Homeರಾಜ್ಯಎಸ್‌‍ಐಆರ್‌ : ಅರ್ಹರು ಅವಕಾಶ ವಂಚಿತರಾಗದಂತೆ ಎಚ್ಚರಿಕೆ ವಹಿಸಲು ಪ್ರಿಯಾಂಕ್‌ ಖರ್ಗೆ ಆಗ್ರಹ

ಎಸ್‌‍ಐಆರ್‌ : ಅರ್ಹರು ಅವಕಾಶ ವಂಚಿತರಾಗದಂತೆ ಎಚ್ಚರಿಕೆ ವಹಿಸಲು ಪ್ರಿಯಾಂಕ್‌ ಖರ್ಗೆ ಆಗ್ರಹ

ಬೆಂಗಳೂರು, ಜೂ.29- ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅರ್ಹ ಮತದಾರರನ್ನು ಅವಕಾಶ ವಂಚಿತರಾಗದಂತೆ ಎಚ್ಚರಿಕೆ ವಹಿಸಬೇಕೆಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಗೆ ನಮ ವಿರೋಧವಿಲ್ಲ. ಎಸ್‌‍ಐಆರ್‌ ಪ್ರಕ್ರಿಯೆ ಚುನಾವಣಾ ಆಯೋಗದ ಹಕ್ಕು ಮತ್ತು ಖಡ್ಡಾಯ. ಅದಕ್ಕಿಂತಲೂ ಮುಖ್ಯವಾಗಿ ಶುದ್ಧವಾದ ಮತ್ತು ಉತ್ತಮವಾದ ಮತದಾರರ ಪಟ್ಟಿ ನೀಡುವುದು ಆಯೋಗದ ಜವಾಬ್ದಾರಿ ಎಂದು ಹೇಳಿದರು.

ಇತ್ತೀಚೆಗೆ ತಮಿಳುನಾಡು, ಕೇರಳ, ಪಶ್ಚಿಮಬಂಗಾಳ ಸೇರಿದಂತೆ ಹಲವು ಕಡೆಗಳಲ್ಲಿ ಎಸ್‌‍ಐಆರ್‌ ನಡೆದಾಗ, ಬಡವರನ್ನು ಅವಕಾಶದಿಂದ ವಂಚಿತರನ್ನಾಗಿ ಮಾಡಲಾಗಿದೆ. ಹೀಗಾಗಿ ಆಯೋಗಕ್ಕೆ ನಾವು ಕೆಲ ಪ್ರಶ್ನೆಗಳನ್ನು ಕೇಳಿದ್ದೇವೆ. ಅವುಗಳಿಗೆ ಈವರೆಗೂ ಉತ್ತರ ಬಂದಿಲ್ಲ ಎಂದರು.ಪಶ್ಚಿಮಬಂಗಾಳದಲ್ಲಿ 89 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಅವರಿಗೆ ನ್ಯಾಯಧೀಕರಣದಲ್ಲೂ ಪ್ರಶ್ನೆ ಮಾಡಲು ಅವಕಾಶ ಇಲ್ಲವಾಗಿದೆ. ನ್ಯಾಯಧೀಕರಣದಲ್ಲಿ ಒಬ್ಬ ನ್ಯಾಯಾಧೀಶರು ರಾಜೀನಾಮೆ ನೀಡಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಏಕಾಏಕಿ ಸಾಧ್ಯವಿಲ್ಲ. 4 ವರ್ಷ ಸಮಯ ಬೇಕು ಎಂದಿದ್ದಾರೆ. ಆಯೋಗದ ಅಧಿಕಾರಿಗಳು ನಾವು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿ, ಬಳಿಕ ಎಸ್‌‍ಐಅರ್‌ ಮಾಡಲಿ ಎಂದು ಹೇಳಿದರು.

ಬಲವಂತವಾಗಿ ರೈತರಿಂದ ಭೂಮಿ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಭೂ ಸ್ವಾಧೀನ ಕಾಯ್ದೆ ಸ್ಪಷ್ಟವಾಗಿದೆ. ರೈತರು ಸ್ವ ಇಚ್ಛೆಯಿಂದ ಭೂಮಿ ಕೊಟ್ಟರೆ, ಅಲ್ಲಿ ಅಭಿವೃದ್ಧಿ ಯೋಜನೆಗಳಾಗುತ್ತವೆ. ದೇವನಹಳ್ಳಿ ಬಳಿಯ ಚನ್ನರಾಯ ಪಟ್ಟಣದ ಸಮೀಪ ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತವಾಯಿತು. ಸರ್ಕಾರ ರೈತರ ಪರವಾಗಿ ನಿರ್ಧಾರ ಕೈಗೊಂಡಿದೆ. ಈಗ ಅದೇ ರೈತರು ನಮಗೆ ಕೈಗಾರಿಕೆ ಬೇಕು ಎಂದು ಬೇಡಿಕೆ ಸಲ್ಲಿಸುತ್ತಿದ್ದಾರೆ. ಸರ್ಕಾರ ಪರಿಶೀಲನೆ ಮಾಡುತ್ತಿದೆ ಎಂದು ಹೇಳಿದರು.

2018ರಲ್ಲಿ ನಮ ಮನೆ ಬಾಗಿಲಿಗೆ ಯಾರೆಲ್ಲಾ ಬಂದಿದ್ದರು ಎಂದು ಗೊತ್ತಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್‌ ಖರ್ಗೆ, ಆಗ ಯಾರೆಲ್ಲಾ ಹೋಗಿ ಸರ್ಕಾರ ರಚಿಸಿದ್ದರು ಮತ್ತು ಜೆಡಿಎಸ್‌‍-ಕಾಂಗ್ರೆಸ್‌‍ ಸಮಿಶ್ರ ಸರ್ಕಾರ ಹೇಗೆ ಪಥನವಾಯಿತು ಎಂದು ನಮಗೂ ಚೆನ್ನಾಗಿ ಗೊತ್ತಿದೆ. ಇದೇ ಕುಮಾರಸ್ವಾಮಿಯವರು ಆಗ ಆರ್‌ಎಸ್‌‍ಎಸ್‌‍ ಅನ್ನು ವಿಷ ಜಂತು ಎಂದು ನಿಂದಿಸಿ, ಲೇಖನ ಬರೆದಿದ್ದರು. ಕಾಂಗ್ರೆಸ್‌‍ ಮತ್ತು ಜೆಡಿಎಸ್‌‍ ಸಿದ್ಧಾಂತಗಳು ಒಂದೇ ಎಂದು ಹೇಳಿಕೊಳ್ಳುತ್ತಿದ್ದರು. ಈಗ ಅವರ ಸಿದ್ಧಾಂತ ಬದಲಾಗಿದೆ. ಮನೆ ಬಾಗಿಲಿಗೆ ಯಾರೆಲ್ಲಾ ಬಂದಿದ್ದರೂ ಎಂಬ ಬಗ್ಗೆ ಬೇಕಿದ್ದರೆ ಕುಮಾರಸ್ವಾಮಿಯವರು ಆತಕಥನದಲ್ಲಿ ಬರೆದುಕೊಳ್ಳಲಿ. ನಾವು ನಮಗೆ ಗೊತ್ತಿರುವ ವಿಚಾರಗಳನ್ನು ಬರೆದುಕೊಳ್ಳುತ್ತೇವೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯ ವಿಚಾರವಾಗಿ ವಿರೋಧ ಪಕ್ಷಗಳಿಂದ ನಾವು ಪಾಠ ಕಲಿಯಬೇಕಿಲ್ಲ, ಕಲ್ಯಾಣ ಕರ್ನಾಟಕ ಭಾಗಕ್ಕೆ 371ಜೆ ಅಡಿಯಲ್ಲಿ ವಿಶೇಷ ಸ್ಥಾನಮಾನ ನೀಡಲು ವಿರೋಧ ಮಾಡಿದ್ದು, ಬಿಜೆಪಿಯವರು. ಆ ಪ್ರಸ್ತಾವನೆಯನ್ನು ಆಗಿನ ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಾರ್ಷಿಕ 1 ಸಾವಿರ ಕೋಟಿ ರೂ.ಗಳಿಗಿಂತಲೂ ಕಡಿಮೆ ಅನುದಾನ ನೀಡಲಾಗಿತ್ತು. ನಮ ಸರ್ಕಾರ 5 ಸಾವಿರ ಕೋಟಿ ರೂ. ನೀಡಿದೆ. ಬಿಜೆಪಿ ಅವಧಿಯಲ್ಲಿ ಆರ್‌ಎಸ್‌‍ಎಸ್‌‍ ಮಾನವ ಸಂಪನೂಲ ಸಂಸ್ಥೆ ರಚಿಸಿ 300 ಕೋಟಿ ರೂ. ದುಡ್ಡು ಹೊಡೆಯುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಿದ್ದಾರೆ.

ಬಿಜೆಪಿಯವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಎಸ್‌‍ಐ, ಜಯದೇವ, ಕಿದ್ವಾಯ್‌ ನಂತಹ ಆಸ್ಪತ್ರೆಗಳನ್ನು ಕಟ್ಟಿಸಿದ್ದಾರೆಯೇ? ರೈಲು ನಿಲ್ದಾಣ, ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ್ದಾರೆಯೇ? ಇದನ್ನೆಲ್ಲಾ ಮಾಡಿದ್ದು ನಾವು ಎಂದು ತಿರುಗೇಟು ನೀಡಿದರು.ಕೆಂಪೇಗೌಡ ಜಯಂತಿಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್‌ ಈಶ್ವರ್‌ ಅವರ ವಿರುದ್ಧ ಚಪ್ಪಲಿ ತೂರಿದ ವ್ಯಕ್ತಿಗಳ ವಿರುದ್ಧ ದೂರು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಪ್ರಚೋದನೆ ನೀಡಿದ್ದಾರೆ ಎಂಬುದಾದರೆ, ಅದಕ್ಕೆ ಸಂಬಂಧಪಟ್ಟಂತೆಯೂ ದೂರು ನೀಡಲಿ, ನಾವು ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕಳೆದ ಎರಡು ವಾರಗಳಿಂದ ನಡೆದಿರುವ ಮಹಿಳೆಯರ ಕೊಲೆ ಪ್ರಕರಣದಲ್ಲಿ ಪರಸ್ಪರ ಪರಿಚಯ-ಸಂಬಂಧಗಳು ಕಂಡು ಬಂದಿವೆ. ಇದು ಕಾನೂನು ಸುವ್ಯವಸ್ಥೆಯ ಸಮಸ್ಯೆಯಲ್ಲ ಎಂದು ಹೇಳಿದರು.ವಿಬಿ-ಜಿರಾಮ್‌-ಜಿ ಯೋಜನೆಯಡಿ ರಾಜ್ಯ ಸರ್ಕಾರಗಳ ಮೇಲೆ ಶೇ. 40ರಷ್ಟು ಆರ್ಥಿಕ ಹೊರೆ ಹಾಕಿರುವುದನ್ನು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳೇ ವಿರೋಧ ಮಾಡಿವೆ ಎಂದು ಅವರು ಹೇಳಿದರು.

RELATED ARTICLES

Latest News