ಬೆಂಗಳೂರು, ಮೇ 12- ನಾಯಕತ್ವ ಬದಲಾವಣೆಯಾದ ಬೆನ್ನಲ್ಲೆ ಹೊಸ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಮೂರ್ನಲ್ಕು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಕೆಲ ಶಾಸಕರು ಇಂದು ಶಾಸಕಾಂಗ ಸಭೆಯ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಮರಳಿದರು.
ಪ್ರಸ್ತುತ ಸಚಿವ ಸಂಪುಟ ವಿಸರ್ಜನೆಗೊಂಡಿದೆ, ಎಲ್ಲರೂ ಮಾಜಿಗಳಾಗಿದ್ದಾರೆ. ಹೊಸ ಸರ್ಕಾರದಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ. ಯಾರು ಸಂಪುಟದಿಂದ ಹೊರಗುಳಿಯಲಿದ್ದಾರೆ ಎಂಬುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮಾಜಿ ಸಚಿವ ಎಂ.ಬಿ.ಪಾಟೀಲ್, ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶಿವರಾಜ ತಂಗಡಗಿ, ಆಹಾರ ಮತ್ತು ನಾಗರೀಕ ಪೂರೈಕೆ ಮಾಡಿ ಸಚಿವ ಕೆ.ಹೆಚ್.ಮುನಿಯಪ್ಪ ಸೇರಿದಂತೆ ಇನ್ನೂ ಕೆಲವರು ದೆಹಲಿಯಲ್ಲೇ ಬೀಡು ಬಿಟ್ಟಿದ್ದರು. ಶಾಸಕಾಂಗ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ವಾಪಾಸ್ಸಾಗಿದ್ದಾರೆ.
ಕೆಂಪೇಗೌಡ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್, ರಾಜ್ಯದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ಕುರಿತು ಚರ್ಚೆ ನಡೆದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರು ಹಾಗೂ ಇತರ ವರಿಷ್ಠರನ್ನು ಭೇಟಿಯಾಗಿ ನಮ ಅಭಿಪ್ರಾಯವನ್ನು ಹೇಳಿ ಬಂದಿದ್ದೇವೆ. ಸಂಜೆ ಸಿಎಲ್‌ಪಿ ಸಭೆ ಇದೆ, ಅಲ್ಲಿ ಏನೆಲ್ಲಾ ನಿರ್ಣಯಗಳಾಗುತ್ತವೆ ಕಾದು ನೋಡಬೇಕಿದೆ ಎಂದರು.
ಶಾಸಕಾಂಗ ಪಕ್ಷದ ನಾಯಕನ್ನಾಗಿ ಯಾರನ್ನು ಆಯ್ಕೆ ಮಾಡಲಾಗುತ್ತದೆ ಎಂದು ನಾವು ಕಾಯುತ್ತಿದ್ದೇವೆ. ನಂತರ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ಮಾತನಾಡಿ, ತಾವು ಉಪಮುಖ್ಯಮಂತ್ರಿಯಾಗುವ ಬಗ್ಗೆ ಹೈಕಮಾಂಡ್ ನಾಯಕರು ಹೇಳಬೇಕು. ಅದನ್ನು ಹೊರತು ಪಡಿಸಿ ಬೇರೆ ಯಾರೇ ಚರ್ಚೆ ಮಾಡಿದರು ಅದು ಅಪ್ರಸ್ತುತವಾಗಿರುತ್ತದೆ ಎಂದಿದ್ದಾರೆ.
ಸಂಜೆ ನಡೆಯುವ ಶಾಸಕಾಂಗ ಪಕ್ಷದಲ್ಲಿ ಆಯ್ಕೆಯಾಗುವ ನಾಯಕರು ಮುಂದೆ ಪಕ್ಷವನ್ನು ಮುನ್ನೆಡಸಲಿದ್ದಾರೆ ಎಂದು ಹೇಳಿದರು.ಶಿವರಾಜ ತಂಗಡಗಿ, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ತಮನ್ನು ಮುಂದುವರೆಸುವಂತೆ ಮನವಿ ಮಾಡಿದ್ದೇನೆ. ಸಂಜೆ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ನಂತರ ಸಚಿವ ಸಂಪುಟ ರಚನೆಯ ಬಗ್ಗೆ ನಿರ್ಧಾರಗಳಾಗಲಿವೆ ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೋ ಇಲ್ಲವೋ ಎಂಬುದು ಸಂಜೆ ನಿರ್ಧಾರವಾಗಲಿದೆ ಎಂದಿದ್ದಾರೆ.
