ಬೆಂಗಳೂರು, ಮೇ. 30- ಪದೇ ಪದೇ ಏರಿಕೆಯಾಗುತ್ತಿರುವ ತೈಲ ಬೆಲೆ ಕಸ ವಿಲೇವಾರಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳು ಗೋಚರಿಸುತ್ತಿವೆ. ಡೀಸೆಲ್ ಹಾಗೂ ಪೆಟ್ರೋಲ್ ದರ ಏರಿಕೆ, ಕನಿಷ್ಠ ವೇತನ ಹೆಚ್ಚಳ ಮತ್ತು ಬಾಕಿ ಪಾವತಿಗಳ ಸಮಸ್ಯೆಯಿಂದಾಗಿ ನಗರದಾದ್ಯಂತ ತ್ಯಾಜ್ಯ ಸಂಗ್ರಹ ಸೇವೆಗಳನ್ನು ಯಾವುದೇ ಸಮಯದಲ್ಲಿ ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಗಿದೆ ಎಂದು ಕಸ ಗುತ್ತಿಗೆದಾರರ ಸಂಘ ತಿಳಿಸಿದೆ.
ನಮ ಸಮಸ್ಯೆ ಬಗ್ಗೆ ಘನತ್ಯಾಜ್ಯ ಘಟಕದ ಮುಖ್ಯಸ್ಥರಿಗೆ ಹಾಗೂ ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದೇವೆ. ಕಸ ಸಂಗ್ರಹಣೆ, ಸಾಗಾಣಿಕೆ ಮತ್ತು ವಿಲೇವಾರಿ ಗುತ್ತಿಗೆದಾರರ ಸಂಘದ ತುರ್ತು ಸಭೆ ಕರೆಯುವಂತೆ ಮನವಿ ಮಾಡಿದ್ದೇವೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಾಲ ಸುಬ್ರಮಣ್ಯ ತಿಳಿಸಿದ್ದಾರೆ.
ಡೀಸೆಲ್ ದರ, ಕೂಲಿ ವೆಚ್ಚ, ವಾಹನ ನಿರ್ವಹಣಾ ಖರ್ಚು ಹಾಗೂ ಟ್ರಾಕ್ಟರ್ ಮತ್ತು ಆಟೋ ಟಿಪ್ಪರ್ ವೆಚ್ಚಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಈ ಪರಿಸ್ಥಿತಿಯಲ್ಲಿ ಹಾಲಿ ದರದಲ್ಲಿ ಸೇವೆ ಮುಂದುವರಿಸುವುದು ಅಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.
2017-18ರಲ್ಲಿ ಆಟೋ ಟಿಪ್ಪರ್ ದರ ನಿಗದಿಪಡಿಸಿದ ವೇಳೆ ಡೀಸೆಲ್ ದರ ಲೀಟರ್ಗೆ 68 ರೂ. ಇತ್ತು. ಆದರೆ ಪ್ರಸ್ತುತ ದರವು ಸುಮಾರು 26 ರೂಗಳಿಗಿಂತ ಹೆಚ್ಚು ಏರಿಕೆಯಾಗಿದೆ. ಆದ್ದರಿಂದ ಇಂಧನ ವೆಚ್ಚದ ಪ್ರಸ್ತುತ ಮಾನದಂಡಕ್ಕೆ ಅನುಗುಣವಾಗಿ ಹೊಸ ದರಪಟ್ಟಿ ನಿಗದಿಪಡಿಸಬೇಕು ಎಂದು ಗುತ್ತಿಗೆದಾರರು ಒತ್ತಾಯಿಸಿದ್ದಾರೆ.
ಇದೇ ವೇಳೆ, ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯ ಪ್ರಕಾರ 2026-27ನೇ ಸಾಲಿಗೆ ನಿಗದಿಪಡಿಸಿರುವ ವಿ.ಡಿ.ಎ ವ್ಯತ್ಯಾಸದ ಮೊತ್ತ ಪಾವತಿಗೆ ಸರ್ಕಾರ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಮನೆಮನೆಗಳಿಂದ ತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ ಮತ್ತು ವಿಲೇವಾರಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಈಗಾಗಲೇ ಎರಡು ಬಾರಿ ಮನವಿ ಸಲ್ಲಿಸಿದ್ದರೂ ಸಭೆ ಕರೆಯಲಾಗಿಲ್ಲ ಎಂದು ಆರೋಪಿಸಿದ್ದಾರೆ.
ಇದಲ್ಲದೆ, ಬಿ.ಎಸ್.ಡಬ್ಲ್ಯು.ಎಂ.ಎಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಗುತ್ತಿಗೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಮುನ್ಸೂಚನೆ ಇಲ್ಲದೆ ಆದೇಶ ಹೊರಡಿಸುತ್ತಿದ್ದು, ಇದರಿಂದ ಗುತ್ತಿಗೆದಾರರು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ ಎಂದು ದೂರಿದ್ದಾರೆ.
ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಹಿಡಿಯದಿದ್ದರೆ ಮುಂದಿನ ದಿನಗಳಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಸೇವೆಗಳನ್ನು ಸ್ಥಗಿತಗೊಳಿಸುವ ಅನಿವಾರ್ಯತೆ ಎದುರಾಗಬಹುದು ಎಂದು ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ.
