Homeರಾಜ್ಯಬೆಂಗಳೂರಿಗರ ಸಮಸ್ಯೆಗಳ ಪರಿಹಾರಕ್ಕೆ ಸಹಾಯ 3.0 ತಂತ್ರಾಂಶ

ಬೆಂಗಳೂರಿಗರ ಸಮಸ್ಯೆಗಳ ಪರಿಹಾರಕ್ಕೆ ಸಹಾಯ 3.0 ತಂತ್ರಾಂಶ

ಬೆಂಗಳೂರು, ಸೆ.10- ನಗರದ ಸಾರ್ವಜನಿಕ ಸಮಸ್ಯೆಗಳಿಗೆ ತ್ವರಿತ, ಪಾರದರ್ಶಕ ಹಾಗೂ ಪರಿಣಾಮಕಾರಿ ಪರಿಹಾರ ನೀಡುವ ಉದ್ದೇಶದಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸಹಾಯ 3.0 ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿದ್ದು, ನಾಗರಿಕರು ಫೋಟೋ, ಸ್ಥಳ ಮಾಹಿತಿ ಹಾಗೂ ಧ್ವನಿ ಸಂದೇಶದ ಮೂಲಕವೂ ದೂರು ದಾಖಲಿಸುವ ಹೊಸ ವ್ಯವಸ್ಥೆಗೆ ಮುಂದಾಗಿದೆ.

ಜಿಬಿಎ ಕೇಂದ್ರ ಕಚೇರಿಯ ನೌಕರರ ಭವನದಲ್ಲಿ ಸಹಾಯ 3.0 ತಂತ್ರಾಂಶ ಹಾಗೂ ರಸ್ತೆ ಇನ್‌ಫ್ರಾಸ್ಟ್ರಕ್ಚರ್‌ ಮ್ಯಾನೇಜ್‌ಮೆಂಟ್‌‍ ಸಿಸ್ಟಮ್‌ ಕುರಿತು ನಾಗರಿಕರೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ನಾಗರಿಕರ ಸಲಹೆ ಪಡೆದು ಹೊಸ ತಂತ್ರಾಂಶವನ್ನು ಇನ್ನಷ್ಟು ಜನಸ್ನೇಹಿಯಾಗಿ ರೂಪಿಸಲಾಗುವುದು ಎಂದು ತಿಳಿಸಿದರು.

ಈಗಾಗಲೇ ಜಾರಿಯಲ್ಲಿರುವ ಸಹಾಯ 2.0 ತಂತ್ರಾಂಶದಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದ್ದು, ಸಹಾಯ 3.0 ಮೂಲಕ ದೂರು ದಾಖಲಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲಾಗುತ್ತಿದೆ. ವಿಶೇಷವಾಗಿ ದೂರುದಾರರು ಟೈಪ್‌ ಮಾಡುವ ಬದಲು ಧ್ವನಿ ಸಂದೇಶದ ಮೂಲಕವೇ ತಮ್ಮ ಸಮಸ್ಯೆಯನ್ನು ದಾಖಲಿಸಲು ಅವಕಾಶ ಕಲ್ಪಿಸುವ ಚಿಂತನೆ ನಡೆದಿದೆ ಎಂದು ಹೇಳಿದರು.

ಹೊಸ ತಂತ್ರಾಂಶದಲ್ಲಿ ವಿವಿಧ ಭಾರತೀಯ ಭಾಷೆಗಳಲ್ಲಿ ದೂರು ದಾಖಲಿಸುವ ಅವಕಾಶ, ಧ್ವನಿ ಆಧಾರಿತ ದೂರು ನೋಂದಣಿ, ಕಡಿಮೆ ಇಂಟರ್‌ನೆಟ್‌ ವೇಗದಲ್ಲಿಯೂ ಬಳಕೆಯ ಸೌಲಭ್ಯ ಸೇರಿದಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗುತ್ತಿದೆ. ಆಯ್ದ ಪ್ರಕರಣಗಳಲ್ಲಿ ಅನಾಮಧೇಯವಾಗಿ ದೂರು ಸಲ್ಲಿಸುವ ವ್ಯವಸ್ಥೆ, ಸಮರ್ಪಕವಾಗಿ ಪರಿಹಾರವಾಗದ ದೂರುಗಳನ್ನು ಸುಲಭವಾಗಿ ಮರುತೆರೆಯುವ ಅವಕಾಶ ಹಾಗೂ ದೂರು ಮುಕ್ತಾಯಗೊಳಿಸುವ ಮುನ್ನ ಸಮಸ್ಯೆ ನಿಜವಾಗಿಯೂ ಪರಿಹಾರವಾಗಿದೆಯೇ ಎಂಬುದನ್ನು ನಾಗರಿಕರಿಂದ ದೃಢೀಕರಿಸುವ ವ್ಯವಸ್ಥೆಯೂ ಸಹಾಯ 3.0ನಲ್ಲಿ ಇರಲಿದೆ.

ನಗರದ ಜಿಐಎಸ್‌‍ ಆಧಾರಿತ ರಸ್ತೆ ಜಾಲದೊಂದಿಗೆ ಸಂಪರ್ಕ ಹೊಂದಿರುವ ಈ ವ್ಯವಸ್ಥೆಯಲ್ಲಿ ಎಲ್ಲಾ ರಸ್ತೆ ಕಾಮಗಾರಿಗಳ ಮಾಹಿತಿಯನ್ನು ದಾಖಲಿಸಿ, ವಾರಕ್ಕೊಮ್ಮೆ ಅವುಗಳ ಪ್ರಗತಿಯನ್ನು ನವೀಕರಿಸಿ ಮೇಲ್ವಿಚಾರಣೆ ಮಾಡಲು ಸಾಧ್ಯವಾಗಲಿದೆ.

ಸಹಾಯ 3.0 ಮೂಲಕ ದೂರು ದಾಖಲಿಸಿದ ಕ್ಷಣದಿಂದ ಅಂತಿಮ ಪರಿಹಾರ ಹಾಗೂ ಮುಕ್ತಾಯದವರೆಗೆ ಪ್ರತಿಯೊಂದು ಹಂತವೂ ನಾಗರಿಕರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಮಾಡುವುದರ ಜೊತೆಗೆ, ಅಧಿಕಾರಿಗಳ ಜವಾಬ್ದಾರಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ.ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಹಾಜರಿದ್ದರು.

RELATED ARTICLES
spot_img

Latest News