ಬೆಂಗಳೂರು, ಮಾ.5- ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾವು ಒಟ್ಟಾಗಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಒಂದೇ ಪಕ್ಷದಲ್ಲಿದ್ದಾರೆ ಸಿದ್ಧಾಂತ ಮತ್ತು ನಾಯಕತ್ವಕ್ಕೆ ಗೌರವ ನೀಡಲು ಬದ್ಧತೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪದೇ ಪದೇ ಇಬ್ಬರು ನಾಯಕರೂ ಒಗ್ಗಟ್ಟು ಪ್ರದರ್ಶಿಸುತ್ತಿರುವ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಆದರೆ ಇಬ್ಬರೂ ನಾಯಕರು ಒಟ್ಟಾಗಿಯೇ ಕೆಲಸ ಮಾಡುತ್ತಿದ್ದಾರೆ. ಈ ಮೊದಲು ವಿರೋಧ ಪಕ್ಷದಲ್ಲಿ ಇದ್ದಾಗಿನಿಂದಲೂ ಜೊತೆಯಾಗಿಯೇ ಕೆಲಸ ಮಾಡಿದ್ದಾರೆ, ಚುನಾವಣೆಗಳಲ್ಲಿ ಒಟ್ಟಾಗಿ ದುಡಿದಿದ್ದಾರೆ ಎಂದು ವಿವರಿಸಿದ್ದಾರೆ.
ತಾವು ಮತ್ತು ಡಿ.ಕೆ.ಶಿವಕುಮಾರ್ ಹಾಲು-ಜೇನಿನಂತೆ ಇದ್ದೇವೆ ಎಂದು ಸಿದ್ದರಾಮಯ್ಯ ಅವರು ಹೇಳಿರುವ ಬಗ್ಗೆ ನನಗೆ ಗೊತ್ತಿಲ್ಲ. ಹಾಲು ಬೇಕಾದರೆ ಡೈರಿ ಸರ್ಕಲ್‌ಗೆ ಬನ್ನಿ. ಜೇನಿನ ಬಗ್ಗೆ ಮಾಹಿತಿಯಿಲ್ಲ. ಅದು ಕೊಡಗು ಹಾಗೂ ಮಳೆನಾಡು ಭಾಗದಲ್ಲಿ ದೊರೆಯುತ್ತದೆ. ಮೈಸೂರ್‌ಪಾಕ್ ಅಥವಾ ಇನ್ಯಾವುದಾದರೂ ಸಿಹಿ ಬೇಕಾದರೆ ಕೆಎಂಎಫ್‌ಗೆ ಬನ್ನಿ ತಿನ್ನಿಸುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.
ಇಬ್ಬರ ನಡುವಿನ ಸಂಬಂಧದ ಬಗ್ಗೆ ಯಾವ ರೀತಿ ಬೇಕಾದರೂ ವಿಶ್ಲೇಷಣೆ ಮಾಡಿಕೊಳ್ಳಲಿ ನಮ ಅಭ್ಯಂತರವಿಲ್ಲ. ಆದರೆ ಒಂದೇ ಪಕ್ಷದಲ್ಲಿರುವು ದರಿಂದಾಗಿ ನಾಯಕತ್ವಕ್ಕೆ ಮತ್ತು ಸಿದ್ಧಾಂತಕ್ಕೆ ಗೌರವ ಕೊಡಲೇಬೇಕಾಗಿದೆ ಎಂದರು.
ಫೋನ್ ಟ್ಯಾಪಿಂಗ್ ಬಗ್ಗೆ ಕುಮಾರಸ್ವಾಮಿ ಅವರು ನೀಡುತ್ತಿರುವ ಹೇಳಿಕೆಗಳು ಅವರ ಅನುಭವ ಇರಬಹುದು. ಮುಖ್ಯಮಂತ್ರಿಯಾಗಿದ್ದ ಅವರು ಈಗ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಇಂತಹ ಯಾವುದೇ ಬೆಳವಣಿಗೆಗಳ ಬಗ್ಗೆಯೂ ಕೇಂದ್ರ ಮತ್ತು ರಾಜ್ಯಸರ್ಕಾರಗಳಿಗೆ ಮಾತ್ರ ಮಾಹಿತಿ ಇರುತ್ತದೆ ಎಂದರು.
ಕೆಪಿಎಸ್‌ಸಿಯಲ್ಲಿ ನೇಮಕಾತಿಯ ಅಕ್ರಮಗಳ ಬಗ್ಗೆ ಶೀಘ್ರವೇ ಅಭ್ಯರ್ಥಿಗಳಿಗೆ ಸೂಕ್ತ ಮಾಹಿತಿ ನೀಡಬೇಕಿದೆ. ಒಂದೇ ಕೊಠಡಿಯಲ್ಲಿ ಅತೀ ಹೆಚ್ಚು ಜನ ಅಂಕ ಗಳಿಸಿ ಪಾಸಾಗಿದ್ದಾರೆ ಎಂದರೆ ಅನುಮಾನ ಬರುವುದು ಸಹಜ. ಅದಕ್ಕೆ ಅವಕಾಶವಾಗದಂತೆ ಸೂಕ್ತ ತನಿಖೆ ನಡೆಸಬೇಕು ಎಂದರು.
ಕಷ್ಟಪಟ್ಟು ಓದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು, ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಅನುಮಾನ ಮೂಡುವಂತಾಗಿದೆ. ಇದನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
