Homeರಾಜ್ಯರಾಜೀನಾಮೆ ಬಳಿಕವೂ ಸಿದ್ದರಾಮಯ್ಯ ನಿವಾಸದ ಮುಂದೆ ಜನಜಂಗುಳಿ, ತಗ್ಗದ ಜನಪ್ರಿಯತೆ

ರಾಜೀನಾಮೆ ಬಳಿಕವೂ ಸಿದ್ದರಾಮಯ್ಯ ನಿವಾಸದ ಮುಂದೆ ಜನಜಂಗುಳಿ, ತಗ್ಗದ ಜನಪ್ರಿಯತೆ

Crowds gather outside Siddaramaiah's residence even after resignation

ಬೆಂಗಳೂರು, ಮೇ 30- ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾಜಿಯಾದ ಬಳಿಕವೂ ಮನೆಯ ಮುಂದೆ ಜನಜಂಗುಳಿ, ಅಹವಾಲು ಸಲ್ಲಿಕೆ ನಿಂತಿಲ್ಲ.
ಸಾಮಾನ್ಯವಾಗಿ ಮಾಜಿಯಾದವರ ಮನೆಯ ಮುಂದೆ ನಾಯಕರ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಸಿದ್ದರಾಮಯ್ಯ ಅವರ ಮನೆಯಲ್ಲಿ ಇಂದು ಕೂಡ ಜನಜಂಗುಳಿ ನೆರೆದಿತ್ತು.

ಸಚಿವ ಸಂಪುಟದಲ್ಲಿ ಅವಕಾಶ ಗಿಟ್ಟಿಸಲು ಶಾಸಕರು, ವಿಧಾನ ಪರಿಷತ್‌ ಸದಸ್ಯರು, ವಿಧಾನ ಪರಿಷತ್‌, ರಾಜ್ಯಸಭೆ ಚುನಾವಣೆಗಳಲ್ಲಿ ಅವಕಾಶ ಗಿಟ್ಟಿಸುವ ಆಕಾಂಕ್ಷಿಗಳು, ನಿಗಮ ಮಂಡಳಿಗಳಲ್ಲಿ ಹುದ್ದೆ ಪಡೆಯಲು ಕಾರ್ಯಕರ್ತರು ಹಾಗೂ ಎರಡನೇ ಸಾಲಿನ ನಾಯಕರು ನಿರಂತರವಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತಲೇ ಇದ್ದಾರೆ.

ಪದತ್ಯಾಗ ಮಾಡಿದ ಬಳಿಕವೂ ಸಿದ್ದರಾಮಯ್ಯ ಹೈಕಮಾಂಡ್‌ ಮಟ್ಟದಲ್ಲಿ ಪ್ರಭಾವಿಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಆತೀಯವಾಗಿ ಸಂಧಿಸಿ ಕಳುಹಿಸಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರ ಪಾತ್ರ ಹೊಸ ಸರ್ಕಾರದಲ್ಲೂ ಪ್ರಮುಖವಾಗಿರಬಹುದು ಎಂದು ಭಾವಿಸಿ ನಾಯಕರು ಎಡತಾಕುತ್ತಲೇ ಇದ್ದಾರೆ. ಅನೇಕ ಶಾಸಕರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸಂಪುಟದಲ್ಲಿ ತಮಗೂ ಅವಕಾಶ ಕೊಡಿಸುವಂತೆ ಮನವಿ ಮಾಡಿದ್ದಾರೆ.

ತಗ್ಗದ ಜನಪ್ರಿಯತೆ:
ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವುದು ವಿಶೇಷವೇನಲ್ಲ, ಆದರೆ ಜನ ಸಾಮಾನ್ಯರು ಎಂದಿನಂತೆ ಇಂದೂ ಮುಖ್ಯಮಂತ್ರಿಯವರ ಮನೆಯ ಬಳಿ ಕಾಣಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಗಿತ್ತು.

ಸದ್ಯಕ್ಕೆ ಸಿದ್ದರಾಮಯ್ಯ ಅವರು ನೀಡಿರುವ ರಾಜೀನಾಮೆ ಅಂಗೀಕಾರವಾಗಿದೆ. ಸಚಿವ ಸಂಪುಟ ವಿಸರ್ಜನೆಗೊಂಡಿದೆ. ಪ್ರಸ್ತುತ ಸಂದರ್ಭದಲ್ಲಿ ಕಾರ್ಯಾಂಗವೇ ಮೇಲುಗೈ ಹೊಂದಿದೆ. ಶಾಸಕಾಂಗ ಭಾಗಶಃ ತಟಸ್ಥವಾಗಿದೆ. ಹೊಸ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡು, ಸಚಿವ ಸಂಪುಟ ಅಸ್ತಿತ್ವಕ್ಕೆ ಬರುವವರೆಗೂ ರಾಜಕಾರಣಿಗಳ ಪಾತ್ರ ಅಷ್ಟು ಪ್ರಮುಖವಾಗಿರುವುದಿಲ್ಲ.

ಮೇಲಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ಅಧಿಕಾರ ಎಂಬ ಶಸ್ತ್ರ ತ್ಯಾಗ ಮಾಡಿದ್ದಾರೆ. ಆದರೂ ಜನರ ಮನಸ್ಸಿನಲ್ಲಿ ಈಗಲೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂಬ ಭಾವನೆ ಇದೆ. ಅವರಿಗೆ ಮನವಿ ಕೊಟ್ಟರೆ ಸಮಸ್ಯೆ ಬಗೆ ಹರಿಯುತ್ತದೆ ಎಂಬ ನಂಬಿಕೆ ದಟ್ಟವಾಗಿದೆ. ಅದಕ್ಕಾಗಿ ಎಂದಿನಂತೆ ಅಧಿಕೃತ ನಿವಾಸ ಕಾವೇರಿಯಲ್ಲಿ ಶ್ರೀಸಾಮಾನ್ಯರು ಸಾಲು ಗಟ್ಟಿ ನಿಂತಿದ್ದರು.

ಮನೆ ಮುಂದಿನ ಜನರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಸಾವಧಾನದಿಂದ ಅಹವಾಲು ಆಲಿಸಿದರು. ಅರ್ಜಿ ಸ್ವೀಕರಿಸಿದರು. ಮುಖ್ಯಮಂತ್ರಿಯಾಗಿದ್ದಾಗ ಕಾರ್ಯದೊತ್ತಡಡದಲ್ಲಿ ಲಗುಬಗೆಯಿಂದ ಅರ್ಜಿ ಪಡೆದು ಆಪ್ತ ಕಾರ್ಯದರ್ಶಿಗಳ ಕೈಗೆ ಕೊಡುತ್ತಿದ್ದ ಸಿದ್ದರಾಮಯ್ಯ, ಇಂದು ಕೆಲವರ ಅರ್ಜಿಗಳನ್ನು ಪಡೆದು ಓದಿದರು. ಇನ್ನೂ ಕೆಲ ಗಂಭೀರ ಸಮಸ್ಯೆಗಳ ಅರ್ಜಿದಾರರಿಗೆ ನಾನು ಈಗ ಮುಖ್ಯಮಂತ್ರಿ ಅಲ್ಲ. ರಾಜೀನಾಮೆ ನೀಡಿದ್ದೇನೆ. ಹೊಸ ಮುಖ್ಯಮಂತ್ರಿ ಬರುವವರೆಗೂ ಹಂಗಾಮಿಯಾಗಿರುತ್ತೇನಷ್ಟೆ. ನೀವು ಹೊಸ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಎಂದು ಸಲಹೆ ನೀಡಿದರು. ಆದರೂ ಕೆಲವರು ಅದನ್ನು ಕೇಳಿಸಿಕೊಳ್ಳದೆ, ನೀವೇ ಪರಿಹಾರ ದೊರಕಿಸಬೇಕು ಎಂದು ದುಂಬಾಲು ಬಿದ್ದಿದ್ದಾರೆ.

ಈವರೆಗಿನ ಎಲ್ಲಾ ಮುಖ್ಯಮಂತ್ರಿಗಳಿಗಿಂತಲೂ ಸಿದ್ದರಾಮಯ್ಯ ಶ್ರೀಸಾಮಾನ್ಯರಿಗೆ ಹೆಚ್ಚು ಸುಲಭವಾಗಿ ಲಭ್ಯವಾಗುತ್ತಿದ್ದರು. ತಮ ಸುತ್ತಲೂ ಬಿಗಿ ಭದ್ರತೆ ಇದ್ದ ಹೊರತಾಗಿಯೂ ಜನಸಾಮಾನ್ಯರು ಅಹವಾಲು ಹೇಳಿಕೊಳ್ಳಲು ಬಂದಿದ್ದರೆ ತಾವೇ ಅವರ ಬಳಿ ಹೋಗಿ ವಿಚಾರಿಸುತ್ತಿದ್ದರು.

ಸಿದ್ದರಾಮಯ್ಯ ಅವರ ಕಚೇರಿಯ ನಿವಾಸಕ್ಕೆ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಗುತ್ತಿಗೆದಾರರಿಗೆ ಪ್ರವೇಶ ಕೊಂಚ ಕಷ್ಟವಾಗುತ್ತಿತ್ತು, ಆದರೆ ಮುಖ್ಯಮಂತ್ರಿ ಊರಿನಲ್ಲಿ ಇದ್ದಾರೆ ಎಂದಾದರೆ ಶ್ರೀಸಾಮಾನ್ಯರಿಗೆ ಗೃಹ ಕಚೇರಿ ಕೃಷ್ಣಾಗೆ ಪ್ರವೇಶ ಸುಲಭಕ್ಕೆ ದೊರೆಯುತ್ತಿತ್ತು. ಇದರಿಂದಾಗಿಯೇ ಸಿದ್ದರಾಮಯ್ಯ ಜನ ಪ್ರಿಯ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡಿದ್ದಾರೆ.

RELATED ARTICLES

Latest News