ಚಿಕ್ಕಮಗಳೂರು, ಮೇ 3- ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಅಂಚೆ ಮತಪತ್ರಗಳನ್ನು ತಿರುಚಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದ್ದಾರೆ.
ಅಂಚೆ ಮತಪತ್ರಗಳ ಮರು ಎಣಿಕೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟ್ರ್ಯಾಂಗ್‌ರೂಮ್‌ನಲ್ಲಿ ಸಂರಕ್ಷಿಸಲಾದ ಬಾಕ್ಸ್ ಗಳನ್ನು ಪರಿಶೀಲಿಸಿದ ವೇಳೆ ಬೀಗ ಒಡೆದಿರುವುದು, ಟ್ರಂಕ್‌ಗಳನ್ನೇ ಮುರಿದಿರುವುದು ಕಂಡು ಬರುತ್ತದೆ. ನನಗೆ ಇದ್ದ ಅಂಚೆ ಮತಗಳಲ್ಲಿ ಮತ್ತೊಂದು ಗೆರೆ ಎಳೆಯುವ ಮೂಲಕ ಅದನ್ನು ಅಮಾನ್ಯಗೊಳಿಸಲು ಸಂಚು ನಡೆದಿದೆ.
ಮತಪತ್ರದಲ್ಲಿ ಮತದಾರರು ಬಳಸಿದ ಪೆನ್ನುಗಿಂತಲೂ ಭಿನ್ನವಾದ ಒಂದೇ ಇಂಕಿನ ಪೆನ್ನನ್ನು ಬಳಸಿ ಗೆರೆ ಎಳೆಯಲಾಗಿದೆ. ನನಗೆ ಬಂದಿದ್ದ ಮತಗಳಲ್ಲಿ 158 ಅಮಾನ್ಯವಾಗಿವೆ. ಈ ಕೃತ್ಯವನ್ನು ಮೂರು ವರ್ಷಗಳ ಹಿಂದೆಯೇ ಮಾಡಲಾಗಿದೆ ಎಂದು ಆರೋಪಿಸಿದರು.
ಮತಗಳನ್ನು ತಿರುಚಿರುವುದರ ವಿರುದ್ಧ ತಾವು ಮಾಜಿ ಶಾಸಕ ಡಿ.ಎನ್.ಜೀವರಾಜ್ ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ನೀಡಿದ್ದೇವೆ ಎಂದು ಹೇಳಿದರು.ಮತ ಎಣಿಕೆಯ ಪ್ರಕ್ರಿಯೆಗೆ ಕಾಂಗ್ರೆಸ್ ಏಜೆಂಟಾಗಿ ಕೆಲಸ ಮಾಡಿದ್ದ ಸುಧೀರ್‌ಕುಮಾರ್ ಮುರೋಳ್ಳಿ ಅವರು, 2023ರ ಮೇ 13 ರಂದು ನಡೆದಿದ್ದ ಮತ ಎಣಿಕೆಯಲ್ಲಿ ಕಾಂಗ್ರೆಸ್‌ನಿಂದ ನಾನು, ಬಿಜೆಪಿಯಿಂದ ಬಿ.ಎ.ಸತೀಶ್, ಜೆಡಿಎಸ್‌ನಿಂದ ಸುಧಾಕರ್ ಶೆಟ್ಟಿ, ಮತ ಏಜೆಂಟರಾಗಿ ಕೆಲಸ ಮಾಡಿದ್ದೆವು. ಆ ವೇಳೆ ಮಾನ್ಯವಾಗಿದ್ದ ಮತಗಳು ಈಗ ಅಮಾನ್ಯವಾಗಿವೆ. ಇದು ಹೇಗೆ ಸಾಧ್ಯ? ದೇಶದ ಚುನಾವಣಾ ರಾಜಕೀಯ ಇತಿಹಾಸದಲ್ಲಿ ಈ ರೀತಿಯಾಗಿರುವುದು ಇದೇ ಮೊದಲ ಬಾರಿ ಎಂದರು.
ಇದಕ್ಕೆ ಯಾರು ಹೊಣೆ? 2023ರ ಮತ ಎಣಿಕೆಯಲ್ಲಿ ಏಜೆಂಟ್ ಆಗಿದ್ದ ಸತೀಶ್ ಅವರು ಸರಿಯಾಗಿ ಗಮನಿಸದೇ ಸಹಿ ಹಾಕಿದ್ದರೇ? ಅದೇ ಸತೀಶ್ ಈಗಲೂ ಬಿಜೆಪಿಯಲ್ಲಿದ್ದಾರೆ. ಈ ಮೊದಲು ಬಿಜೆಪಿಯಿಂದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಎಪಿಎಂಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಈಗ ಡಿಸಿಸಿ ಸದಸ್ಯರಾಗಿದ್ದಾರೆ. ಆ ವೇಳೆ ಚುನಾವಣಾಧಿಕಾರಿಯಾಗಿ ವೇಧಮೂರ್ತಿ ಕೆಲಸ ಮಾಡಿದ್ದರು. ಅವರು ಒಂದು ವೇಳೆ ತಪ್ಪು ಮಾಡಿದ್ದರೆ, ಕಠಿಣ ಶಿಕೆ್ಷ ವಿಧಿಸಬೇಕು. ಮುಂದೆ ಎಲ್ಲಿಯೂ ಈ ರೀತಿ ಆಗಬಾರದು ಎಂದು ಹೇಳಿದರು.
ಮರು ಮತ ಎಣಿಕೆಯಲ್ಲಿ ಗಮನಿಸಿದ ಅಂಶಗಳ ಪ್ರಕಾರ ರಾಜೇಗೌಡ ಅವರಿಗೆ ಬಂದಿದ್ದ ಮತಗಳು ಮಾತ್ರ ಅಮಾನ್ಯಗೊಂಡಿವೆ. ಬಿಜೆಪಿಯ ಡಿ.ಎನ್.ಜೀವರಾಜ್, ಜೆಡಿಎಸ್‌ನ ಸುಧಾಕರ್ ಶೆಟ್ಟಿ ಇತರ ಅಭ್ಯರ್ಥಿಗಳಾದ ಕುಸುಮಾ ಹಾಗೂ ಇತರರಿಗೆ ಚಲಾವಣೆಯಾಗಿದ್ದ ಅಂಚೆ ಮತಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ಮಾನ್ಯವಾಗಿವೆ.
ರಾಜೇಗೌಡರ ಮತಗಳು ಮಾತ್ರ ಅಮಾನ್ಯವಾಗಿರುವುದು ಅನುಮಾನಾಸ್ಪದವಾಗಿದೆ. ರಾಜೇಗೌಡರಿಗೆ ಬಂದಿದ್ದ ಅಂಚೆ ಮತಗಳಲ್ಲಿ ಮತ್ತೊಂದು ಗೆರೆಯನ್ನು ಬೇರೆಯ ಪೆನ್ನು ಬಳಸಿ ಎಳೆಯಲಾಗಿದೆ. ಮತ ಪತ್ರಗಳನ್ನು ಅಮಾನ್ಯಗೊಳಿಸುವ ಷಡ್ಯಂತ್ರದಿಂದಲೇ ಈ ರೀತಿ ಮಾಡಿರುವುದು ಕಂಡು ಬರುತ್ತಿದೆ ಎಂದು ಹೇಳಿದರು.
ಅದೃಷ್ಟವಶಾತ್ ಮತ ಎಣಿಕೆಯ ಬಳಿಕ ಚುನಾವಣಾ ಅಧಿಕಾರಿಗಳು ಫಲಿತಾಂಶ ಪ್ರಕಟಿಸಿಲ್ಲ. ಹೀಗಾಗಿ ಟಿ.ಡಿ. ರಾಜೇಗೌಡ ಅವರೇ ಈಗಲೂ ಶಾಸಕರಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿದರು.
