ವಿ.ರಾಮಸ್ವಾಮಿಕಣ್ವ
ಬೆಂಗಳೂರು ಎಂದಾಕ್ಷಣ ಥಟ್ ಅಂತ ನೆನಪಿಗೆ ಬರು ವುದು ಸಂಚಾರ ದಟ್ಟಣೆ. ನಗರದ ಯಾವುದೇ ರಸ್ತೆಗಳಲ್ಲಿ ಸಂಚರಿಸಿದರೂ ಟ್ರಾಫಿಕ್ ಜಾಮ್…ಜಾಮ್…
ಈ ಸಿಲಿಕಾನ್‌ಸಿಟಿಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಸಂಚಾರ ನಿಯಮಗಳ ಉಲ್ಲಂಘನೆಯ ಸಂಖ್ಯೆಗಳೂ ಆತಂಕಕಾರಿ ಮಟ್ಟದಲ್ಲಿ ಏರು ತ್ತಿವೆ.
ಸಿಗ್ನಲ್ ಜಂಪ್, ಹೆಲೆಟ್ ಹಾಕಿಕೊಳ್ಳದೇ ಚಾಲನೆ, ನೋ ಪಾರ್ಕಿಂಗ್ ಮತ್ತು ಫುತ್‌ಪಾತ್‌ಗಳಲ್ಲಿ ವಾಹನಗಳ ನಿಲುಗಡೆ, ಮೊಬೈಲ್ ಬಳಕೆ, ಟ್ರಿಪಲ್ ರೈಡಿಂಗ್, ಅತಿ ವೇಗ ಮತ್ತು ಅಜಾಗರೂಕ ಚಾಲನೆ, ಪಾದಚಾರಿ ಮಾರ್ಗಗಳಲ್ಲಿ ವಾಹನ ಚಾಲನೆ ಸೇರಿದಂತೆ 40ಕ್ಕೂ ಹೆಚ್ಚು ಸಂಚಾರ ಅಪರಾಧ ಪ್ರಕರಣಗಳಿವೆ.ಇವುಗಳಲ್ಲಿ ಅತಿ ವೇಗ ಮತ್ತು ಅಜಾಗರೂಕ ಚಾಲನೆ ಮತ್ತು ಫುಟ್‌ಪಾತ್‌ಗಳಲ್ಲಿ ವಾಹನ ಚಾಲನೆ ವರ್ಷದಿಂದ ವರ್ಷಗಳಿಗೆ ಹೆಚ್ಚಾಗುತ್ತಿವೆ.
ಫುಟ್‌ಪಾತ್‌ನಲ್ಲಿ ಚಾಲನೆ
ಅತ್ಯಂತ ಅಪಾಯಕಾರಿ ಚಾಲನೆ ಇದು. ರಾಜಧಾನಿ ಬೆಂಗಳೂರು ನಗರದಲ್ಲಿ ಮೈಸೂರು ನಗರದಲ್ಲಿ ಇರುವಂತೆ ವಿಶಾಲ ರಸ್ತೆಗಳಿಲ್ಲ. ಫುಟ್‌ಪಾತ್‌ಗಳಂತೂ ಇಲ್ಲವೇ ಇಲ್ಲ.ಕಿರಿದಾಗಿ ಇರುವ ಫುಟ್‌ಪಾತ್‌ಗಳೂ ಸಹ ಸರಿಯಾಗಿ ಇಲ್ಲ. ಹಳ್ಳ, ದಿಣ್ಣೆ ಮತ್ತು ಗುಂಡಿಗಳಿಂದ ಕೂಡಿವೆ. ಈ ರಸ್ತೆಗಳಲ್ಲಿ ಪಾದಚಾರಿಗಳು ನಡೆದು ಹೋಗುವುದೇ ಕಷ್ಟ.
ನಗರದ ಬಹುತೇಕ ಕಡೆಗಳಲ್ಲಿ ಸಿಗ್ನಲ್‌ಗಳಿವೆ. ಈ ಸಿಗ್ನಲ್‌ನಿಂದ ಬಹಳ ಹಿಂದೆ ನಿಂತಿರುವವರು ಬೇಗ ಹೋಗಬೇಕೆಂದು ಫುಟ್‌ಪಾತ್ ಮೇಲೆ ವಾಹನ ಹತ್ತಿಸಿ ಚಾಲನೆ ಮಾಡಿಕೊಂಡು ಮುಂದೆ ಚಲಾಯಿಸುತ್ತಾರೆ. ಇದರಲ್ಲಿ ದ್ವಿಚಕ್ರ ವಾಹನ ಸವಾರರೇ ಹೆಚ್ಚು.
ಫುಟ್‌ಪಾತ್‌ಗಳನ್ನು ಮೂಲತಃ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕಾಗಿ ನಿರ್ಮಿಸ ಲಾಗಿದೆಯೇ ಹೊರತು ವಾಹನ ಸವಾರರಿಗಲ್ಲ ಎಂಬುದನ್ನು ಪ್ರತಿಯೊಬ್ಬ ಸವಾರರು ಅರಿತು ಕೊಳ್ಳಬೇಕು.
ಸಂಚಾರದಟ್ಟಣೆ ಬೆಂಗಳೂರು ನಗರದ ಪ್ರಮುಖ ಸಮಸ್ಯೆ ಎಂಬುದು ನಿಜ. ಆದರೆ ಕೆಲವು ನಿಮಿಷಗಳನ್ನು ಉಳಿಸುವ ಉದ್ದೇಶದಿಂದ ಫುಟ್‌ಪಾತ್ ಮೇಲೆ ವಾಹನ ಚಲಾಯಿ ಸುವುದು ಘನಘೋರ ಅಪ ರಾಧ.
ಬಹುತೇಕ ರಸ್ತೆ ಮತ್ತು ಸರ್ಕಲ್‌ಗಳಲ್ಲಿ ಪೊಲೀಸರು ಇಲ್ಲ ಎಂದು ಕೆಲವು ಸವಾರರು ವಾಹನಗಳನ್ನು ಫುಟ್‌ಪಾತ್ ಮೇಲೆ ಚಲಾಯಿಸಿಕೊಂಡು ಹೋಗುವುದು ಬೆಂಗಳೂರು ನಗರದಲ್ಲಿ ಸರ್ವೇ ಸಾಮಾನ್ಯ ವಾಗಿದೆ.ಅಯ್ಯೋ ಸ್ವಾಮಿ!… ನಗರದ ಬಹುತೇಕ ರಸ್ತೆ ಮತ್ತು ಸರ್ಕಲ್‌ಗಳಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಯನ್ನು ಪತ್ತೆ ಹಚ್ಚಲೆಂದೇ ನಗರ ಸಂಚಾರಿ ಪೊಲೀಸರು ಸಿಸಿ ಕ್ಯಾಮೆರಾ, ಎಐ ಆಧಾರಿತ ಎಂಎನ್‌ಪಿಆರ್ ಕ್ಯಾಮೆರಾಗಳು ಹಾಗೂ ಇನ್ನಿತರ ತಂತ್ರಜ್ಞಾನಾಧರಿತ ಕ್ಯಾಮೆರಾಗಳನ್ನು ಅಳವಡಿಸಿ ದ್ದಾರೆ.
ಈ ಕ್ಯಾಮೆರಾಗಳು ವೇಗದ ಮಿತಿ ಹಾಗೂ ಇನ್ನಿತರ ನಿಯಮ ಉಲ್ಲಂಘನೆಯಾದ ತಕ್ಷಣವೇ ಫೋಟೊ ಸಹಿತ ದಾಖಲಿಸಿಕೊಳ್ಳುತ್ತವೆ. ಜೋಕೆ ! 2025 ರಲ್ಲಿ 18,887 ಫುಟ್‌ಪಾತ್‌ನಲ್ಲಿ ವಾಹನ ಚಾಲನೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ವರ್ಷದ ಮೊದಲ ಏಳು ತಿಂಗಳಿನಲ್ಲಿ 14, 330 ಪ್ರಕರಣಗಳನ್ನು ದಾಖಲಿಸಿ ಕೊಳ್ಳಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಪ್ರಕರಣಗಳ ಸಂಖ್ಯೆ ಎರಡು ಪಟ್ಟಿಗಿಂತ ಹೆಚ್ಚು ದಾಖಲಾಗುವ ಸಾಧ್ಯತೆಯಿದೆ.

ಸಂಚಾರಿ ಪೊಲೀಸರು ರಸ್ತೆ ಬದಿಗಳಲ್ಲಿ ಲೇಸರ್ ಸ್ಪೀಡ್‌ಗಳನ್ನು ಬಳಸಿ ಚಲಿಸುವ ವಾಹನಗಳ ವೇಗವನ್ನು ಸ್ಥಳದಲ್ಲೇ ಪರಿಶೀಲಿಸಿ ದಂಡ ವಿಧಿಸುತ್ತಾರೆ.ಪದೇಪದೇ ವೇಗದ ಮಿತಿ ಮೀರಿದರೆ ಅಥವಾ ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿದರೆ ದಂಡದ ಮೊತ್ತ ಹೆಚ್ಚಾಗುವುದು. ಜೊತೆಗೆ ಚಾಲನಾ ಪರವಾನಗಿಯನ್ನೂ ಸಹ ಅಮಾನತು ಮಾಡಲಾಗುತ್ತದೆ.
ಕೃಷ್ಣ ಭೈರೇಗೌಡರು ಬೆಂಗ ಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿ ಕೊಂಡ ನಂತರ ನಗರದಲ್ಲಿ ಒತ್ತುವರಿಯಾಗಿದ್ದ ಬಹುತೇಕ ಫುಟ್‌ಪಾತ್‌ಗಳನ್ನು ತೆರವುಗೊಳಿ ಸಿದ್ದಾರೆ.
ಈ ಹಿಂದೆ ಇದ್ದ ಅಂಗಡಿ, ಮಿನಿ ಹೋಟೆಲ್‌ಗಳು, ಬೂತ್‌ಗಳು, ಟ್ರಾನ್‌್ಸಫಾರಂಗಳು ಸೇರಿದಂತೆ ಮುಂತಾದವುಗಳನ್ನು ತೆಗೆಸಿದ್ದಾರೆ. ಈಗ ವಿಶಾಲವಾಗಿದೆ ಎಂದು ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿದರೆ ಎರಡು ಪಟ್ಟಿಗೂ ಹೆಚ್ಚಿನ ದಂಡ ತೆರಬೇಕಾಗುತ್ತದೆ. ಎಚ್ಚರ. ಒಬ್ಬ ವಾಹನ ಸವಾರ/ಚಾಲಕನ ಕೆಲವೇ ನಿಮಿಷಗಳ ಆತುರ ಮತ್ತೊಬ್ಬರ ಜೀವನವನ್ನೇ ಕಸಿದುಕೊಳ್ಳಬಹುದು. ಹೀಗಾಗಿ ಬೆಂಗಳೂರು ನಗರದ ರಸ್ತೆಗಳಲ್ಲಿ ವೇಗಕ್ಕಿಂತ ಸುರಕ್ಷತೆ, ಆತುರಕ್ಕಿಂತ ನಿಯಮಕ್ಕೆ ಹಾಗೂ ವಾಹನಕ್ಕಿಂತ ಮನುಷ್ಯರ ಜೀವನಕ್ಕೆ ಆದ್ಯತೆ ನೀಡಬೇಕಾಗಿದೆ.
ಅಜಾಗರೂಕ ಚಾಲನೆ
ಕೆಲವರು ವಾಹನ ಚಾಲನೆ ಮಾಡುವಾಗ ಎಲ್ಲೋ ಯೋಚನೆ ಮಾಡುತ್ತಿರುತ್ತಾರೆ ಮತ್ತೆ ಕೆಲವರು ಸಹ ಪ್ರಯಾಣಿಕರ ಜೊತೆ ಹರಟೆ ಹೊಡೆಯುತ್ತಾ ಕೇಕೆ ಹಾಕುತ್ತಾರೆ. ಕಿವಿಗೆ ಬ್ಲೂಟೂತ್, ಈಯರ್ ಫೋನ್ ಹಾಕಿಕೊಂಡು ಮಾತನಾಡುತ್ತಾ ಅಥವಾ ಹಾಡುಗಳನ್ನು ಕೇಳಿಕೊಂಡು ಚಾಲನೆ ಮಾಡುತ್ತಾರೆ. ಈ ರಸ್ತೆ ಯಲ್ಲಿ ನಾನೊಬ್ಬನೇ ವಾಹನ ಚಲಾ ಯಿಸುತ್ತಿರುವುದು ಎಂಬ ಭ್ರಮೆ ಯಲ್ಲಿ ಇರುತ್ತಾರೆ.ಇಂತಹ ಅಜಾಗರೂಕ ಚಾಲನೆ ಚಾಲಕ/ಸವಾರನನ್ನಷ್ಟೇ ಅಲ್ಲದೆ ಆ ರಸ್ತೆಯಲ್ಲಿ ಸಂಚರಿಸುತ್ತಿರುವ ಇನ್ನಿತರ ವಾಹನಗಳ ಚಾಲಕರು/ಸವಾರರಿಗೆ ಅಪಾಯ ಉಂಟಾ ಗುತ್ತದೆ.
ಅತಿ ವೇಗದ ಚಾಲನೆ
ನಗರದ ಪ್ರಮುಖ ರಸ್ತೆಗಳಲ್ಲಿ ಹೊರ ವರ್ತುಲ ಹಾಗೂ ಸಂಪರ್ಕ ರಸ್ತೆಗಳಲ್ಲಿ ಅತಿ ವೇಗದ ಚಾಲನೆ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ.ಮನೆಯಿಂದ ಕಚೇರಿಗೆ ಹೋಗಲು, ಯಾರನ್ನೋ ನಿಗದಿತ ಸಮಯಕ್ಕೆ ಭೇಟಿ ಮಾಡಲು ಅಥವಾ ಬೇಗ ಮನೆ ಸೇರಿಕೊಳ್ಳುವ ದಾವಂತದಲ್ಲಿ ಕೆಲವರು ತಮ ವಾಹನಗಳನ್ನು ಅತಿವೇಗದಲ್ಲಿ ಓಡಿಸುತ್ತಾರೆ.
ನಗರದ ಕೆಲವು ರಸ್ತೆಗಳ ಬದಿಯಲ್ಲಿ ಎಲ್ಲರೂ ಕಾಣುವಂತೆ ಈ ರಸ್ತೆಯಲ್ಲಿ ಇಂತಿಷ್ಟೇ ವೇಗದಲ್ಲಿ ವಾಹನಗಳ ಚಾಲನೆ ಮಾಡಬೇಕೆಂದು ಸಂಚಾರಿ ಪೊಲೀಸರು ಸೂಚನಾ ಫಲಕಗಳನ್ನು ಹಾಕಿದ್ದಾರೆ. ಆದರೆ ಸವಾರರು/ಚಾಲಕರು ಅದನ್ನು ಲೆಕ್ಕಿಸದೆ ಚಾಲನೆ ಮಾಡುತ್ತಾರೆ. ಅದರಲ್ಲೂ ರಾತ್ರಿ ಮತ್ತು ಮುಂಜಾನೆ ಸಮಯದಲ್ಲಿ ರಸ್ತೆ ಖಾಲಿ ಇದೆ ಎಂದು ಕೆಲವರು ಮಿತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ವಾಹನಗಳನ್ನು ವೇಗವಾಗಿ ಚಲಾಯಿಸುತ್ತಾರೆ.
ವೇಗವಾಗಿ ವಾಹನ ಚಲಾಯಿಸುವಾಗ ಚಾಲಕ ಅಥವಾ ಸವಾರನಿಗೆ ತಮ ವಾಹನದ ಮೇಲಿನ ನಿಯಂತ್ರಣ ಕಡಿಮೆಯಾಗುತ್ತದೆ. ಆಗ ಅಚಾನಕ್ ಆಗಿ ಎದುರಾಗುವ ಪ್ರಾಣಿ, ಪಾದಚಾರಿ ಅಥವಾ ವಾಹನಗಳನ್ನು ತಪ್ಪಿಸಲು ಸಾಧ್ಯವಾಗದೇ ಅಪಘಾತ ಸಂಭವಿಸುತ್ತಿವೆ. ಇದರಿಂದ ಕೆಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಅಂಗವಿಕಲರಾಗಿ ನರಳುತ್ತಿದ್ದಾರೆ.
