Homeರಾಜ್ಯಬಲಿಷ್ಠ ಕರ್ನಾಟಕಕ್ಕೆ ನವ ಸಂಕಲ್ಪ ಘೋಷಿಸಿದ ಸಿಎಂ ಡಿ ಕೆ ಶಿವಕುಮಾರ್

ಬಲಿಷ್ಠ ಕರ್ನಾಟಕಕ್ಕೆ ನವ ಸಂಕಲ್ಪ ಘೋಷಿಸಿದ ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು, ಸೆ.10: “ಆರೋಗ್ಯ, ಶಿಕ್ಷಣ, ಜಲ ಭದ್ರತೆ, ಹೂಡಿಕೆ ಮತ್ತು ಆರ್ಥಿಕ ಬಲ, ಬೆಂಗಳೂರು ಅಭಿವೃದ್ಧಿ, ಪ್ರದೇಶಿಕ ಸಮತೋಲನ, ಸಾಮಾಜಿಕ ನ್ಯಾಯ, ಬಂಡವಾಳ ಹೂಡಿಕೆ, ಉದ್ಯೋಗಕ್ಕೆ ಆದ್ಯತೆ ನೀಡಿ ಬಲಿಷ್ಠ ಕರ್ನಾಟಕ ನಿರ್ಮಾಣಕ್ಕೆ ನವ ಸಂಕಲ್ಪ ಮಾಡಲಾಗಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಸಿಎಂ ಡಿ ಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡು 100 ದಿನಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ನಡೆದ “ದೃಢ ಕರ್ನಾಟಕದ ಸಂಕಲ್ಪ: ಶತಕದ ಪಥ, ಪ್ರಗತಿಯ ರಥ” ಕಾರ್ಯಕ್ರಮದಲ್ಲಿ ಮಾತನಾಡಿದರು.

“ನಾನು ಹಾಗೂ ಸಿದ್ದರಾಮಯ್ಯ ಅವರು ನಿಮಗೆ ಕೊಟ್ಟ ಭರವಸೆ ಈಡೇರಿಸಿ, ಬಸವಣ್ಣನವರ ತತ್ವದಂತೆ ನುಡಿದಂತೆ ನಡೆದಿದ್ದೇವೆ. ದೇಶವೇ ಮೆಚ್ಚುವಂತೆ ಆಡಳಿತ ನೀಡಿದ್ದೇವೆ. ಈ ರಥವನ್ನು ನಾನು ಒಬ್ಬನೇ ಎಳೆಯುತ್ತಿಲ್ಲ. ಇದು ನಿಮ್ಮ ಸರ್ಕಾರ. ನಾಡಿನ 7 ಕೋಟಿ ಜನರ ಸರ್ಕಾರ. ನೀವು ಕೊಟ್ಟ ಶಕ್ತಿ, ನಮ್ಮ ಮೇಲೆ ಇಟ್ಟಿರುವ ನಂಬಿಕೆ, ಎಲ್ಲಾ ವರ್ಗದ ಜನರ ಬದುಕಲ್ಲಿ ಬದಲಾವಣೆ ತರುತ್ತಿದೆ. ಶತಕದ ಪಥದಲ್ಲಿ ಕರ್ನಾಟಕ ಹೆಜ್ಜೆ ಹಾಕುತ್ತಿದ್ದೂ, ನಾಡಿನ ಅಭಿವೃದ್ಧಿಗೆ ನಾವು ಬದ್ಧವಾಗಿದ್ದೇವೆ. ನಾಡಿನ ನೆಲ, ಜನರ ಶ್ರಮ, ಯುವಕರ ಕನಸೇ ಈ ದೃಢ ಕರ್ನಾಟಕದ ಸಂಕಲ್ಪ” ಎಂದು ಹೇಳಿದರು.

“ಎಲ್ಲಾ 224 ಶಾಸಕರು, 75 ಪರಿಷತ್ ಸದಸ್ಯರು, 28 ಲೋಕಸಭೆ ಸದಸ್ಯರು ಹಾಗೂ 12 ರಾಜ್ಯಸಭೆ ಸದಸ್ಯರು ಒಟ್ಟಾಗಿ ರಾಜ್ಯದ ಪ್ರಗತಿಗೆ ದುಡಿಯಲು ಈ ಸರ್ಕಾರ ಕೆಲಸ ಮಾಡಲಿದೆ. ಯಾರು ಸಹಕಾರ ನೀಡಲಿ ಬಿಡಲಿ, ನಾವು ಸಂವಿಧಾನ ಬದ್ಧವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡುವುತ್ತೇವೆ ಎಂದು ಮಾತು ನೀಡುತ್ತೇನೆ. ರಾಗ, ದ್ವೇಷ, ಅಸೂಯೆ ಇಟ್ಟುಕೊಳ್ಳದೆ, ಸರ್ವರಿಗೂ ಸಮಪಾಲು, ಸಮಬಾಳು ಎಂದು ಕರ್ನಾಟಕದ ಪ್ರಗತಿಯ ರಥವನ್ನು ಮುನ್ನಡೆಸಲು ನಾನು ನಿಮ್ಮ ಮುಂದೆ ನಿಂತಿರುವೆ” ಎಂದು ತಿಳಿಸಿದರು.

ಭೂರಹಿತರಿಗಾಗಿ: ಮನೆರಹಿತ ಪರಿಶಿಷ್ಟರಿಗೆ ಉಚಿತ ಮನೆ ಮತ್ತು ನಿವೇಶನ, ಗ್ರಾಮೀಣ ಭಾಗದಲ್ಲಿ ನಿವೇಶನ ರಹಿತರಿಗೆ 5 ಲಕ್ಷ ನಿವೇಶನ ಹಂಚಿಕೆ

“ಗ್ರಾಮೀಣ ಭಾಗದಲ್ಲಿರುವ ಮನೆರಹಿತ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಉಚಿತ ಮನೆ ಮತ್ತು ನಿವೇಶನ ನೀಡಲು ಸರ್ಕಾರ ತೀರ್ಮಾನಿಸಿದೆ. ಗ್ರಾಮೀಣ ಭಾಗದಲ್ಲಿ ನಿವೇಶನ ರಹಿತ ಕುಟುಂಬಗಳಿಗೆ 5 ಲಕ್ಷ ನಿವೇಶನಗಳ ವಿತರಣೆ, ಪರಿಶಿಷ್ಟರ ವಸತಿ ಪ್ರದೇಶಗಳಲ್ಲಿ ರಸ್ತೆ, ಚರಂಡಿ ಹಾಗೂ ಬೀದಿ ದೀಪಗಳನ್ನು ಮೇಲ್ದರ್ಜೆಗೆ ಏರಿಸುವುದು, ಎರಡು ವರ್ಷಗಳಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ 50 ಸಾವಿರ ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸುವುದು, ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ಉದ್ಯಮಶೀಲತೆ ಮತ್ತು ಕೈಶಲ್ಯವೃದ್ಧಿಗೆ ತರಬೇತಿ ಕೇಂದ್ರಗಳ ಸ್ಥಾಪಿಸಲಾಗುವುದು” ಎಂದು ಭರವಸೆ ನೀಡಿದರು.

ರೈತರು ಮತ್ತು ಕೃಷಿ ಪ್ರಗತಿಗೆ: ನೇಗಿಲ ಯೋಗಿ, ತೇಗದ ಸಿರಿ, ಗ್ರಾಮಾನುಭವ

ರೈತರ ಬದುಕು ಕಷ್ಟಕರವಾಗಿದೆ. ರೈತನಿಗೆ ಸಹಾಯ ಮಾಡಲು ಅನೇಕ ಯೋಜನೆ ತಂದಿದ್ದೇವೆ. ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದಲ್ಲಿ ರಾಜಸ್ಥಾನ ಬಿಟ್ಟರೆ ಕರ್ನಾಟಕ ಅತಿ ಹೆಚ್ಚು ಒಣಭೂಮಿ ಇರುವ ರಾಜ್ಯವಾಗಿದೆ. ಹೀಗಾಗಿ ನಮ್ಮಲ್ಲಿ ಸಾವಿರಾರು ಟ್ರ್ಯಾಕ್ಟರ್ ಗಳಿದ್ದು, 3 ಎಕರೆಗಿಂತ ಕಡಿಮೆ ಭೂಮಿ ಇರುವ ರೈತರಿಗೆ ಸಬ್ಸಿಡಿ ನೀಡಿ ಕಡಿಮೆ ದರದಲ್ಲಿ ಉಳುಮೆ ಮಾಡಲು ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ ತರಲಾಗಿದೆ. ನಗರದ ವಿದ್ಯಾರ್ಥಿಗಳಿಗೆ ಹಳ್ಳಿ ಬದುಕು ಪರಿಚಯಿಸಲು ಗ್ರಾಮಾನುಭವ ಯೋಜನೆ ತರಲಾಗಿದೆ. ಇನ್ನು ರಸ್ತೆ ಬದಿಯಲ್ಲಿ ತೇಗದ ಸಸಿ ನೆಟ್ಟು ಅದನ್ನು ಕಾಪಾಡುವ ಜವಾಬ್ದಾರಿ ರೈತರಿಗೆ ನೀಡುವುದು. ಅದು ಬೆಳೆದು ಕಟಾವು ಬಂದಾಗ ಅದರ ಬೆಲೆಯಲ್ಲಿ 70% ಹಣವನ್ನು ರೈತರಿಗೆ, 30% ಅನ್ನು ಸರ್ಕಾರಕ್ಕೆ ನೀಡಲಾಗುವುದು” ಎಂದು ವಿವರಿಸಿದರು.

ಯುವಕರ ಸಬಲೀಕರಣಕ್ಕೆ: ಭಾರತ ಜೋಡೋ ಯುವ ಸಂಘ, ಉದ್ಯೋಗ ನಿಧಿ, ಯುವ ಉದ್ಯೋಗ ಸೇತು

ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿ 5 ವರ್ಷವಾಗಿದೆ. ಯುವಕರ ಸಬಲೀಕರಣ ಹಾಗೂ ಅವರಲ್ಲಿ ನಾಯಕತ್ವ ಮೂಡಿಸಿ, ರಾಜ್ಯದಲ್ಲಿ ನಶೆ ಮುಕ್ತ ಕರ್ನಾಟಕ ಮಾಡಲು ಸರ್ಕಾರ ಪ್ರತಿ ಪಂಚಾಯ್ತಿಯಲ್ಲಿ ಭಾರತ ಜೋಡೋ ಯುವ ಸಂಘ ಸ್ಥಾಪಿಸಲು ಮುಂದಾಗಿದ್ದೇವೆ. ಗ್ರಾಮೀಣ ಯುವಕರ ಪ್ರತಿಭೆಗೆ ಉತ್ತೇಜನ ನೀಡಲು ರಾಜ್ಯದಲ್ಲಿ 10 ಸಾವಿರ ಸಂಘಗಳನ್ನು ಸ್ಥಾಪಿಸುತ್ತಿದ್ದು ವಾರ್ಷಿಕ 10 ಲಕ್ಷ ಅನುದಾನ ನೀಡಲಾಗುವುದು. ಇದಕ್ಕಾಗಿ 1 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಇಂದಿನಿಂದ ಆಫ್ ಲೈನ್ ಅರ್ಜಿ ಲಭ್ಯವಾಗಲಿದ್ದು, ಕನಿಷ್ಠ 25 ಲಕ್ಷ ಸದಸ್ಯರು ನೋಂದಣಿಯಾಗುವ ನಿರೀಕ್ಷೆ ಇದೆ” ಎಂದು ತಿಳಿಸಿದರು.

“ಉದ್ಯೋಗ ನಿಧಿ ಯೋಜನೆ ಮೂಲಕ ಬೆಂಗಳೂರಿನ ಹೊರಗೆ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿಯಲ್ಲಿ ಉದ್ಯೋಗ ಸೃಷ್ಟಿಸುವವರಿಗೆ ಉದ್ಯೋಗಕ್ಕೆ 2500 ರೂ. ನೀಡಲು ಮುಂದಾಗಿದ್ದೇವೆ. ಯುವ ಉದ್ಯೋಗ ಸೇತು ಮೂಲಕ ಖಾಸಗಿಯಲ್ಲಿ ಖಾಲಿ ಇರುವ ಉದ್ಯೋಗ ಭರ್ತಿಗೆ ಸರ್ಕಾರದ ವತಿಯಿಂದ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಖಾಸಗಿ ಉದ್ಯೋಗಕ್ಕೇ ಅಗತ್ಯವಿರುವ ಕೌಶಲ್ಯಕ್ಕೆ ಅನುಗುಣವಾಗಿ ತರಬೇತಿ ನೀಡಲಾಗುವುದು” ಎಂದು ತಿಳಿಸಿದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಶಕ್ತಿ ತುಂಬಲು 7.5% ಮೀಸಲಾತಿ, 1000 ಪಬ್ಲಿಕ್ ಶಾಲೆಗಳು, ಸಿಎಂ ವಿದ್ಯಾರ್ಥಿ ಸಹಾಯ ಹಸ್ತ

“ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಕ್ತಿ ತುಂಬಲು ಸರ್ಕಾರ ಮುಂದಾಗಿದ್ದು, ಈಗಾಗಲೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ 15.5% ಮೀಸಲಾತಿ ಇದ್ದು, ಅದರಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುವವರಿಗೆ ಉನ್ನತ ಶಿಕ್ಷಣದಲ್ಲಿ 7.5% ಮೀಸಲಾತಿ ನೀಡಲು ಮುಂದಾಗಿದ್ದೇವೆ. ಇದರ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೆ ಜನ ನಗರಗಳಿಗೆ ವಲಸೆ ಬರುವುದನ್ನು ತಪ್ಪಿಸಲು ಗ್ರಾಮೀಣ ಭಾಗದಲ್ಲಿ ಪಂಚಾಯಿತಿ ಮಟ್ಟದಲ್ಲಿ 1000 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಸಿಎಸ್ಆರ್ ನಿಧಿಯಲ್ಲಿ ಈ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು. ನಮ್ಮ ಜಿಲ್ಲೆಯಲ್ಲಿ 20 ಶಾಲೆಗಳನ್ನು ನಿರ್ಮಿಸಲಾಗಿದ್ದು, ಪ್ರತಿ ಶಾಲೆಗೆ 12-15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ವರ್ಷ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಈ ವರ್ಷ ರಾಜ್ಯದಲ್ಲಿ 1 ಸಾವಿರ ಶಾಲೆ ನಿರ್ಮಿಸಲಾಗುವುದು” ಎಂದರು.

ಕೈಗಾರಿಕೆಗಳಿಗೆ ಉತ್ತೇಜನ

“ರಾಜ್ಯದಲ್ಲಿ ಕೈಗಾರಿಕಾ ಪ್ರಗತಿ ಸಾಧಿಸಲು ವೇಗದ ಅನುಮೋದನೆಗಳಿಗೆ ಆದ್ಯತೆ ನೀಡಲಾಗಿದ್ದು, 100 ದಿನಗಳಲ್ಲಿ 43,214 ಕೋಟಿ ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಇನ್ನು ಹಿಂದುಳಿದ ತಾಲ್ಲೂಕುಗಳಲ್ಲಿ ಹೂಡಿಕೆಗೆ ವೇಗವರ್ದನಾ ಪ್ಯಾಕೇಜ್ ನೀಡಲಾಗುವುದು. ಕೈಗಾರಿಕಾ ಪ್ರದೇಶಗಳ ಪಕ್ಕ ಕಾರ್ಮಿಕರಿಗೆ ಅನುಕೂಲವಾಗಲು 15-20% ಜಾಗದಲ್ಲಿ ಶ್ರಮಿಕ ನಿವಾಸ ಯೋಜನೆ ಮೂಲಕ ವಸತಿ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. ಜೊತೆಗೆ ಜವಳಿ ನೀತಿ, ಬಳ್ಳಾರಿ ಜೀನ್ಸ್ ಪಾರ್ಕಿ ಗಳಿಗೆ ಮುಂದಾಗಿದ್ದು, ಏರೋಸ್ಪೇಸ್ ಹಾಗೂ ರಕ್ಷಮಾ ನೀತಿ ರೂಪಿಸಲಾಗಿದೆ. ದೊಡ್ಡ ಬಳ್ಳಾಪುರದಲ್ಲಿ 4 ಸಾವಿರ ಎಕರೆಯಲ್ಲಿ 20 ಸಾವಿರ ಕೋಟಿ ಉತ್ಪಾದನ ಕ್ಲಸ್ಟರ್ ನಿರ್ಮಾಣಕ್ಕೆ ಅನುಮತಿ ನೀಡದ್ದೇವೆ. ವಿದೇಶಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಹಾಗೂ ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಸಚಿವಾಲಯ ಮಾಡಲಾಗುವುದು. ಆಮೂಲಕ ಹೊರಗಿನಿಂದ ಹೂಡಿಕೆಗೆ ಆಸಕ್ತಿ ತೋರುವವರಿಗೆ ಪ್ರೋತ್ಸಾಹ ನೀಡಲಾಗುವುದು” ಎಂದು ವಿವರಿಸಿದರು.

“ನಾವು ಎಐ ಯುಗಕ್ಕೆ ಕಾಲಿಡುತ್ತಿದ್ದೇವೆ. ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಮುಂದಿನ ಪೀಳಿಗೆಯನ್ನು ತಯಾರು ಮಾಡಲು ಭಾರತದಲ್ಲಿ ಮೊದಲ ಸರ್ಕಾರಿ ಪ್ರಾಯೋಜಿತ ಎಐ ವಿವಿ ಸ್ಥಾಪಿಸಲು ಮುಂದಾಗಿದ್ದೇವೆ. ಜೊತೆಗೆ 6ನೇ ತರಗತಿಯಿಂದ ಮಕ್ಕಳಿಗೆ ಎಐ ಶಿಕ್ಷಣ ನೀಡಲು ತೀರ್ಮಾನಿಸಿದ್ದೇವೆ” ಎಂದು ತಿಳಿಸಿದರು.

“ಆರೋಗ್ಯಕರ ರಾಜ್ಯ ನಿರ್ಮಿಸಲು ಎಲ್ಲಾ ತಾಲ್ಲೂಕುಗಳಲ್ಲಿ ಟೆಲಿ ಐಸಿಯು ಸ್ಥಾಪನೆ, ಶೆ ಮುಕ್ತ ಕರ್ನಾಟಕಕ್ಕೆ ರೈಸ್ ಹಾಗೂ ಬೇಡ ಬ್ರೋ ಎಂಬ ಅಭಿಯಾನ ಮಾಡಲಾಗುತ್ತಿದೆ, ಆರೋಗ್ಯ ಸ್ಪಂದನ ಕಾರ್ಯಕ್ರಮ ಮಾಡಲಾಗಿದೆ. ನಮ್ಮ ಹೆಚ್ ಕೆ ಪಾಟೀಲ್ ಅವರ ಕ್ಷೇತ್ರದಲ್ಲಿ ಸ್ಮಶಾನಗಳಿಗೆ ಮುಕ್ತಿವನ ಎಂಬ ರೂಪ ನೀಡಿದ್ದಾರೆ. ಅದೇ ರೀತಿ ರಾಜ್ಯದಲ್ಲಿ 1 ಸಾವಿರ ರುದ್ರಭೂಮಿಗಳನ್ನು ಅಭಿವೃದ್ಧಿ ಮಾಡಲು ತೀರ್ಮಾನಿಸಿದ್ದೇವೆ” ಎಂದು ಹೇಳಿದರು.

“ಬೆಂಗಳೂರಿನಿಂದಾಚೆ ಕೈಗಾರಿಕೆ ಅಭಿವೃದ್ಧಿಗೆ ಬಿಯಾಂಡ್ ಬೆಂಗಳೂರು ಪರಿಕಲ್ಪನೆ ಹಮ್ಮಿಕೊಂಡಿದ್ದೇವೆ. ಇದಕ್ಕಾಗಿ ಕರಾವಳಿ ಮತ್ತು ಮಲೆನಾಡು ಪ್ರವಾಸೋದ್ಯಮ ನೀತಿ ರೂಪಿಸುತ್ತಿದ್ದೇವೆ. ಇನ್ನು ಎರಡನೇ ಹಂತದ ನಗರಗಳಾದ ಕಲಬುರ್ಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಹಾಗೂ ಮೈಸೂರಿನಲ್ಲಿ 5 ಜಾಗತಿಕ ತಂತ್ರಜ್ಞಾನ ಕೇಂದ್ರ ಸ್ಥಾಪಿಸಲಾಗುವುದು” ಎಂದು ಭರವಸೆ ನೀಡಿದರು.

“ರಾಜ್ಯದ ಜನ ತಮ್ಮ ಕಷ್ಟಗಳನ್ನು ಬಗೆಹರಿಸಿಕೊಳ್ಳಲು ವಿಧಾನಸೌಧ, ಮಂತ್ರಿಗಳು, ಶಾಸಕರ ಕಚೇರಿ, ಸರ್ಕಾರಿ ಕಚೇರಿ ಅಲೆದಾಡುವುದನ್ನು ತಪ್ಪಿಸಲು ತೀರ್ಮಾನಿಸಿದೆ. ಸರ್ಕಾರವೇ ಜನರ ಮನೆ ಬಾಗಿಲಿಗೆ ಆಡಳಿತವನ್ನು ತೆಗೆದುಕೊಂಡು ಹೋಗಿ ಕಾನೂನು ಚೌಕಟ್ಟಿನಲ್ಲಿ ಅವರ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ. ಅದಕ್ಕಾಗಿ ಪ್ರಜಾಸೇವೆ ಇಲಾಖೆ ಆರಂಭಿಸಲಾಗಿದೆ. ನಾನು ಚಾಲನೆ ನೀಡಿದ ಕಾರ್ಯಕ್ರಮದಲ್ಲಿ 30 ಸಾವಿರ ಅರ್ಜಿಗಳು ಬಂದಿವೆ. ಜನ ಪಿಂಚಣಿ, ಪೋಡಿ, ಖಾತೆ, ನಿವೇಶನ ಸೇರಿ ಅನೇಕ ಸಮಸ್ಯೆ ಹೇಳಿಕೊಂಡಿದ್ದಾರೆ. ಪ್ರತಿ ಮಂತ್ರಿಗಳು ತಮ್ಮ ಜಿಲ್ಲೆಗಳಲ್ಲಿ ಈ ಅಭಿಯಾನ ಮಾಡಬೇಕು. ಜನರ ಕಷ್ಟ ನಿವಾರಣೆ ಮಾಡಬೇಕು. ಶಾಸಕರು ಪಂಚಾಯಿತಿ ಮಟ್ಟದಲ್ಲಿ ಹೋಗಬೇಕು. ಶಾಸಕರು ಹೋಗದಿದ್ದರೆ ಅಧಿಕಾರಿಗಳು ಹೋಗಿ ಜನರಿಗೆ ಸ್ಪಂದಿಸಬೇಕು” ಎಂದು ವಿವರಿಸಿದರು.

“ನಮ್ಮ ಸರ್ಕಾರ 6ನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡುತ್ತಿದೆ. ಕಂದಾಯ ಸಚಿವರಾಗಿದ್ದಾಗ ಕೃಷ್ಣ ಬೈರೇಗೌಡರು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ನಮ್ಮ ಈ ಯೋಜನೆ ನೋಡಿ ಕೇಂದ್ರ ಸರ್ಕಾರ ಅಚ್ಚರಿಪಟ್ಟಿದೆ. ಬೆಂಗಳೂರಿನಲ್ಲಿ 26 ಲಕ್ಷ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಮಾಡಲಾಗುತ್ತಿದೆ. ರಾಜ್ಯದಲ್ಲಿ 1 ಕೋಟಿಗೂ ಹೆಚ್ಚು ಆಸ್ತಿ ದಾಖಲೆ ಪೋಡಿ ಮಾಡಲು ಮುಂದಾಗಿದೆ. ಕರ್ನಾಟಕವನ್ನು ದೇಶದಲ್ಲೇ ವೇಗವಾಗಿ ಬೆಳೆಯುತ್ತಿರುವ ರಾಜ್ಯವನ್ನಾಗಿಸುವುದಕ್ಕಷ್ಟೇ ನನ್ನ ದೃಷ್ಟಿಕೋನ ಸೀಮಿತವಾಗಿಲ್ಲ. ಬದಲಿಗೆ ನಾಳಿನ ಭಾರತಕ್ಕೆ ಕರ್ನಾಟಕ ರಾಜ್ಯವನ್ನು ಮಾದರಿಯನ್ನಾಗಿ ಮಾಡುವುದಾಗಿದೆ” ಎಂದು ಸಂದೇಶ ನೀಡಿದರು.

“ಕರ್ನಾಟಕದ ಆರ್ಥಿಕತೆಯನ್ನು 2037 ರ ವೇಳೆಗೆ 1 ಟ್ರಿಲಿಯನ್ ಗೆ ತಲುಪಿಸುವ ಶೇ 5 ಕ್ಕಿಂತ ಕಡಿಮೆ ಅಪೌಷ್ಟಿಕತೆ, ಮಕ್ಕಳು ಶಾಲೆ ತೊರೆಯುವಿಕೆ ಮತ್ತು ಬಡತನವನ್ನು ಶೂನ್ಯಕ್ಕೆ ಇಳಿಸುವ ಮಹಾ ಸಂಕಲ್ಪಗಳನ್ನು ಮಾಡಿದ್ದೇವೆ. ನನಗೆ ಕೆಲವು ಮಾಧ್ಯಮದವರು ಇಷ್ಟೆಲ್ಲಾ ಮಾಡಲು ಸಾಧ್ಯವೇ ಎಂದು ಕೇಳಿದರು. ನನ್ನಿಂದ ಸಾಧ್ಯವಾಗುವುದಕ್ಕೆ ಮಾತ್ರ ನಾನು ಕೈಹಾಕುತ್ತೇನೆ. ಪಂಚಗ್ಯಾರಂಟಿ ಯೋಜನೆ ಜಾರಿ ಅಸಾಧ್ಯ ಎಂದರು, ಅದನ್ನು ಸಾಧ್ಯವಾಗಿಸಿ ತೋರಿಸಿದ್ದೇವೆ” ಎಂದು ತಿಳಿಸಿದರು.

“ಮೇಕೆದಾಟು ಯೋಜನೆ ಸೇರಿದಂತೆ ರಾಜ್ಯದ ಜಲ ಭದ್ರತೆಗೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು. ಉತ್ತರ ಕರ್ನಾಟಕದ ಮಹದಾಯಿ ಯೋಜನೆಗೆ ಸಣ್ಣ ಅಡೆತಡೆ ಇದೆ. ಇದನ್ನು ನಿವಾರಿಸಲು ಕೇಂದ್ರ ಸಚಿವರು ಹಾಗೂ ಸಂಸದರು ಪ್ರಯತ್ನಪಡುತ್ತಿಲ್ಲ. ಅವರ ಬದ್ಧತೆ ಬಗ್ಗೆ ನಮಗೆ ಪ್ರಶ್ನೆಗಳಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಲಾಲ್ ಬಾಗ್ ಮಾದರಿಯ 5 ಉದ್ಯಾನಗಳನ್ನು ನಿರ್ಮಿಸುವ ಉದೇಶವಿದೆ. ಅರಣ್ಯ ಇಲಾಖೆ ಜಾಗಗಳಲ್ಲಿ ಈ ಯೋಜನೆ ಮಾಡಲು ಸರ್ಕಾರ ಮುಂದಾಗಿದೆ” ಎಂದು ತಿಳಿಸಿದರು.

“ನಮ್ಮ ಗುರಿ ದೃಢ ಕರ್ನಾಟಕ. ಆರ್ಥಿಕವಾಗಿ ಸದೃಢ, ಸಾಮಾಜಿಕವಾಗಿ ಸಶಕ್ತ, ತಂತ್ರಜ್ಞಾನದಲ್ಲಿ ಮುಂದುವರಿದ ಮತ್ತು ಮೌಲ್ಯಗಳಲ್ಲಿ ಆಳವಾಗಿ ಬೇರೂರಿದ ಕರ್ನಾಟಕ. ಇದಕ್ಕೆ ನಿಮ್ಮೆಲ್ಲರ ಸಹಕಾರ ನೀಡಬೇಕು. ನಾನು ಮುಖ್ಯಮಂತ್ರಿ ಮಾತ್ರವಲ್ಲ, ಪ್ರಜಾ ಸೇವಕ. 24/7 ನಿಮ್ಮ ಸೇವೆಗೆ ಬದ್ಧವಾಗಿದ್ದೇನೆ. ಭ್ರಷ್ಟಾಚಾರರಹಿತ ಆಡಳಿತ ನೀಡಲು ಸಹಕಾರ ನೀಡಿ. ವಿರೋಧ ಪಕ್ಷದವರಿಗೆ ಸಹಕಾರ ಕೇಳಿದೆ. ಆದರೆ ಅವರಿಗೆ ರಾಜಕಾರಣವೇ ಮುಖ್ಯವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರೈತರ ವಿಚಾರ ಹಾಗೂ ಕಸ್ತೂರಿ ರಂಗನ್ ವಿಚಾರವಾಗಿ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಲಾಗಿದೆ” ಎಂದು ಪುನರುಚ್ಛರಿಸಿದರು.

ನೂರು ದಿನಗಳ ಹೆಜ್ಜೆಗುರುತು ಮೆಲುಕು

“ನಾನು ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ಮೊದಲ ದಿನವೇ ಸಂಚಿವ ಸಂಪುಟದಲ್ಲಿ ಚರ್ಚೆ ಮಾಡಿ, ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, 10 ಸಾವಿರ ಭಾರತ ಜೋಡೋ ಯುವ ಸಂಘಗಳ ಘೋಷಣೆ, 2,400 ಚ.ಅಡಿಗಳಷ್ಟು ವಸನಿ ಕಟ್ಟಡಗಳಿಗೆ ಒಸಿ, ಸಿಸಿ ವಿನಾಯಿತಿ, ಬಿ ಖಾತಾಯಿಂದ ಎ ಖಾತ ಪರಿವರ್ತನೆ ರಾಜ್ಯದಾದ್ಯಂತ ವಿಸ್ತರಣೆ, ಖಾಲಿ ಇರುವ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಚಾಲನೆ, ಬೆಂಗಳೂರಿನ ರಸ್ತೆ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಗಿತ್ತು. ನಂತರ ರಾಜ್ಯದಲ್ಲಿ ರೌಡಿ ನಿಗ್ರಹ ದಳ ಸ್ಥಾಪಿಸಿ, ಸಂಘಟಿತ ಅಪರಾಧ, ಗೂಂಡಾಗಿರಿ, ಸುಲಿಗೆ ಮಾಡುವವರನ್ನು ಮಟ್ಟಹಾಕಲು ತೀರ್ಮಾನಿಸಲಾಗಿದೆ” ಎಂದರು.

“ಅಂತರರಾಜ್ಯ ನೀರು ಹಂಚಿಕೆ ಸಂಬಂಧ ತುಂಗಭದ್ರಾ ಅಣೆಕಟ್ಟಿನ ಎಲ್ಲಾ 33 ಹೊಸ ಗೇಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು ಒಂದೆಡೆ ಸೇರಿ ಸೌಹಾರ್ದತೆಯ ಸಂದೇಶ ಸಾರಲಾಯಿತು. ಇದು ನನ್ನ ಬದುಕಿನ ಅತ್ಯಂತ ಆತ್ಮತೃಪ್ತಿಯ ಹೆಜ್ಜೆಯಾಗಿದೆ. ಇನ್ನು ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ನ್ಯಾಯಸಮ್ಮತ ತೆರಿಗೆ ಹಂಚಿಕೆ, ನೀರಿನ ಹಕ್ಕು, ರಾಜಕೀಯ ಪ್ರಭಾವ ರಕ್ಷಣೆಯ ಬಗ್ಗೆ ಧ್ವನಿ ಎತ್ತಲಾಯಿತು” ಎಂದು ಮೆಲುಕು ಹಾಕಿದರು.

ಮೂರು ವರ್ಷಗಳ ಸಾಧನೆ ಅನಾವರಣ
ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದ ಜನರಿಗೆ ಜೇಬಿಗೆ 1.45 ಕೋಟಿ ವೆಚ್ಚ

“ನಾವು ಕಳೆದ ಮೂರು ವರ್ಷಗಳಲ್ಲಿ ಜನ, ನೀತಿ, ಪ್ರಗತಿಯ ಮೂಲ ವಿಚಾರದ ಮೇಲೆ ರಾಜ್ಯವನ್ನು ಕಟ್ಟಿದ್ದೇವೆ. ಜನರನ್ನು ಬದುಕು ಬದಲಿಸಲು ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆ ಮೂಲಕ ₹1,45,416 ಕೋಟಿ ನೀಡಿದ್ದೇವೆ. ಇವು ಅತಿ ದೊಡ್ಡ ಸಾಮಾಜಿಕ ಭದ್ರತೆ ಕಾರ್ಯಕ್ರಮವಾಗಿದೆ. ಈ ಯೋಜನೆಗಳ ಜಾರಿ ಸಾಧ್ಯವಿಲ್ಲ ಎಂದು ಎಷ್ಟೇ ಟೀಕೆ ಮಾಡಿದರೂ ನಾವು ಸಾಧಿಸಿ ತೋರಿಸಿದ್ದೇವೆ. 1.24 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಮೂಲಕ ಈವರೆಗೂ 76,951 ಕೋಟಿ ರೂ. ನೀಡಲಾಗಿದ್ದು, ಪ್ರತಿ ಮಹಿಳೆಗೆ 66 ಸಾವಿರ ರೂ. ತಲುಪಿದೆ. 2 ತಿಂಗಳ ಕಂತು ಬಾಕಿ ಇದೆ. ಗೃಹಜ್ಯೋತಿ ಯೋಜನೆ ಮೂಲಕ 1.67 ಕೋಟಿ ಮನೆಗಳನ್ನು ಬೆಳಗಿಸಲಾಗುತ್ತಿದೆ. ಈ ಯೋಜನೆಗೆ 30,522 ಕೋಟಿ ರೂ. ವೆಚ್ಚ ಮಾಡಲಾಗಿದೆ. ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂಬ ಸಿದ್ದರಾಮಯ್ಯ ಅವರ ಕನಸು ಅನ್ನಭಾಗ್ಯ ಯೋಜನೆ. ಈ ಯೋಜನೆ ಮೂಲಕ 4.44 ಕೋಟಿ ಜನರಿಗೆ ತಿಂಗಳಿಗೆ 10 ಕೆ.ಜಿ ಅಕ್ಕಿ ನೀಡುತ್ತಿದ್ದು, 21,054 ಕೋಟಿ ರೂ. ವೆಚ್ಚ ಮಾಡಲಾಗಿದೆ. ಶಕ್ತಿ ಯೋಜನೆ ಮೂಲಕ ರಾಜ್ಯದಲ್ಲಿ ಮಹಿಳೆಯರು 821 ಕೋಟಿ ಉಚಿತ ಪ್ರಯಾಣ ಮಾಡಿದ್ದು, ಇದಕ್ಕಾಗಿ 15,735 ಕೋಟಿ ವೆಚ್ಚ ಮಾಡಲಾಗಿದೆ. ಯುವ ನಿಧಿ ಯೋಜನೆ ಮೂಲಕ 3.72 ಲಕ್ಷ ಯುವಕರಿಗೆ ನಿರುದ್ಯೋಗ ಭತ್ಯೆ ಮೂಲಕ 1,154 ಕೋಟಿ ರೂ. ನೀಡಲಾಗಿದೆ” ಎಂದು ವಿವರಿಸಿದರು.

“ನಮ್ಮ ಸರ್ಕಾರ ಈವರೆಗೂ 2.70 ಕೋಟಿ ಜನರಿಗೆ 1,41,210 ಕೋಟಿ ರೂ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡುವ ಮೂಲಕ ಪಾರದರ್ಶಕ ಆಡಳಿತ ನೀಡಿದೆ. ಎಸ್ ಸಿಪಿ ಟಿಎಸ್ ಪಿ ಯೋಜನೆ ಮೂಲಕ ಪ್ರಸಕ್ತ ವರ್ಷ 42,018 ಕೋಟಿ ರೂ ನೀಡಲಾಗಿದೆ. ಈ ವರ್ಷ 28.63 ಲಕ್ಷ ರೈತರಿಗೆ ಶೂನ್ಯ ಮತ್ತು ಕಡಿಮೆ ಬಡ್ಡಿ ದರದಲ್ಲಿ 25,652 ಕೋಟಿ ರೂ. ಸಾಲ ನೀಡಲಾಗಿದೆ. ರಾಜ್ಯದಲ್ಲಿ 17,073 ಕೋಟಿ ರೂ ಮೊತ್ತದ 121 ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಾರ್ಷಿಕ ಅನುದಾನವನ್ನು 3 ಸಾವಿರ ಕೋಟಿಯಿಂದ 5 ಸಾವಿರ ಕೋಟಿಗೆ ಏರಿಕೆ ಮಾಡಲಾಗಿದೆ” ಎಂದು ಹೇಳಿದರು.

“ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದ್ದು, ಗೃಹ ಆರೋಗ್ಯ ಯೋಜನೆ ಮೂಲಕ 88 ಲಕ್ಷ ಮಂದಿಗೆ ಮನೆಗಳಲ್ಲೇ ಆರೋಗ್ಯ ತಪಾಸಣೆ ಮಾಡಲಾಗಿದೆ. ಹೃದಯ ಜ್ಯೋತಿ ಯೋಜನೆ ಮೂಲಕ 21,659 ಹೃದಯಾಘಾತ ಪ್ರಕರಣಗಳನ್ನು ಅನಾಹುತಕ್ಕೂ ಮುನ್ನ ಪತ್ತೆ ಮಾಡಲಾಗಿದೆ. ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸಲು ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ವಿತರಣೆ ಮಾಡಲಾಗಿದೆ” ಎಂದು ಹೇಳಿದರು.

“ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 2.53 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು, ವಿದೇಶಿ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ದೇಶದಲ್ಲೇ 2ನೇ ಸ್ಥಾನ ಪಡೆಯಲಾಗಿದೆ. ಈವರೆಗೂ 6 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ. ರಾಜ್ಯದ ಜಿಡಿಪಿ 32.81 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು 8.1%ರಷ್ಟು ಪ್ರಗತಿ ಸಾಧಿಸಿ, ರಾಷ್ಟ್ರದ ಪ್ರಗತಿಗಿಂತ ಮುನ್ನಡೆ ಸಾಧಿಸಲಾಗಿದೆ” ಎಂದು ತಿಳಿಸಿದರು.

RELATED ARTICLES
spot_img

Latest News