Monday, April 13, 2026
Homeರಾಜ್ಯಶಾಸಕರು ಮತ್ತು ಅವರ ಕುಟುಂಬದವರಿಗೆ ಐಪಿಎಲ್‌ ಟಿಕೆಟ್‌ ನೀಡುವಂತೆ ವಿಧಾನಸಭೆಯಲ್ಲಿ ಪಕ್ಷಾತೀತ ಆಗ್ರಹ

ಶಾಸಕರು ಮತ್ತು ಅವರ ಕುಟುಂಬದವರಿಗೆ ಐಪಿಎಲ್‌ ಟಿಕೆಟ್‌ ನೀಡುವಂತೆ ವಿಧಾನಸಭೆಯಲ್ಲಿ ಪಕ್ಷಾತೀತ ಆಗ್ರಹ

Demand in the Assembly to provide IPL tickets to MLAs and their families

ಬೆಂಗಳೂರು, ಮಾ.26- ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೇ ತಿಂಗಳ 28ರಿಂದ ಆರಂಭವಾಗುತ್ತಿರುವ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ವೀಕ್ಷಿಸಲು ಶಾಸಕರು ಮತ್ತು ಅವರ ಕುಟುಂಬದವರಿಗೆ ಟಿಕೆಟ್‌ ನೀಡಬೇಕೆಂದು ವಿಧಾನಸಭೆಯಲ್ಲಿಂದು ಪಕ್ಷಾತೀತ ಆಗ್ರಹ ಕೇಳಿ ಬಂತು.

ಬೆಂಗಳೂರು ಅಭಿವೃದ್ಧಿಯ ಕುರಿತು ವಿಧಾನಸಭೆಯಲ್ಲಿ ನಡೆದಿದ್ದ ಚರ್ಚೆಗೆ ಇಂದು ಬೆಳಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಉತ್ತರ ನೀಡುತ್ತಿದ್ದರು. ಈ ನಡುವೆ ಬೆಂಗಳೂರಿನ ಜಕ್ಕೂರಿನಲ್ಲಿರುವ ವಿಮಾನ ಹಾರಾಟ ತರಬೇತಿ ಕೇಂದ್ರವನ್ನು ಸ್ಥಳಾಂತರಿಸಲು ಪ್ರಯತ್ನಗಳಾಗುತ್ತಿವೆ. ಅದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಉತ್ತರ ನೀಡಿದ ಡಿ.ಕೆ.ಶಿವಕುಮಾರ್‌ ಅವರು, ಈ ವಿಚಾರ ಸಂಪುಟದಲ್ಲಿ ಚರ್ಚೆಯಾಗಿದ್ದು ನಿಜ. ಜಕ್ಕೂರಿನ ಏರೋಡ್ರಮ್‌ನ ಜಾಗದಲ್ಲಿ ದೆಹಲಿಯಲ್ಲಿರುವ ಭಾರತ್‌ ಮಂಟಪ್‌ ಮಾದರಿಯಲ್ಲಿ ಬೃಹತ್‌ ಸಭಾಂಗಣ ಹಾಗೂ ತಪೋವನ ನಿರ್ಮಿಸುವಂತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಸಲಹೆ ನೀಡಿದ್ದರು. ಕೇಂದ್ರದಿಂದ 300 ಕೋಟಿ ರೂ.ಗಳ ನೆರವು ನೀಡುವುದಾಗಿಯೂ ಭರವಸೆ ಕೊಟ್ಟಿದ್ದರು. ಆದರೆ ಸಂಪುಟದಲ್ಲಿ ಚರ್ಚೆಯಾದಾಗ ಜಕ್ಕೂರಿನಲ್ಲಿರುವ ವಿಮಾನ ಹಾರಾಟ ತರಬೇತಿ ಕೇಂದ್ರವನ್ನು ಸ್ಥಳಾಂತರ ಮಾಡಲು ಮುಂದಾದರೆ, ಬಿಲ್ಡರ್‌ಗೆ ನೆರವು ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತವೆ ಎಂದು ಸಚಿವ ಕೃಷ್ಣಭೈರೇಗೌಡ ಆಕ್ಷೇಪಿಸಿದರು.

ಹೀಗಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಮುಖ್ಯಮಂತ್ರಿ ಅವರು ಈ ವಿಚಾರವನ್ನು ಮುಂದೂಡಿದ್ದಾರೆ. ನಾನು ಇರುವವರೆಗೂ ಈ ಬಗ್ಗೆ ಚರ್ಚೆ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸದ್ಯಕ್ಕೆ ತರಬೇತಿ ಕೇಂದ್ರವನ್ನು ಸ್ಥಳಾಂತರ ಮಾಡುವುದಿಲ್ಲ, ಮುಂದೆ ಪರಿಶೀಲನೆ ಮಾಡುತ್ತೇವೆ ಎಂದರು.

ಆಗ ಸಚಿವ ಕೆ.ಜೆ.ಜಾರ್ಜ್‌ ಜಕ್ಕೂರಿನಲ್ಲಿ 35 ರಿಂದ 40 ಜನ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದರು. ಪಕ್ಕದಲ್ಲೇ ಹೆದ್ದಾರಿಯ ಮೇಲ್ಸೇತುವೆ ಹಾದು ಹೋಗಿದ್ದರಿಂದ ಡಿಜಿಸಿಎ ವಿಮಾನ ಹಾರಾಟಕ್ಕೆ ಪರವಾನಗಿ ನೀಡುತ್ತಿಲ್ಲ. ಮೇಲ್ಸೇತುವೆಯನ್ನು ಹೊಡೆದು ಹಾಕುವಂತೆ ಹಿಂದೆ ರಾಷ್ಟ್ರೀಯ ಹೆದ್ದಾರಿ ಸಚಿವ ಜಾನ್‌ ಫರ್ನಾಂಡಿಸ್‌‍ ಅವರಿಗೆ ಮನವಿ ಮಾಡಿದ್ದೇವೆ. ಆದರೆ ಅವರು ಒಪ್ಪಿಕೊಳ್ಳಲಿಲ್ಲ. ಸದರಿ ಜಾಗದಿಂದ ತರಬೇತಿ ಕೇಂದ್ರವನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ, ಅಲ್ಲಿ 1 ಲಕ್ಷ ಆಸನ ಸಾಮರ್ಥ್ಯದ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಿಸಬೇಕೆಂಬ ಸಲಹೆ ನೀಡಲಾಗಿತ್ತು ಎಂದು ಹೇಳಿದರು.

ಆಗ ಆರ್‌.ಅಶೋಕ್‌ ಅವರು, ಅಲ್ಲಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಿಸಿದರೆ, 50 ರಿಂದ 60 ಸಾವಿರ ಕಾರುಗಳು ಸಂಚರಿಸುತ್ತವೆ. ಏರ್ಪೋಟ್‌ ಸಂಚಾರಕ್ಕೆ ತೊಂದರೆಯಾಗುತ್ತದೆ. ಕ್ರಿಕೆಟ್‌ ಸಂಸ್ಥೆಯ ಬಳಿ ಸಾವಿರಾರು ಕೋಟಿ ರೂ.ಹಣ ಇದೆ. ಅವರಿಗೆ ಸರ್ಕಾರದಿಂದ ಸ್ಟೇಡಿಯಂ ಕಟ್ಟಿಸಿಕೊಡುವ ಅಗತ್ಯ ಇಲ್ಲ. ದೇಶದಲ್ಲೇ ಮೊದಲ ವಿಮಾನ ಹಾರಾಟ ತರಬೇತಿ ಕೇಂದ್ರ ಜಕ್ಕೂರಿನಲ್ಲಿ ನಿರ್ಮಾಣವಾಗಿದೆ. ಅದಕ್ಕೆ ಐತಿಹಾಸಿಕ ಹಿನ್ನಲೆ ಇದೆ. ಅದನ್ನು ಮುಚ್ಚಬೇಡಿ ಎಂದು ಅಗ್ರಹಿಸಿದರು.

ಮುಂದುವರೆದ ಅವರು, ಕ್ರಿಕೆಟ್‌ ನೋಡಲು ನಾವು ಒಂದು ಟಿಕೆಟ್‌ಗಾಗಿ ಅಂಗಲಾಚುವ ಪರಿಸ್ಥಿತಿ ಇದೆ. ಅವರಿಗೆ ಮತ್ತೆ ಸ್ಟೇಡಿಯಂ ಕಟ್ಟಿಕೊಡುವ ಅಗತ್ಯ ಇಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ತರಬೇತಿಗಾಗಿ 16 ಎಕರೆ 32 ಗುಂಟೆ ಜಮೀನನ್ನು ತಿಂಗಳಿಗೆ 1600 ಬಾಡಿಗೆಯಂತೆ ನೀಡಲಾಗಿದೆ. ಅಲ್ಲಿ ಪಂದ್ಯಾವಳಿಗಳನ್ನು ನಡೆಸಿ ದುಡ್ಡು ಮಾಡುತ್ತಿದ್ದಾರೆ. ಜೊತೆಗೆ ಸಿಎಲ್‌-4 ಲೈಸೆನ್‌್ಸ ನೀಡಿದೆ, ಮದ್ಯ ಮಾರಾಟ ಮಾಡುತ್ತಿದ್ದಾರೆ. ಅದನ್ನು ಟೈಟ್‌ ಮಾಡಿ ದಾರಿಗೆ ಬರುತ್ತಾರೆ ಎಂದು ಸಲಹೆ ನೀಡಿದರು.

ಈ ವೇಳೆ ಆಡಳಿತ ಪಕ್ಷದ ಶಾಸಕರಾದ ವಿಜಯಾನಂದ ಕಾಶಪ್ಪನವರ್‌ ಮತ್ತು ಕೋನರೆಡ್ಡಿ ಸೇರಿದಂತೆ ಹಲವರು ಕ್ರಿಕೆಟ್‌ ಪಂದ್ಯ ವೀಕ್ಷಿಸಲು ಶಾಸಕರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಟಿಕೆಟ್‌ ನೀಡಬೇಕು ಮತ್ತು ಗೌರವಯುತವಾಗಿ ವಿಐಪಿ ಗ್ಯಾಲರಿಯಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಅಗ್ರಹಿಸಿದರು.

ಇದಕ್ಕೆ ಪಕ್ಷತೀತವಾಗಿ ಬೆಂಬಲ ವ್ಯಕ್ತವಾಯಿತು. ಸಭಾಧ್ಯಕ್ಷ ಯು.ಟಿ.ಖಾದರ್‌ ಸರ್ಕಾರ ಶಾಸಕರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕ್ರಿಕೆಟ್‌ ಸಂಸ್ಥೆಯವರನ್ನು ಕರೆಸಿ ಚರ್ಚೆ ಮಾಡಿ, ಶಾಸಕರಿಗೆ ನಾಲ್ಕು ಟಿಕೆಟ್‌ ಕೊಡುವಂತೆ ವ್ಯವಸ್ಥೆ ಮಾಡಿ ಎಂದು ಆದೇಶಿಸಿದರು. ಇದಕ್ಕೆ ಸ್ಪಂದಿಸಿದ ಉಪಮುಖ್ಯಮಂತ್ರಿಯವರು ಕ್ರಿಕೆಟ್‌ ಸಂಸ್ಥೆಯ ಅಧ್ಷಕ್ಷರ ಜೊತೆ ಚರ್ಚೆ ಮಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

RELATED ARTICLES

Latest News