Sunday, April 12, 2026
Homeರಾಜ್ಯಅಸಮರ್ಥ, ಸೋಮಾರಿ ಸಚಿವರ ತಲೆದಂಡಕ್ಕೆ ಸಿಎಂ ಸಿದ್ದರಾಮಯ್ಯ ಚಿಂತನೆ

ಅಸಮರ್ಥ, ಸೋಮಾರಿ ಸಚಿವರ ತಲೆದಂಡಕ್ಕೆ ಸಿಎಂ ಸಿದ್ದರಾಮಯ್ಯ ಚಿಂತನೆ

CM Siddaramaiah to drop incompetent and lazy ministers from the cabinet

ಬೆಂಗಳೂರು, ಮಾ.12- ಕಾಂಗ್ರೆಸ್‌‍ ಶಾಸಕಾಂಗ ಸಭೆಯಲ್ಲಿ ಸಚಿವರ ವರ್ತನೆಗಳ ಬಗ್ಗೆ ತೀವ್ರ ಆಕ್ರೋಶಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲವರ ತಲೆದಂಡಕ್ಕೆ ಮುಂದಾಗಿದ್ದಾರೆ. ಸಚಿವರು, ಶಾಸಕರುಗಳಿಗೆ ಸ್ಪಂದಿಸುತ್ತಿಲ್ಲ. ಸರ್ವಾಧಿಕಾರಿ ಧೋರಣೆ ಆನುಸರಿಸುತ್ತಿದ್ದಾರೆ. ಭೇಟಿಯಾಗಲೂ ಲಭ್ಯವಾಗುತ್ತಿಲ್ಲ ಎಲ್ಲವೂ ಸೇರಿದಂತೆ ಆಕ್ಷೇಪಗಳನ್ನು ಆಡಳಿತ ಶಾಸಕರು ವ್ಯಕ್ತಪಡಿಸಿದ್ದಾರೆ.

ಪೊಲೀಸ್‌‍ ಸೇರಿದಂತೆ ಅಧಿಕಾರಿಗಳ ವರ್ಗಾವಣೆಯಲ್ಲೂ ಸಚಿವರು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಶಾಸಕರ ಮಾತಿಗೆ ಮನ್ನಣೆ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಸಭೆಯಲ್ಲೇ ಕೆಲವು ಶಾಸಕರ ನಡುವೆಯೇ ಸಂಘರ್ಷ ಮಾತುಕತೆಗಳು ನಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಚಿವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿರುವುದರಿಂದಾಗಿ ಅಸಮರ್ಥ ಸಚಿವರ ತಲೆದಂಡದ ಮನ್ಸೂಚನೆ ದೊರೆತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ನಾಯಕತ್ವದ ಬದಲಾವಣೆ ಲಕ್ಷಣಗಳು ಕಂಡು ಬರುತ್ತಿಲ್ಲ. ಹಿರಿಯ ಶಾಸಕರು ಇಂದು ಪ್ರತ್ಯೇಕ ಸಭೆ ನಡೆಸುವ ಮುನ್ನ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಬ್ಬರ ಜೊತೆಯಲ್ಲೂ ಚರ್ಚೆ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರು, ಹಿರಿಯ ಶಾಸಕರಿಗೆ ಅವಕಾಶ ಕಲ್ಪಿಸಬೇಕಾದರೆ, ಸಂಪುಟದಲ್ಲಿರುವ ಕೆಲ ಸಚಿವರನ್ನು ಕೈಬಿಡಬೇಕು. ಆ ರೀತಿಯ ಪುನರ್‌ರಚನೆಗೆ ಹೈಕಮಾಂಡ್‌ ಒಪ್ಪಿಗೆ ಸೂಚಿಸಬೇಕು. ಈ ನಿಟ್ಟಿನಲ್ಲಿ ದೆಹಲಿಗೆ ಹೋದಾಗ ವರಿಷ್ಠರ ಮೇಲೆ ಒತ್ತಡ ಹೇರುವಂತೆ ಸಿದ್ದರಾಮಯ್ಯ ಹಿರಿಯ ಶಾಸಕರ ನಿಯೋಗಕ್ಕೆ ಸಲಹೆ ನೀಡಿದ್ದಾರೆ.

ಇತ್ತ ಡಿ.ಕೆ.ಶಿವಕುಮಾರ್‌ ಕೂಡ ತಾವು ಮುಖ್ಯಮಂತ್ರಿಯಾದರೆ, ಸಂಪುಟದಲ್ಲಿ ಈಗ ಸಚಿವರಾಗಿರುವ 29 ಮಂದಿಯನ್ನು ಕೈಬಿಟ್ಟು, ಹೊಸಬರಿಗೆ ಹೊಸ ಅವಕಾಶ ನೀಡುತ್ತೇನೆ. ನಾಯಕತ್ವದ ಗೊಂದಲವನ್ನು ಶೀಘ್ರ ಪರಿಹರಿಸುವಂತೆ ಹೈಕಮಾಂಡ್‌ ಬಳಿ ಒತ್ತಡ ಹೇರಿ ಎಂದು ಹಿರಿಯ ಶಾಸಕರ ನಿಯೋಗದ ಬಳಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸದ್ಯದ ಮಟ್ಟಿಗೆ ನಾಯಕತ್ವ ಬದಲಾವಣೆಯಾಗಲಿ, ಸಂಪುಟ ಪುನರ್‌ರಚನೆ ಸುಳಿವಾಗಲಿ ಇಲ್ಲ. ಆದರೆ ಸಿದ್ದರಾಮಯ್ಯ ಅವರು, ಕೆಲಸ ಮಾಡದೇ ಇರುವ ಅಸಮರ್ಥ ಹಾಗೂ ಜವಾಬ್ದಾರಿ ರಹಿತ ಸಚಿವರನ್ನು ಕೈಬಿಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ನಿನ್ನೆ ಶಾಸಕಾಂಗ ಸಭೆಯಲ್ಲಿ ಸದಸ್ಯರುಗಳ ಆಕ್ರೋಶದ ಮಾತುಗಳನ್ನು ಕೇಳಿದ ನಂತರವಂತೂ ಸಿದ್ದರಾಮಯ್ಯ ಸಂಪುಟ ಪುನರ್‌ರಚನೆ ಅನಿವಾರ್ಯ ಎಂಬ ನಿಲುವಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಹೈಕಮಾಂಡ್‌ ಸಿದ್ದರಾಮಯ್ಯ ಅವರಿಗೆ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ ಎಂಬ ವದಂತಿಗಳಿವೆ. ಒಮೆ ಸಂಪುಟ ಪುನರ್‌ರಚನೆಯಾದರೆ, ನಾಯಕತ್ವದ ಬದಲಾವಣೆಯ ಚರ್ಚೆಗಳು ತಣ್ಣಗಾಗಲಿವೆ. ಅದಕ್ಕಾಗಿ ಡಿ.ಕೆ.ಶಿವಕುಮಾರ್‌ ಸಂಪುಟ ಪುನರ್‌ರಚನೆಗೆ ಅವಕಾಶ ನೀಡದಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತಿದ್ದಾರೆ.

ಬೇರೆ ಬೇರೆ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್‌‍ ಹೈಕಮಾಂಡ್‌ ಸದ್ಯಕ್ಕೆ ಕರ್ನಾಟಕ ರಾಜಕಾರಣದ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಹೀಗಾಗಿ ಹಿಟ್‌ ಲಿಸ್ಟ್‌ನಲ್ಲಿರುವ ಸಚಿವರು ಸದ್ಯಕ್ಕೆ ಇನ್ನೂ ಮೂರ್ನಾಲ್ಕು ತಿಂಗಳು ನಿರಾಳವಾಗಿರಬಹುದೆಂದು ಹೇಳಲಾಗುತ್ತಿದೆ.

RELATED ARTICLES

Latest News