Homeರಾಜ್ಯಮುಖ್ಯಮಂತ್ರಿ ಪದವಿಗಾಗಿ ಸಂಯಮ ಪಾಲಿಸಿದ ಡಿ.ಕೆ.ಶಿವಕುಮಾರ್‌ ಬಗ್ಗೆ ವ್ಯಾಪಕ ಶ್ಲಾಘನೆ

ಮುಖ್ಯಮಂತ್ರಿ ಪದವಿಗಾಗಿ ಸಂಯಮ ಪಾಲಿಸಿದ ಡಿ.ಕೆ.ಶಿವಕುಮಾರ್‌ ಬಗ್ಗೆ ವ್ಯಾಪಕ ಶ್ಲಾಘನೆ

D.K. Shivakumar praised for exercising restraint to become Chief Minister

ಅಧಿಕಾರ ಯಾರಿಗೂ ಶಾಶ್ವತವಲ್ಲ; ಆದರೂ ಅದರ ಬೆನ್ನತ್ತುವವರ ಸಂಖ್ಯೆ ಮಾತ್ರ ಕಡಿಮೆಯಿಲ್ಲ. ಕರ್ನಾಟಕದ ರಾಜಕೀಯ ಇತಿಹಾಸವನ್ನೊಮೆ ಅವಲೋಕಿಸಿದರೆ, ಈ ಮಾತು ನಿಜವೆನಿಸಲಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರಕ್ಕೇರಿತು. ಮೂರು ವರ್ಷ ಆಡಳಿತವನ್ನೂ ಪೂರೈಸಿದೆ. ಕಾಂಗ್ರೆಸ್‌‍ ಪಕ್ಷದ ಸಂಪ್ರದಾಯದಂತೆ ಪ್ರದೇಶ ಕಾಂಗ್ರೆಸ್‌‍ ಅಧ್ಯಕ್ಷರಾದವರು ಮುಖ್ಯಮಂತ್ರಿಯಾಗಬೇಕಿತ್ತು. ಆದರೆ, ಆ ಸಂಪ್ರದಾಯವನ್ನು ಕಾಂಗ್ರೆಸ್‌‍ ಹೈಕಮಾಂಡ್‌ ಆಗ ಮುರಿಯಿತು.

ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ.ಶಿವಕುಮಾರ್‌ ಅವರ ಬದಲಿಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿತು. ಆಗ ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಪಟ್ಟ ತಪ್ಪಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯ ಅವರು ಶಿವಕುಮಾರ್‌ ಅವರಿಗೆ ಬಿಟ್ಟುಕೊಡುತ್ತಾರೆ ಎಂಬ ವಿಚಾರ ಅಧಿಕೃತವಾಗಿ ಬಹಿರಂಗಗೊಳ್ಳದಿದ್ದರೂ ರಾಜಕೀಯ ಪಡಸಾಲೆಯಲ್ಲಿ ವ್ಯಾಪಕವಾಗಿ ಚರ್ಚೆಯಾಯಿತು.

ಅಧಿಕಾರ ಹಸ್ತಾಂತರದ ವಿಚಾರ ಕಾಂಗ್ರೆಸ್‌‍ ಪಾಳಯದಲ್ಲಿ ಬಹು ಚರ್ಚೆಗೆ ಗ್ರಾಸವಾಯಿತು. ಅಷ್ಟಕ್ಕೇ ನಿಲ್ಲದೆ, ಸಿದ್ದರಾಮಯ್ಯ ಬೆಂಬಲಿಗರು ಹಾದಿ ಬೀದಿಯಲ್ಲಿ ವಿಷಯ ಪ್ರಸ್ತಾಪಿಸಿ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಒಂದು ವೇಳೆ ಬದಲಾವಣೆಯಾದರೆ ದಲಿತರಿಗೆ ಅವಕಾಶ ಮಾಡಿಕೊಡಬೇಕು ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಇಂತಹ ಬೇಡಿಕೆಯನ್ನು ಹೈಕಮಾಂಡ್‌ ಮುಂದಿಟ್ಟಿದ್ದರು.

ಮಾಜಿ ಸಚಿವರಾದ ಕೆ.ಎನ್‌.ರಾಜಣ್ಣ, ಜಮೀರ್‌ ಅಹದ್‌ ಖಾನ್‌ ಸೇರಿದಂತೆ ಹಲವರು ಶಿವಕುಮಾರ್‌ ಅವರನ್ನು ಪ್ರಚೋದಿಸುವಂತೆ ಆಗಾಗ್ಗೆ ವಿಷಯ ಪ್ರಸ್ತಾಪಿಸಿದರು. ಪ್ರತಿಯಾಗಿ ಶಿವಕುಮಾರ್‌ ಬೆಂಬಲಿಗ ಶಾಸಕರು ಮಾತನಾಡಿ ತಿರುಗೇಟು ಕೊಟ್ಟರು. ಅದೀಗ ಇತಿಹಾಸ.
ಕಳೆದ ಆರು ತಿಂಗಳಿನಿಂದಲೂ ಮುಖ್ಯಮಂತ್ರಿ ಬದಲಾವಣೆ ವಿಚಾರ ಕಾಂಗ್ರೆಸ್‌‍ನಲ್ಲಿ ಮುನ್ನೆಲೆಗೆ ಬಂದು ವಿರೋಧ ಪಕ್ಷಗಳಿಗೆ ಅಸ್ತ್ರವಾಗಿದ್ದೂ ಉಂಟು. ಮಾಜಿ ಸಂಸದ ಡಿ.ಕೆ.ಸುರೇಶ್‌ ಅವರು ಆಗೊಮೆ ಈಗೊಮೆ ಕೌಂಟರ್‌ ಕೊಡುವ ರೀತಿಯಲ್ಲಿ ಪರೋಕ್ಷ ಟೀಕೆ, ಟಿಪ್ಪಣಿ ಮಾಡತೊಡಗಿದ್ದರು.

ಆದರೆ, ಶಿವಕುಮಾರ್‌ ಮಾತ್ರ ಹೈಕಮಾಂಡ್‌ ಭರವಸೆಯ ಮೇಲೆ ವಿಶ್ವಾಸವಿಟ್ಟು ತಾಳೆಯಿಂದ ವರ್ತಿಸಿದರು. ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಸಹನೆಯ ಹಾದಿ ಅನುಸರಿಸಿದರು. ಇದು ಅವರ ಇದುವರೆಗಿನ ಸ್ವಭಾವಕ್ಕೆ ತದ್ವಿರುದ್ಧವಾಗಿತ್ತು ಎಂದರೂ ತಪ್ಪಾಗಲಾರದು. ಡಿ.ಕೆ.ಶಿವಕುಮಾರ್‌ ಅನ್ಯಾಯವನ್ನು ಸಹಿಸಿ ಸುಮನೆ ಕೂರುವ ವ್ಯಕ್ತಿಯಲ್ಲ ಎಂಬುದು ಸಾರ್ವಜನಿಕವಾಗಿ ವ್ಯಕ್ತವಾಗುವ ಅಭಿಪ್ರಾಯ.

ಮುಖ್ಯಮಂತ್ರಿ ಗಾದಿಗಾಗಿ ಬಹಿರಂಗ ಹೋರಾಟದ ಹಾದಿ ತುಳಿಯದೆ, ನಂಬಿದ ದೇವರಲ್ಲಿ ಮೊರೆ ಇಟ್ಟು ಹೈಕಮಾಂಡ್‌ ಭರವಸೆ ಮೇಲೆ ನಂಬಿಕೆಯಿಟ್ಟು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿರ್ವಹಿಸಿದರು.

ಸಿದ್ದರಾಮಯ್ಯ ಅವರ ಬೆಂಬಲಿಗರು ಉಪಾಹಾರ ಕೂಟ, ಔತಣ ಕೂಟ, ಸಭೆಗಳನ್ನು ನಡೆಸಿ ಪ್ರಚೋದನೆ ಮಾಡುವ ರೀತಿ ನಡೆದುಕೊಂಡರೂ ಶಿವಕುಮಾರ್‌ ವಿಚಲಿತರಾಗಲಿಲ್ಲ. ತಲೆಯನ್ನೂ ಕೆಡಿಸಿಕೊಳ್ಳಲಿಲ್ಲ. ಅಧಿಕಾರ ಸಿಗುತ್ತದೋ ಇಲ್ಲವೋ ಎಂಬ ಆತಂಕ ಅವರ ಬೆಂಬಲಿಗರಲ್ಲಿತ್ತು. ಆದರೆ, ಶಿವಕುಮಾರ್‌ ಪದೇ ಪದೇ ಹೇಳುತ್ತಿದ್ದ ಮಾತೆಂದರೆ, ಕಾಲವೇ ಉತ್ತರ ಕೊಡಲಿದೆ. ನಂಬಿದ ದೇವರು ಕೈ ಬಿಡುವುದಿಲ್ಲ. ಪ್ರಾರ್ಥನೆಗೆ ಫಲ ದೊರೆತೇ ದೊರೆಯುತ್ತದೆ ಎಂಬ ವಿಶ್ವಾಸದಲ್ಲೇ ಇದ್ದರು.

ಒಂದು ಹಂತದಲ್ಲಿ ಅಧಿಕಾರ ಹಸ್ತಾಂತರದ ಹಗ್ಗ ಜಗ್ಗಾಟ ವಿಕೋಪಕ್ಕೆ ಹೋಗುವ ಲಕ್ಷಣ ಗೋಚರಿಸಿ ಶಿವಕುಮಾರ್‌ ಬೆಂಬಲಿಗರು ಮಾಡಿದ ಕೆಲಸಕ್ಕೆ ಕೂಲಿ ಕೊಡಬೇಕು ಎಂದೆಲ್ಲಾ ಹೇಳಿ ಹೈಕಮಾಂಡ್‌ ಮೇಲೆ ಒತ್ತಡ ತರುವ ಪ್ರಯತ್ನ ಮಾಡಿದರು. ಜೊತೆಗೆ ಮುಖ್ಯಮಂತ್ರಿಯಾಗುವವರ ಪಟ್ಟಿಯಲ್ಲಿ ಹಲವರ ಹೆಸರುಗಳು ಪ್ರಸ್ತಾಪವಾದವು. ಮಾಜಿ ಸಚಿವ ಡಾ. ಪರಮೇಶ್ವರ್‌ ಸೇರಿದಂತೆ ಹಲವರು ಮುಖ್ಯಮಂತ್ರಿಯಾಗಲು ಸಮರ್ಥರಿರುವುದಾಗಿಯೂ ಹೇಳಿಕೆ ನೀಡಿದ್ದರು.

ಇಷ್ಟೆಲ್ಲಾ ಬೆಳವಣಿಗೆಗಳು ಪಕ್ಷ ಹಾಗೂ ಸರ್ಕಾರದ ಹಂತದಲ್ಲಿ ನಡೆಯುತ್ತಿದ್ದರೂ ಶಿವಕುಮಾರ್‌ ಮಾತ್ರ ತಾಳೆ ಕಳೆದುಕೊಳ್ಳದೇ, ಕಂಡರೂ ಕಾಣದಂತೆ ಎಲ್ಲವನ್ನೂ ಸಹನೆಯಿಂದಲೇ ಗಮನಿಸುತ್ತಾ ಬಂದರು. ತಮ ನಿಶ್ಚಿತ ಗುರಿ ತಲುಪಲು ಮಾಡಬೇಕಾದ ಪ್ರಯತ್ನಗಳನ್ನು ತೆರೆಮರೆಯಲ್ಲಿ ಕಾಲಕಾಲಕ್ಕೆ ಮಾಡುತ್ತಾ ಬಂದರು. ಮುಖ್ಯಮಂತ್ರಿ ಸ್ಥಾನದ ಬದಲಾವಣೆಯ ನಿರ್ಣಾಯಕ ಹಂತದಲ್ಲೂ ಮೌನವಾಗಿದ್ದು, ಹೆಚ್ಚು ಮಾತನಾಡದೇ ಕಾರ್ಯ ಸಾಧ್ಯ ಮಾಡಿಕೊಂಡರು.

ಮುಖ್ಯಮಂತ್ರಿಯ ಪದವಿಗಾಗಿ ಹೋರಾಟದ ಹಾದಿಯ ಬದಲಿಗೆ ಸಹನೆ ಹಾಗೂ ಸಂಯಮದಿಂದ ವರ್ತಿಸಿ ಸಿದ್ಧಿಸಿಕೊಂಡರು. ಶಿವಕುಮಾರ್‌ ಅವರ ಈ ನಡೆ ಅವರನ್ನು ಹತ್ತಿರದಿಂದ ಬಲ್ಲವರಿಗೆ ಹಾಗೂ ರಾಜಕಾರಣಿಗಳಿಗೆ ಅದರಲ್ಲೂ ರಾಜಕೀಯ ಚಿಂತಕರಿಗೆ ನಂಬಲು ಸಾಧ್ಯವಾಗದಂತಹ ಪರಿಸ್ಥತಿ ಸೃಷ್ಟಿಸಿತ್ತು. ಆದರೂ ತಮ ಮುಂಗೋಪದ ಸ್ವಭಾವಕ್ಕೆ ವಿರುದ್ಧವಾದ ಮಾರ್ಗದಲ್ಲಿ ನಡೆದು ತಮ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿಕೊಂಡರು.

ಅನಿವಾರ್ಯವಾಗಿ ಹೈಕಮಾಂಡ್‌ ಶಿವಕುಮಾರ್‌ ಅವರಿಗೆ ನೀಡಿದ ಭರವಸೆಯಂತೆ ಮುಖ್ಯಮಂತ್ರಿ ಪದವಿಗೆ ಅವಕಾಶ ಮಾಡಿಕೊಡಬೇಕಾಯಿತು. ಅಧಿಕಾರ ಹಂಚಿಕೆಯ ಇಡೀ ಪ್ರಹಸನದಲ್ಲಿ ಶಿವಕುಮಾರ್‌ ಅವರ ತಾಳೆ, ಸಹನೆ, ಸಂಯಮ, ದೇವರ ಪ್ರಾರ್ಥನೆ ಜಯ ತಂದುಕೊಟ್ಟಿದೆ ಎಂಬ ಮೆಚ್ಚುಗೆಯ ಮಾತುಗಳು ಸಾರ್ವಜನಿಕವಾಗಿ ಹಾಗೂ ರಾಜಕೀಯವಾಗಿ ಕೇಳಿಬರುತ್ತಿವೆ. ಈ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಮುಖ್ಯಮಂತ್ರಿಯಾಗಿ ಇದೇ ರೀತಿ ಆಡಳಿತ ನಿರ್ವಹಿಸಲಿ ಎಂಬ ಆಶಾಭಾವನೆ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.

RELATED ARTICLES

Latest News