Sunday, April 12, 2026
Homeರಾಜ್ಯನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಸಂಪುಟ ಪುನಾರಚನೆ ಕುರಿತು ಚರ್ಚೆ

ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಸಂಪುಟ ಪುನಾರಚನೆ ಕುರಿತು ಚರ್ಚೆ

Discussion on cabinet reshuffle amid leadership change confusion

ಬೆಂಗಳೂರು, ಮಾ.11- ನಾಯಕತ್ವದ ಬದಲಾವಣೆಗೆ ಸಂಬಂಧಪಟ್ಟಂತೆ ಗೊಂದಲಗಳ ನಡುವೆಯೇ ಕಾಂಗ್ರೆಸ್‌‍ನ ಹಿರಿಯ ಶಾಸಕರು ಪ್ರತ್ಯೇಕ ಸಭೆ ನಡೆಸಿ ಸಚಿವ ಸಂಪುಟ ಪುನರ್‌ರಚನೆಗೆ ಒತ್ತಡ ಹೇರಲು ಮುಂದಾಗಿದ್ದಾರೆ.

ಎರಡು, ಮೂರು ಬಾರಿಗಿಂತಲೂ ಹೆಚ್ಚಿನ ಅವಧಿಗೆ ಶಾಸಕರಾಗಿರುವವರು ನಾಳೆ ನಗರದ ಖಾಸಗಿ ಕ್ಲಬ್‌ನಲ್ಲಿ ಸಭೆ ಸೇರಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿಗೆ 31 ಮಂದಿ ಮೊದಲ ಬಾರಿಗೆ ಆಯ್ಕೆಯಾದ ಶಾಸಕರು ಪಕ್ಷದ ವರಿಷ್ಠರಿಗೆ ಪತ್ರ ಬರೆದು ಸಚಿವ ಸಂಪುಟ ಪುನರ್‌ರಚನೆಯ ವೇಳೆ ತಮಲ್ಲಿ 5 ಮಂದಿಯನ್ನು ಪರಿಗಣಿಸುವಂತೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ಹಿರಿಯ ಶಾಸಕರು ಪ್ರತ್ಯೇಕ ಸಭೆ ನಡೆಸಲಿದ್ದು ಸಂಪುಟ ಪುನರ್‌ರಚನೆ ಮತ್ತು

ತಮಗೆ ಅವಕಾಶ ಪಡೆದುಕೊಳ್ಳುವ ಬಗ್ಗೆ ಕಾರ್ಯತಂತ್ರ ರೂಪಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗೊಂದಲವೇ ಇನ್ನೂ ಬಗೆಹರಿದಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ನೀಡಿದ್ದ ಔತಣಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದ ಶಾಸಕರು, ಸಚಿವರು ಭಾಗವಹಿಸಿ ಒಗ್ಗಟ್ಟು ಪ್ರದರ್ಶನ ಮಾಡಿದರು.

ಇಂದು ಸಂಜೆ ಕಾಂಗ್ರೆಸ್‌‍ ಶಾಸಕಾಂಗ ಸಭೆ ನಡೆಯಲಿದೆ. ಅಲ್ಲಿ ನಾಯಕತ್ವದ ಬದಲಾವಣೆ, ಸಚಿವ ಸಂಪುಟ ಪುನರ್‌ರಚನೆ, ಹಿರಿಯರು-ಕಿರಿಯರು ಆದ್ಯತೆ, ಬಜೆಟ್‌ ಕುರಿತ ಚರ್ಚೆ, ಅನುದಾನ ಹಂಚಿಕೆ, ಸಚಿವರ ಕಾರ್ಯವೈಖರಿ ಸೇರಿದಂತೆ ನಾನಾ ವಿಚಾರಗಳು ಚರ್ಚೆಯಾಗಲಿವೆ.

ಇಂದು ಶಾಸಕಾಂಗ ಸಭೆ ನಡೆಯಲಿದ್ದು, ನಾಳೆ ಹಿರಿಯ ಶಾಸಕರು ಪ್ರತ್ಯೇಕ ಸಭೆಗೆ ಮುಂದಾಗಿರುವುದು ಬೆಳವಣಿಗೆಗಳ ಮೇಲೆ ತೀವ್ರ ನಿಗಾ ಇರಿಸುವಂತೆ ಮಾಡಿದೆ. ಈವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಣದ ಶಾಸಕರು ಪ್ರತ್ಯೇಕವಾಗಿ ಔತಣಕೂಟ ಆಯೋಜಿಸಿದ್ದರು. ಇದು ಬಣ ರಾಜಕೀಯವನ್ನು ಹೆಚ್ಚಾಗುವಂತೆ ಮಾಡಿತು. ಈ ಬಣಗಳ ಮೇಲಾಟಕ್ಕೆ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಇಬ್ಬರು ಸೊಪ್ಪು ಹಾಕಲಿಲ್ಲ. ಡಿ.ಕೆ.ಶಿವಕುಮಾರ್‌ ಅವರಂತೂ ನೇರವಾಗಿ ನನ್ನ ಪರವಾಗಿ ಯಾರೂ ಹೇಳಿಕೆಗಳನ್ನು ನೀಡುವ ಅಗತ್ಯ ಇಲ್ಲ ಎಂದು ನಿಷ್ಠೂರವಾಗಿ ಹೇಳಿದ್ದರು.

ನಿನ್ನೆ ಡಿ.ಕೆ.ಶಿವಕುಮಾರ್‌ ಅವರನ್ನು ಅಭಿನಂದಿಸುವ ಸಂದೇಶದಲ್ಲಿ ಸಿದ್ದರಾಮಯ್ಯ ಅವರು 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ ಅನ್ನು ಮರಳಿ ಅಧಿಕಾರಕ್ಕೆ ತರುವ ಹೊಣೆಗಾರಿಕೆ ನಮಿಬ್ಬರ ಮೇಲಿದೆ ಎಂದು ಹೇಳುವ ಮೂಲಕ ಸದ್ಯಕ್ಕೆ ಅಧಿಕಾರ ಬಿಟ್ಟುಕೊಡುವ ಲಕ್ಷಣಗಳಿಲ್ಲ ಎಂಬ ಪರೋಕ್ಷ ಸಂದೇಶ ಸಾರಿದ್ದಾರೆ.

ನಾಯಕತ್ವದ ಗೊಂದಲದ ನಡುವೆಯೇ ಹಿರಿಯ-ಕಿರಿಯ ಶಾಸಕರುಗಳು ಬಣಗಳ ಜಂಜಾಟ ಬದಿಗಿರಿಸಿ ತಮ ಅನುಕೂಲ ಸಿಂಧು ರಾಜಕಾರಣವನ್ನು ನೋಡಿಕೊಳ್ಳಲು ಮುಂದಾಗಿದ್ದಾರೆ. ಸಚಿವ ಸಂಪುಟ ಪುನರ್‌ರಚನೆಯಾದರೆ, ಅವಕಾಶ ಪಡೆಯಬೇಕೆಂದು ಕಿರಿಯರು ಪ್ರಯತ್ನಿಸುತ್ತಿರುವ ನಡುವೆಯೇ ಹಿರಿಯ ಶಾಸಕರು ಪಕ್ಷದಲ್ಲಿ ತಮ ಪಾತ್ರ ಏನು? ಎಂಬ ಪ್ರಶ್ನೆಗಳನ್ನು ಮುಂದಿಡಲು ತಯಾರಾಗುತ್ತಿದ್ದಾರೆ.

ಆರ್‌.ವಿ.ದೇಶಪಾಂಡೆ, ಟಿ.ಬಿ.ಜಯಚಂದ್ರ, ಲಕ್ಷ್ಮಣ ಸವದಿ, ಕೆ.ಎಮ್‌. ಶಿವಲಿಂಗೇಗೌಡ, ಎನ್ವೀರ್‌ ಶೇಟ್‌ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಹಿರಿಯ ಶಾಸಕರು ಸಭೆ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

RELATED ARTICLES

Latest News