ಬೆಂಗಳೂರು,ಸೆ.10- ಬಹುನಿರೀಕ್ಷಿತ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆ ಮಸೂದೆ 2026 ಅನ್ನು ಕರ್ನಾಟಕದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ತಡೆಹಿಡಿದಿದ್ದು, ಮಸೂದೆಯ ಕೆಲ ಮಹತ್ವದ ನಿಬಂಧನೆಗಳ ಕುರಿತು ಸ್ಪಷ್ಟೀಕರಣ ಕೋರಿರುವುದು ರಾಜ್ಯದ ರಿಯಲ್ ಎಸ್ಟೇಟ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಆಗಸ್ಟ್ 24 ರಂದು ಶಾಸಕಾಂಗದಲ್ಲಿ ಅಂಗೀಕರಿಸಲ್ಪ ಟ್ಟಿದ್ದ ಈ ಮಸೂದೆಯು, ರಾಜ್ಯದ ಅಪಾರ್ಟ್‌ಮೆಂಟ್ ನಿವಾಸಿಗಳ ಹಕ್ಕುಗಳು ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ತರುವ ಗುರಿ ಹೊಂದಿತ್ತು.
ಭೂಮಿ, ಲಾಬಿಗಳು, ಮೆಟ್ಟಿಲು ಗಳು, ಲಿಫ್ಟ್ ಗಳು, ಕಾರಿಡಾರ್‌ಗಳು ಮತ್ತು ಟೆರೇಸ್‌ಗಳಂತಹ ಹಂಚಿಕೆಯ ಸೌಲಭ್ಯಗಳು ನಿರ್ದಿಷ್ಟ ಅಸೋಸಿಯೇಷನ್ ನಿಯಂತ್ರಣಕ್ಕಿಂತ ಹೆಚ್ಚಾಗಿ, ಎಲ್ಲಾ ಅಪಾರ್ಟ್‌ಮೆಂಟ್ ಮಾಲೀಕರಿಗೆ ಸಾಮೂಹಿಕವಾಗಿ ಸೇರಬೇಕು ಎಂದು ಮಸೂದೆ ಪ್ರತಿಪಾದಿಸುತ್ತದೆ.
ಹಳೆಯ ಕಟ್ಟಡಗಳ ಸುರಕ್ಷತೆಯ ದೃಷ್ಟಿಯಿಂದ, ಕಟ್ಟಡವು 30 ವರ್ಷಗಳನ್ನು ಪೂರ್ಣಗೊಳಿಸಿದ ಬಳಿಕ ಪ್ರತಿ ಐದು ವರ್ಷಗಳಿಗೊಮೆ ರಚನಾತಕ ಸ್ಥಿರತೆ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಶೇ.75ರಷ್ಟು ಅಪಾರ್ಟ್‌ಮೆಂಟ್ ಮಾಲೀಕರ ಒಪ್ಪಿಗೆಯ ಮೇರೆಗೆ ಕಟ್ಟಡದ ಪುನರಾಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ನಿರ್ಧಾರವನ್ನು ವಿರೋಧಿಸುವ ಮಾಲೀಕರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ಅವಕಾಶವಿದೆ.
ಎಂಟು ಯೂನಿಟ್‌ಗಳಿಗಿಂತ ಹೆಚ್ಚು ಇರುವ ಎಲ್ಲಾ ವಸತಿ ಯೋಜನೆಗಳಿಗೆ ಈ ಕಾನೂನು ಅನ್ವಯಿಸಲಿದ್ದು, ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ವಿಶೇಷ ವಿವಾದ-ಪರಿಹಾರ ಕಾರ್ಯವಿಧಾನವನ್ನು ರೂಪಿಸಲಾಗಿದೆ.
