ಬೆಂಗಳೂರು, ಮಾ.17- ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗಾಗಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಕ್ಕೆ ಸಂಬಂಧಪಟ್ಟಂತೆ ಹೈಕಮಾಂಡ್ ಜೊತೆ ಚರ್ಚೆ ನಡೆಸಲು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ. ಅಸ್ಸಾಂ ವಿಧಾನಸಭೆ ಚುನಾ ವಣೆಯ ಉಸ್ತುವಾರಿಯಾ ಗಿರುವ ಡಿ.ಕೆ.ಶಿವಕುಮಾರ್ ಏಕಕಾಲಕ್ಕೆ ಕರ್ನಾಟಕದಲ್ಲಿ ನಡೆಯುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಎರಡು ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಸವಾಲು ಸ್ವೀಕರಿಸಿದ್ದಾರೆ.
ಈ ಎರಡರಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳೇ 2023ರ ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಕಟ್ಟಾ ಅನುಯಾಯಿ ಎಚ್.ವೈ.ಮೇಟಿ ಆಯ್ಕೆಯಾಗಿದ್ದರು. ಆ ಕ್ಷೇತ್ರದಲ್ಲಿ ಮರಳಿ ಮೇಟಿ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಮೇಟಿಯವರ ಮಕ್ಕಳಾದ ಬಾಯಕ್ಕ, ಉಮಾವತಿ, ಮಲ್ಲಿಕಾರ್ಜುನ್ ಮತ್ತು ಉಮೇಶ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಮಹಿಳಾ ಪ್ರಾಧಾನ್ಯ ಹಿನ್ನೆಲೆಯಲ್ಲಿ ಬಹುತೇಕ ಬಾಯಕ್ಕ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರ ಕಾಂಗ್ರೆಸ್ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಒಂದು ಬಣ ಪಟ್ಟುಹಿಡಿದಿದೆ. ಹಾವೇರಿಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ ಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರಲಾಗಿತ್ತು. ಅದೇ ರೀತಿ ದಾವಣಗೆರೆ ದಕ್ಷಿಣದಲ್ಲೂ ಈ ಬಾರಿ ಅಲ್ಪಸಂಖ್ಯಾತರಿಗೆ ಮಣೆ ಹಾಕಬೇಕೆಂದು ಒತ್ತಾಯಗಳು ಕೇಳಿ ಬರುತ್ತಿವೆ.
ಶ್ಯಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ತೆರವಾಗಿರುವ ಕ್ಷೇತ್ರಕ್ಕೆ, ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಅವರ ಹೆಸರು ಮುಂನ್ನೆಲೆಗೆ ಬಂದಿದೆ.
ಈಗಾಗಲೇ ಶ್ಯಾಮನೂರು ಕುಟುಂಬದಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಸಚಿವರಾಗಿದ್ದರೆ, ಅವರ ಪತ್ನಿ ಪ್ರಭಾ ಮಲ್ಲಿಕಾರ್ಜನ್ ದಾವಣಗೆರೆ ಸಂಸದರಾಗಿದ್ದಾರೆ. ಉಪಚುನಾವಣೆಯ ಟಿಕೆಟ್ ಅನ್ನು ಅದೇ ಕುಟುಂಬಕ್ಕೆ ನೀಡಿದರೆ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗಲಿದೆ ಎಂಬ ಆಕ್ಷೇಪಗಳು ಕೇಳಿ ಬರುತ್ತಿವೆ.
ಸಚಿವ ಜಮೀರ್ ಅಹಮದ್‌ಖಾನ್ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮುಖಂಡ ಅಬ್ದುಲ್ ಜಬಾರ್ ಅಥವಾ ಅವರ ಕುಟುಂಬದ ಸದಸ್ಯರಿಗೆ ಮಣೆ ಹಾಕಬೇಕು. ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತಂದಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದೇ ಇದ್ದರೆ, ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಆಗಿ ಮಾತ್ರ ಪರಿಗಣಿಸುತ್ತಿದೆ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ.
ಈ ಹಿನ್ನೆಲೆಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುವುದನ್ನು ಬಿಟ್ಟು ದಾವಣಗೆರೆ ದಕ್ಷಿಣದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬ ಒತ್ತಡ ಕೇಳಿ ಬರುತ್ತಿದೆ. ಒಂದು ವೇಳೆ ಶ್ಯಾಮನೂರು ಕುಟುಂಬಕ್ಕೆ ಟಿಕೆಟ್ ಕೈ ತಪ್ಪಿದ್ದರೆ ವೀರಶೈವ ಲಿಂಗಾಯಿತ ಸಮುದಾಯ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಪಕ್ಷದ ನಾಯಕರು ಅಡ್ಡ ಕತ್ತರಿಯಲ್ಲಿ ಸಿಲುಕಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನಿಡಿದರೂ, ಅವಕಾಶ ವಂಚಿತರು, ಕಾಂಗ್ರೆಸ್ ವಿರುದ್ಧ ಮುಗಿಬೀಳುವ ಸಾಧ್ಯತೆ ಇದೆ. ಈ ಎರಡೂ ಕ್ಷೇತ್ರಗಳಲ್ಲಿನ ಫಲಿತಾಂಶ ಸರ್ಕಾರದ ಮೇಲಾಗಲಿ, ಪಕ್ಷದ ಮೇಲಾಗಲಿ ಪರಿಣಾಮ ಬೀರುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಬಿಜೆಪಿ ರಾಜಕೀಯ ಪ್ರಯೋಗಕ್ಕೆ ಮುಂದಾಗಿದೆ. ಎರಡೂ ಕ್ಷೇತ್ರಗಳಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡುವ ಮೂಲಕ ತಮದು ಕೇಡರ್ ಬೇಸ್ ಪಕ್ಷ ಎಂಬ ಸಂದೇಶ ರವಾನಿಸಲು ಮುಂದಾಗಿದೆ.
ಕಾಂಗ್ರೆಸ್‌ನಲ್ಲಿ ಕುಟುಂಬ ರಾಜಕಾರಣಕ್ಕೆ ಮಾತ್ರ ಮನ್ನಣೆ. ಕಾರ್ಯಕರ್ತರಿಗೆ ಬೆಲೆ ಇಲ್ಲ ಎಂಬ ಸಂದೇಶವು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅಭ್ಯರ್ಥಿಗಳನ್ನು ಪ್ರಕಟಿಸುವ ಮುನ್ನ ವರಿಷ್ಠನಾಯಕರ ಅನುಮತಿ ಪಡೆಯಲು ತೆರಳಿದ್ದಾರೆ.
