ಬೆಂಗಳೂರು, ಜೂ.29-ಮುಂಬರುವ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪಂಚ ನಗರ ಪಾಲಿಕೆಗಳ ಚುನಾವಣೆಯಲ್ಲಿ ಹೆಚ್ಚು ಮಹಿಳಾ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಜೆಡಿಎಸ್ ಮುಂದಾಗಿದೆ. ಜೆಡಿಎಸ್ ಮಹಿಳಾ ವಿಭಾಗದ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ನೀಡುವ ಭರವಸೆಯನ್ನು ನೀಡಿದ್ದಾರೆ.
ಮಹಿಳೆಯರನ್ನು ನಿರ್ಲಕ್ಷಿಸಿ, ಪಕ್ಷ ಕಟ್ಟಲು ಸಾಧ್ಯವಿಲ್ಲ. ಹಾಗೆಯೇ ಮಹಿಳೆಯರನ್ನು ಅಲಕ್ಷಿಸಿ ಚುನಾವಣೆಯನ್ನು ಮಾಡಲಾಗದು. ಮಹಿಳೆಯರಿಗೆ ಸಮಪಾಲು ನೀಡಲೇಬೇಕು. ಅದರಂತೆಯೇ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಲ್ಲಿ ಒಟ್ಟು ಸ್ಥಾನಗಳ ಪೈಕಿ 180ಕ್ಕೂ ಹೆಚ್ಚು ವಾರ್ಡುಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ನೀಡುವುದಾಗಿ ಅವರು ಹೇಳಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಹಿಳಾ ಮೀಸಲಾತಿಯ ಕನಸು ಕಂಡವರು. ಪ್ರಧಾನಿ ನರೇಂದ್ರ ಮೋದಿಯವರು ಆ ಕನಸ್ಸನ್ನು ಅನುಷ್ಠಾನಕ್ಕೆ ತರಲು ಶ್ರಮಿಸಿದರು. ಇವರಿಬ್ಬರೂ ನಾಯಕರ ದೂರದೃಷ್ಟಿಯ ಫಲವಾಗಿ ಶೇ.33ರಷ್ಟು ಮಹಿಳೆಯರು ಜನಪ್ರತಿನಿಧಿ ಸಭೆಗಳಲ್ಲಿ ಅವಕಾಶ ಪಡೆಯಲಿದ್ದಾರೆ. ಇದು ಭಾರತೀಯ ರಾಜಕಾರಣದಲ್ಲಿ ದೊಡ್ಡ ಪರಿವರ್ತನೆ ಎಂದು ಅವರು ಬಣ್ಣಿಸಿದ್ದಾರೆ.
ವಯಕ್ತಿಕ ವರ್ಚಸ್ಸು ಮಾತ್ರವಲ್ಲ ಪಕ್ಷದ ಸಂಘಟನೆ ಮಾಡುವ ಶಕ್ತಿ ಇದ್ದವರನ್ನು ಅಭ್ಯರ್ಥಿಗಳನ್ನಾಗಿ ಮಾಡಲು ಪರಿಗಣಿಸಲಾಗುವುದು. ಪಕ್ಷನಿಷ್ಠೆ ಜೊತೆಗೆ ಜನಪರ ಹೋರಾಟಗಳಲ್ಲಿ ಹೆಚ್ಚು ತೊಡಗಿಸಿಕೊಂಡವರಿಗೆ ಅವಕಾಶ ನೀಡಲಾಗುವುದು. ಎಲ್ಲರೂ ವಾರ್ಡುವಾರು ಸಂಘಟನೆ ಮಾಡುವುದನ್ನು ಆರಂಭ ಮಾಡಬೇಕು. ಮನೆಮನೆಗೂ ತಲುಪಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಬೆಂಗಳೂರಿನ ನಗರಕ್ಕೆ ನೀಡಿರುವ ಕೊಡುಗೆಗಳನ್ನು ಮನವರಿಕೆ ಮಾಡಿಕೊಡಬೇಕು ಎಂದು ಸೂಚಿಸಿದ್ದಾರೆ.
ಜನರ ನಡುವೆ ಇದ್ದು ಕೆಲಸ ಮಾಡಿ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿ. ಸಾಮಾಜಿಕ ಜಾಲತಾಣ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ. ನಿಮಗೇಕೆ ಟಿಕೆಟ್ ನೀಡಬೇಕು ಎಂಬ ಬಗ್ಗೆ ಪಕ್ಷಕ್ಕೆ ವಿಶ್ವಾಸ ಮೂಡಿಸಬೇಕು ಎಂದು ಮಹಿಳಾ ಮುಖಂಡರಿಗೆ ಕಿವಿ ಮಾತು ಹೇಳಿದ್ಧಾರೆ.
ಚುನಾವಣೆ ಎಂದರೆ ಸುಮನೆ ಅಲ್ಲ. ನಿಮ ತಯಾರಿ ಉತ್ತಮವಾಗಿರಬೇಕು. ಮುಖಂಡರನ್ನು, ಕಾರ್ಯಕರ್ತರನ್ನು ಒಟ್ಟಾಗಿ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಅದರಲ್ಲಿಯೂ ಮಹಿಳಾ ಮುಖಂಡರು ಮತ್ತು ಕಾರ್ಯಕರ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಪಕ್ಷದ ಕೇಂದ್ರ ಘಟಕವು ಗಮನ ಕೊಡಬೇಕು. ಸಮರ್ಥರಿಗೆ ಪಕ್ಷವು ತಪ್ಪದೇ ಅವಕಾಶ ನೀಡುತ್ತದೆ ಎಂದು ಕುಮಾರಸ್ವಾಮಿ ಅವರು ನಿರ್ದೇಶನ ನೀಡಿದ್ದಾರೆ.
