Homeರಾಜ್ಯಧರ್ಮಸ್ಥಳ ಪ್ರಕರಣ : ಮತ್ತೆ ಇಕ್ಕಟ್ಟಿಗೆ ಸಿಲುಕಿದ ಸರ್ಕಾರ

ಧರ್ಮಸ್ಥಳ ಪ್ರಕರಣ : ಮತ್ತೆ ಇಕ್ಕಟ್ಟಿಗೆ ಸಿಲುಕಿದ ಸರ್ಕಾರ

Dharmasthala case: Government in trouble again

ಬೆಂಗಳೂರು, ಜೂ. 14- ಧರ್ಮಸ್ಥಳದ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮತ್ತೆ ಇಕ್ಕಟ್ಟಿಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.ಅತ್ಯಾಚಾರ ಮತ್ತು ಕೊಲೆಯಾದ ನೂರಾರು ಶವಗಳನ್ನು ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೂತು ಹಾಕಲಾಗಿದೆ ಎಂದು ಚಿನ್ನಯ್ಯ ಮಾಡಿದ ಆರೋಪದ ತನಿಖೆಗೆ ಸಂಬಂಧಪಟ್ಟಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಪತ್ರ ಆಧರಿಸಿ 2025ರ ಜುಲೈನಲ್ಲಿ ಎಸ್‌‍ಐಟಿ ರಚಿಸಲಾಯಿತು.

ತನಿಖೆ ನಡೆಸಿದ ಎಸ್‌‍ಐಟಿ ಮುಖ್ಯಸ್ಥ ಡಿಜಿಪಿ ಪ್ರಣವ್‌ ಮೊಹಂತಿ ನೇತೃತ್ವದ ತಂಡ 30ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿ, ಅಗೆದಿತ್ತು. ಸುದೀರ್ಘ ತನಿಖೆ ನಡೆಸಿದ ಬಳಿಕ ಚಿನ್ನಯ್ಯನ ಆರೋಪದಲ್ಲಿ ಹುರುಳಿಲ್ಲ ಎಂದು ಆತನನ್ನೇ ಎಸ್‌‍ಐಟಿ ಬಂಧಿಸಿದೆ. ಈಗ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಪ್ರಕರಣ ತಣ್ಣಗಿದ್ದ ಹೊತ್ತಿನಲ್ಲೇ ಚಿನ್ನಯ್ಯ ನ್ಯಾಯಾಲಯಕ್ಕೆ ರಿಟ್‌ ಅರ್ಜಿ ಸಲ್ಲಿಸಿ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದ್ದು, ತಮ ಅಸಹಾಯಕತೆಯನ್ನು ಬಳಸಿಕೊಂಡ ಕೆಲವರು ಆರೋಪ ಮಾಡುವಂತೆ ಮಾಡಿದ್ದರು ಎಂದಿದ್ದಾರೆ.

ಪ್ರಕಾಶ್‌ರಾಜ್‌, ಚಿತ್ರದುರ್ಗದ ರಮಾ ನಾಗರಾಜ್‌, ಮಹೇಶ್‌ ತಿಮರೋಡಿ, ಗಿರೀಶ್‌ ಮಟ್ಟಣ್ಣನವರ್‌, ಟಿ.ಜಯಂತ್‌, ಸಮೀರ್‌ ಎಂ.ಡಿ., ದಿನೇಶ್‌, ವಿಠಲ್‌ಗೌಡ ಅವರು ಧರ್ಮಸ್ಥಳದ ವಿರುದ್ಧ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ. 200 ಕೋಟಿ ರೂ. ಹಣಕಾಸಿನ ವಹಿವಾಟು ನಡೆದಿದೆ ಎಂದು ಚಿನ್ನಯ್ಯ ದೂರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗಿರೀಶ್‌ ಮಟ್ಟಣ್ಣನವರ್‌, ಆರಂಭದಲ್ಲೇ ಹೇಳಿಕೆ ನೀಡಿದ್ದ ಚಿನ್ನಯ್ಯ ಈಗ ವ್ಯತಿರಿಕ್ತವಾಗಿ ಮಾತನಾಡುತ್ತಿದ್ದಾರೆ. ಮಂಪರು ಪರೀಕ್ಷೆಗೆ ಒಳಗಾಗಲು ಸಿದ್ಧನಿದ್ದೇನೆ ಎಂದು ಆತ 164ಯಡಿ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಹೀಗಾಗಿ ಚಿನ್ನಯನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ನಾನು ಕೂಡ ಮಂಪರು ಪರೀಕ್ಷೆಗೆ ಒಳಗಾಗಲು ಸಿದ್ಧನಿದ್ದೇನೆ. ಅದು ಕೂಡ ಲೈವ್‌ನಲ್ಲೇ ನಡೆಯಲಿ ಎಂದು ಗಿರೀಶ್‌ ಮಟ್ಟಣ್ಣನವರ್‌ ಹೇಳಿದ್ದಾರೆ.ಪ್ರಕರಣ ತನಿಖೆ ನಡೆಸಿದ ಎಸ್‌‍ಐಟಿ 3 ತಿಂಗಳ ಹಿಂದೆಯೇ ಮಧ್ಯಂತರ ವರದಿ ನೀಡಿದೆ. ಸರ್ಕಾರ ಆ ವರದಿಯನ್ನು ಬಹಿರಂಗಗೊಳಿಸದೇ ಮುಚ್ಚಿಟ್ಟಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.

ಷಡ್ಯಂತ್ರ ಮಾಡಿದ್ದೇವೆ ಎಂದು ಹೇಳಲಾದ ನಮ ಮೇಲೆ ಸರ್ಕಾರಕ್ಕೆ ಅಷ್ಟೊಂದು ಕಾಳಜಿ ಏಕೆ? ಮಧ್ಯಂತರ ವರದಿ ಬಿಡುಗಡೆ ಮಾಡಿ, ತಪ್ಪು ಮಾಡಿದ್ದರೆ ನಮ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಗಿರೀಶ್‌ ಮಟ್ಟಣ್ಣನವರ್‌ ಸವಾಲು ಹಾಕಿದ್ದಾರೆ.

ಧರ್ಮಸ್ಥಳದ ಪ್ರಕರಣದಲ್ಲಿ ವಿರೋಧ ಪಕ್ಷಗಳು ಕಾಲಕಾಲಕ್ಕೆ ತಮ ಹೇಳಿಕೆಗಳನ್ನು ಬದಲಿಸುತ್ತಿವೆ. ಆರಂಭದಲ್ಲಿ 30 ಕಡೆ ಚಿನ್ನಯ್ಯ ಸ್ಥಳ ಗುರುತಿಸಿದಾಗ ಏನೋ ನಡೆದಿದೆ ಎಂಬ ಅನುಮಾನಗಳು ದಟ್ಟವಾಗಿದ್ದವು. ಆ ವೇಳೆ ಎಸ್‌‍ಐಟಿಯ ತನಿಖೆಯನ್ನು ವಿರೋಧ ಪಕ್ಷಗಳೂ ಸ್ವಾಗತಿಸಿದ್ದವು. ಸತ್ಯಾಂಶ ಹೊರ ಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳುತ್ತಿದ್ದವು.

30 ಸ್ಥಳಗಳನ್ನು ಅಗೆದ ಬಳಿಕ ಆರೋಪಕ್ಕೆ ನಿರ್ದಿಷ್ಟವಾದ ದಾಖಲೆಗಳು ದೊರೆತಿಲ್ಲ ಎನ್ನುತ್ತಿದ್ದಂತೆ ವಿರೋಧ ಪಕ್ಷಗಳ ಹೇಳಿಕೆ ತಿರುವು-ಮುರುವಾಯಿತು. ಸರ್ಕಾರ ಕೆಲವು ಷಡ್ಯಂತ್ರದಾರರ ಮಾತು ನಂಬಿ ಆತುರವಾಗಿ ಎಸ್‌‍ಐಟಿ ರಚನೆ ಮಾಡಿ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಸಿದೆ ಎಂದು ಪ್ರತಿ ವಾಗ್ದಾಳಿ ನಡೆಸಲಾಗಿದೆ.

ಎಸ್‌‍ಐಟಿಯ ತನಿಖಾ ವರದಿಯನ್ನು ಬಹಿರಂಗ ಪಡಿಸಬೇಕೆಂದು ವಿರೋಧ ಪಕ್ಷಗಳೂ ಕೂಡ ಒತ್ತಾಯ ಮಾಡುತ್ತಿವೆ. ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿರುವ ವ್ಯಕ್ತಿಗಳು ಕೂಡ ಎಸ್‌‍ಐಟಿಯ ಮಧ್ಯಂತರ ವರದಿ ಬಹಿರಂಗವಾಗಲಿ ಎಂದು ಆಗ್ರಹಿಸುತ್ತಿದ್ದಾರೆ.
ಎಸ್‌‍ಐಟಿ ತನಿಖೆ ವಿಳಂಬವಾಗುತ್ತಿದೆ ಎಂದು ಚಿನ್ನಯ್ಯ ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಟ್‌ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಿರೀಶ್‌ ಮಟ್ಟಣ್ಣನವರ್‌ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಎಸ್‌‍ಐಟಿಯ ಮಧ್ಯಂತರ ವರದಿ ಇಷ್ಟು ದಿನ ಬಹಿರಂಗಗೊಳ್ಳದೇ ಮುಚ್ಚಿಟ್ಟಿರುವುದರ ಹಿಂದೆ ದೊಡ್ಡ ರಹಸ್ಯ ಅಡಗಿದಂತೆ ಕಂಡು ಬರುತ್ತಿದೆ. ಮೂವರು ಹಿರಿಯ ಐಪಿಎಸ್‌‍ ಅಧಿಕಾರಿಗಳು, 50ಕ್ಕೂ ಹೆಚ್ಚು ಪೊಲೀಸರು ನಡೆಸಿದ ತನಿಖಾ ವರದಿಯನ್ನು ಸರ್ಕಾರ ಮುಚ್ಚಿಡುತ್ತಿರುವುದು ಏಕೆ? ಎಂಬ ಪ್ರಶ್ನೆ ಕಾಡಲಾರಂಭಿಸಿದೆ.

ಕೋಟ್ಯಂತರ ರೂ. ತನಿಖೆಗಾಗಿ ವೆಚ್ಚ ಮಾಡಲಾಗಿದೆ. ಗಂಭೀರ ಹಾಗೂ ಸೂಕ್ಷ್ಮವಾದ ಪ್ರಕರಣದಲ್ಲಿ ಮಧ್ಯಂತರ ವರದಿ ಸಲ್ಲಿಕೆಯಾಗಿದ್ದರೂ ಅದನ್ನು ಬಹಿರಂಗ ಪಡಿಸದೇ ಸರ್ಕಾರ ಮುಚ್ಚಿಟ್ಟಿದ್ದು ಏಕೆ? ಎಂದು ಕೇಳಲಾಗುತ್ತಿದೆ. ಆರೋಪ ಮಾಡಿದವರು, ಆರೋಪಕ್ಕೊಳಗಾದವರು ಸೇರಿದಂತೆ ಎಲ್ಲರೂ ವರದಿ ಬಹಿರಂಗವಾಗಬೇಕೆಂದು ಒತ್ತಾಯಿಸುತ್ತಿರುವುದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

RELATED ARTICLES

Latest News