ನವದೆಹಲಿ, ಮಾ.15- ಮುಂದಿನ ವಿಧಾನಸಭೆ ಚುನಾವಣೆಗಳ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಇಂದು ಸಂಜೆ ಘೋಷಿಸಲಿರುವ ಹಿನ್ನೆಲೆ, ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ಮೇಲೆ ವ್ಯಂಗ್ಯವಾಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ವಿಭಾಗ) ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಚುನಾವಣಾ ವೇಳಾಪಟ್ಟಿ ಘೋಷಣೆಗೆ ಜಿ-2ರಿಂದ ಅನುಮತಿ ದೊರೆತಿರಬಹುದು ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಸಾಮಾನ್ಯವಾಗಿ ಜಿ-1 ಜಿ-2 ಎಂಬ ಪದವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ವ್ಯಂಗ್ಯ ಮಾಡಲು ಬಳಸುತ್ತದೆ. ಇಬ್ಬರೂ ಗುಜರಾತ್ ಮೂಲದವರಾಗಿದ್ದಾರೆ.
ಜೈರಾಮ್ ರಮೇಶ್ ತಮ ಪೋಸ್ಟ್‌ನಲ್ಲಿ, 2026ರ ವಿಧಾನಸಭೆ ಚುನಾವಣೆಗಳ ವೇಳಾಪಟ್ಟಿಯನ್ನು ಇಂದು ಸಂಜೆ 4 ಗಂಟೆಗೆ ಚುನಾವಣಾ ಆಯೋಗ ಪ್ರಕಟಿಸಲಿದೆ. ಜಿ-1 ತನ್ನ ಉದ್ಘಾಟನೆಗಳು, ರಿಬನ್ ಕತ್ತರಿಸುವ ಕಾರ್ಯಕ್ರಮಗಳು ಮತ್ತು ಯೋಜನೆಗಳ ಆರಂಭವನ್ನು ಪೂರ್ಣಗೊಳಿಸಿದ ನಂತರ 2ರಿಂದ ಅನುಮತಿ ದೊರೆತಿರಬಹುದು ಎಂದು ಹೇಳಿದ್ದಾರೆ.
ಚುನಾವಣೆ ವೇಳಾಪಟ್ಟಿ ಘೋಷಣೆಯಾದ ಬಳಿಕ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಆದರೆ 2014ರಿಂದ ಇದು ಮೋದಿ ಕೋಡ್ ಆಫ್ ಕ್ಯಾಂಪೇನಿಂಗ್ ಆಗಿ ಮಾರ್ಪಟ್ಟಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅದರಡಿ ಚುನಾವಣಾ ಪ್ರಚಾರದಲ್ಲಿ ಅವಹೇಳನ, ನಿಂದನೆ, ಬೆದರಿಕೆ ಮತ್ತು ತಪ್ಪು ಮಾಹಿತಿಯ ಹರಡುವಿಕೆ ಹೆಚ್ಚಾಗಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.ಚುನಾವಣಾ ಆಯೋಗ ಇಂದು ಸಂಜೆ ಅಸ್ಸಾಂ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳ ದಿನಾಂಕವನ್ನು ಪ್ರಕಟಿಸಲಿದೆ.
