ಬೆಂಗಳೂರು,ಜೂ.29- ಕರ್ನಾಟಕದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ(ಎಂ.ಎಸ್.ಇ) ಹಿತಾಸಕ್ತಿಗಳನ್ನು ಪ್ರತಿನಿಧಿಸುವ ರಾಜ್ಯದ ಅತ್ಯುನ್ನತ ಕೈಗಾರಿಕಾ ಸಂಘಟನೆಯಾದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ)ದ ಪ್ರಸಕ್ತ ಸಾಲಿಗೆ ಅಧ್ಯಕ್ಷರಾಗಿ ನಿಂಗಣ್ಣ ಎಸ್.ಬಿರಾದಾರ ಅಧಿಕಾರ ಸ್ವೀಕರಿಸಿದ್ದಾರೆ.
ನಿನ್ನೆ ನಡೆದ ಕಾರ್ಯಕಾರಿ ಸಮಿತಿಯ ಚುನಾವಣೆಯ ನಂತರ ನಡೆದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆದಿದ್ದು, ಉಪಾಧ್ಯಕ್ಷರಾಗಿ ಹೆಚ್. ಎನ್.ರಾಮಕೃಷ್ಣಯ್ಯ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಪ್ರಕಾಶ್, ಖಜಾಂಚಿಯಾಗಿ ಎಸ್.ರವಿರಾಜ್ ಶೆಟ್ಟಿ, ಜಂಟಿ ಕಾರ್ಯದರ್ಶಿ(ನಗರ)ಯಾಗಿ ಎಂ,ಎಂ.ಗಿರಿ, ಜಂಟಿ ಕಾರ್ಯದರ್ಶಿ(ಗ್ರಾಮೀಣ)ಯಾಗಿ ಮಲ್ಲೇಶ್ ಬಿ.ಜಾಡರ್ ಅಧಿಕಾರ ಸ್ವೀಕರಿಸಿದ್ದಾರೆ.
ಹುಬ್ಬಳ್ಳಿಯ ಹೆಸರಾಂತ ಕೈಗಾರಿಕೋದ್ಯಮಿಯಾಗಿರುವ ನಿಂಗಣ್ಣ ಎಸ್. ಬಿರಾದಾರ ಅವರು ವಾಣಿಜ್ಯ ಪದವೀಧರರಾಗಿದ್ದು, ವಿದ್ಯುತ್ ಹಾರ್ಡ್ವೇರ್ ಲೈನ್ ಸಾಮಗ್ರಿಗಳ ತಯಾರಿಕೆಯಲ್ಲಿ ತೊಡಗಿರುವ ಮೆ: ಬನಶಂಕರಿ ಇಂಜಿನಿಯರ್ಸ್ ಸಂಸ್ಥೆಯ ಪಾಲುದಾರರಾಗಿದ್ದಾರೆ. ಹಲವು ದಶಕಗಳ ಉದ್ಯಮಶೀಲ ಅನುಭವದ ಮೂಲಕ ಅವರು, ವಿಶೇಷವಾಗಿ ಉತ್ತರ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ನೀಡಿರುವ ಕೊಡುಗೆಗಾಗಿ ಕೈಗಾರಿಕಾ ವಲಯದಲ್ಲಿ ವಿಶಿಷ್ಟ ಗೌರವ ಗಳಿಸಿದ್ದಾರೆ.
ಭಾರತದ ಪ್ರಮುಖ ಉತ್ಪಾದನಾ ಮತ್ತು ನವೋದ್ಯಮ ಕೇಂದ್ರವಾಗಿ ಕರ್ನಾಟಕವು ವೇಗವಾಗಿ ಬೆಳೆಯುತ್ತಿರುವ ಈ ಮಹತ್ವದ ಸಂದರ್ಭದಲ್ಲಿ ಕಾಸಿಯಾದ ನೂತನ ನಾಯಕತ್ವ ಅಧಿಕಾರ ವಹಿಸಿಕೊಂಡಿದೆ. ನಿಂಗಣ್ಣ ಎಸ್. ಬಿರಾದಾರ್ ಅವರ ನೇತೃತ್ವದಲ್ಲಿ ಕಾಸಿಯಾ, ರಾಜ್ಯದ ಎಂ.ಎಸ್.ಇ. ವಲಯದ ಸಮಗ್ರ ಧ್ವನಿಯಾಗಿ ತನ್ನ ಪಾತ್ರವನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ, ಸರ್ಕಾರಗಳು, ಹಣಕಾಸು ಸಂಸ್ಥೆಗಳು ಹಾಗೂ ಕೈಗಾರಿಕಾ ವಲಯದ ವಿವಿಧ ಹಿತಾಸಕ್ತಿದಾರರೊಂದಿಗೆ ನಿಕಟವಾಗಿ ಸಹಕರಿಸಿ ಸುಸ್ಥಿರ ಕೈಗಾರಿಕಾ ಬೆಳವಣಿಗೆ, ಉದ್ಯೋಗ ಸೃಷ್ಟಿ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವ ಅನುಕೂಲಕರ ಪರಿಸರ ನಿರ್ಮಾಣಕ್ಕೆ ಶ್ರಮಿಸಲಿ ಎಂದು ಗೌರವ ಪ್ರಧಾನ ಕಾರ್ಯದರ್ಶಿ ಸಿ.ಪ್ರಕಾಶ್ ಹಾರೈಸಿದ್ದಾರೆ.
