ಬೆಂಗಳೂರು, ಮೇ 4- ಪಂಚ ರಾಜ್ಯಗಳ ಚುನಾವಣೆಗಳ ಪೈಕಿ ಪಶ್ಚಿಮ ಬಂಗಾಳ ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಕೆಲಸ ನಡೆದಿದೆ. ಕೇರಳದಲ್ಲಿ ಕಾಂಗ್ರೆಸ್ ನಿರೀಕ್ಷೆ ಮೀರಿ ಗೆಲುವು ಕಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಜನ ದಿನದ ಅಂಗವಾಗಿ ವಿಧಾನಸೌಧದ ಮುಂದಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಎರಡು ವಿಧಾನಸಭೆಯ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ನಮದೇ ಕಾರಣಗಳಿಂದಾಗಿ ದಾವಣಗೆರೆ ದಕ್ಷಿಣದಲ್ಲಿ ನಮಗೆ ಸ್ವಲ್ಪ ಹಿನ್ನಡೆಯಾಗುತ್ತಿದೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇದೆ ಎಂದರು.
ದೇಶದ ಪಂಚ ರಾಜ್ಯಗಳ ಚುನಾವಣಾ ಪೈಕಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಸಾಮರ್ಥ್ಯ ಕಡಿಮೆ ಇದ್ದು, ಅಸ್ಸಾಂನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ. ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಕೇರಳದಲ್ಲಿ 75 ರಿಂದ 80 ಸ್ಥಾನ ಗೆಲ್ಲಬಹುದು ಎಂದು ಕೊಂಡಿದ್ದೆವು. ಅದನ್ನು ಮೀರಿ 95 ಕಡೆ ಗೆಲ್ಲುತ್ತಿದ್ದೇವೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಮತ್ತು ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆ ಫಲಿತಾಂಶದ ಮೇಲೆ ಪರಿಣಾಮ ಬೀರಿರಬಹುದು ಎಂದರು.ತಮಿಳುನಾಡಿನಲ್ಲಿ ಗೆಲುವಿನತ್ತ ಧಾವಿಸಿರುವ ನಟ ಹಾಗೂ ಟಿವಿಕೆ ಪಕ್ಷದ ಮುಖಂಡ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಿದ್ದರಾಮಯ್ಯ ಹೇಳಿದರು.
ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಜನ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಸ್ವತಂತ್ರ್ಯ ನಂತರ ಮೊದಲ ಮುಖ್ಯಮಂತ್ರಿಯಾಗಿ 5 ವರ್ಷ ಅಧಿಕಾರ ನಡೆಸಿದ್ದರು. ಸಂವಿಧಾನ ಜಾರಿಯಾದ ಬಳಿಕ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾಗಿದ್ದರು. ಕೆ.ಸಿ.ರೆಡ್ಡಿ ಸಮರ್ಥ ಆಡಳಿತಗಾರರಾಗಿದ್ದರು.
ಮೈಸೂರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು. ಅವರಿಂದಾಗಿಯೇ ಕಾಂಗ್ರೆಸ್ ಇಂದು ಬಲಿಷ್ಠವಾಗಿ ಕೇಂದ್ರ ಮತ್ತು ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದರು.
ರಾಜ್ಯದಲ್ಲಿ ಎಚ್‌ಎಂಟಿ, ಐಟಿಐ ಇಸ್ರೋದಂತಹ ಸಂಸ್ಥೆಗಳು ಕರ್ನಾಟಕದಲ್ಲಿ ಆರಂಭವಾಗಲು ಕೆ.ಸಿ.ರೆಡ್ಡಿ ಅವರ ಪಾತ್ರ ಬಹುಮುಖ್ಯವಾಗಿತ್ತು. ಕೇಂದ್ರದಲ್ಲೂ ಕೈಗಾರಿಕಾ ಸಚಿವರಾಗಿ ಕೆಲಸ ಮಾಡಿದ್ದರು ಎಂದು ಹೇಳಿದರು.
ಸಮರ್ಥ ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದರು. ಅವರ ಆಡಳಿತ ನಮೆಲ್ಲರಿಗೂ ಮಾದರಿಯಾಗಿದೆ ಎಂದರು.
