ಬೆಂಗಳೂರು,ಮಾ.15- ಬೆಂಗಳೂರು ಪೊಲೀಸ್ ಆಯುಕ್ತಾಲಯವನ್ನು ಪುನಾರಚಿಸುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಡಾ.ಕೆ.ಗೋವಿಂದರಾಜ್ ಅವರು 330ರಡಿ ಸಲ್ಲಿಸಿದ್ದ ಸೂಚನೆಗೆ ಉತ್ತರ ನೀಡಿರುವ ಸಚಿವರು, 2025ರ ಡಿಸೆಂಬರ್ 24ರಂದು ಬೆಂಗಳೂರು ಪೊಲೀಸ್ ಆಯುಕ್ತಾಲಯವನ್ನು ಪುನಾರಚಿಸುವ ಬಗ್ಗೆ ತಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿನ ಅಪರಾಧ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ನಿರ್ವಹಣೆ ಕರ್ತವ್ಯಗಳನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಧೀನದಲ್ಲಿ ನಿರ್ವಹಿಸಲಾಗುತ್ತಿದೆ.
ಆಯುಕ್ತರ ಅಧೀನದಲ್ಲಿ ಅಪರ ಪೊಲೀಸ್ ಆಯುಕ್ತರು(ಅಪರಾಧ), ಜಂಟಿ ಪೊಲೀಸ್ ಆಯುಕ್ತರು(ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಜಂಟಿ ಪೊಲೀಸ್ ಆಯುಕ್ತರು(ಸಂಚಾರ) ಅವರ ಮೇಲುಸ್ತುವಾರಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ 12 ಮಂದಿ ಡಿಸಿಪಿ, ಸಂಚಾರಕ್ಕೆ ಸಂಬಂಧಿಸಿದಂತೆ ನಾಲ್ವರು ಡಿಸಿಪಿಗಳು ಹಾಗೂ ಅಪರಾಧಕ್ಕೆ ಸಂಬಂಧಿಸಿದಂತೆ ಇಬ್ಬರು ಡಿಸಿಪಿ ವೃಂದದ ಅಧಿಕಾರಿಗಳಿಂದ ಸಮರ್ಪಕವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
