾರ್ಥಿಗಳು 19 ಚಿನ್ನದ ಪದಕ, ವಿಜ್ಞಾನದಲ್ಲಿ 17 ವಿದ್ಯಾರ್ಥಿಗಳು 24 ಚಿನ್ನದ ಪದಕ, ವಾಣಿಜ್ಯದಲ್ಲಿ 7 ರ್ಯಾಂಕ್‌ ವಿದ್ಯಾರ್ಥಿಗಳು 10 ಚಿನ್ನದ ಪದಕ, ಶಿಕ್ಷಣದಲ್ಲಿ ಒಬ್ಬ ವಿದ್ಯಾರ್ಥಿನಿ ಒಂದು ಚಿನ್ನದ ಪದಕ ಪಡೆದಿದ್ದಾರೆ.

ಸ್ನಾತಕದಲ್ಲಿ ಕಲಾನಿಕಾಯದಲ್ಲಿ 11 ವಿದ್ಯಾರ್ಥಿಗಳು ರ್ಯಾಂಕ್‌ ಪಡೆದು 2 ಚಿನ್ನದ ಪದಕ, ವಿಜ್ಞಾನದಲ್ಲಿ 8 ವಿದ್ಯಾರ್ಥಿಗಳು ರ್ಯಾಂಕ್‌ ಪಡೆದಿದ್ದು, ಒಬ್ಬ ಮಹಿಳೆ ಚಿನ್ನದ ಪದಕ ಗಳಿಸಿದ್ದಾರೆ. ವಾಣಿಜ್ಯದಲ್ಲಿ 8 ವಿದ್ಯಾರ್ಥಿಗಳು ರ್ಯಾಂಕ್‌ ಪಡೆದು 6 ಚಿನ್ನದ ಪದಕ ಗಳಿಸಿದ್ದು, ಶಿಕ್ಷಣದಲ್ಲಿ ಇಬ್ಬರು ಮಹಿಳೆಯರು ರ್ಯಾಂಕ್‌ ಪಡೆದಿದ್ದು ಒಬ್ಬರು ಚಿನ್ನದ ಪದಕ ಪಡೆದಿದ್ದಾರೆ.
ಕುಲಪತಿಗಳಾದ ರಮೇಶ್‌ ಬಿ. ಅವರು ವಿವಿಯ ಸಾಧನೆಯನ್ನು ಬಣ್ಣಿಸಿದರು.

ಘಟಿಕೋತ್ಸವದಲ್ಲಿ ಡಿಆರ್‌ಡಿಒ ಮಹಾ ನಿರ್ದೇಶಕ ಡಾ.ಬಿನಯ್‌ಕುಮಾರ್‌ ದಾಸ್‌‍ ಭಾಷಣ ಮಾಡಿದರು. ವಿವಿಯ ಕುಲಸಚಿವರಾದ ನವೀನ್‌ ಜೋಸೆಫ್‌, ಪ್ರೊ.ರಮೇಶ ಬಿ.ಕುಡೇನಟ್ಟಿ, ವಿವಿಯ ವಿಶ್ರಾಂತ ಕುಲಪತಿಗಳು, ಗಣ್ಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

RELATED ARTICLES

Latest News