ಚಿಕ್ಕಮಗಳೂರು,ಏ.19- ರಾಜ್ಯದಲ್ಲಿ ವಿದ್ಯುತ್ ದರವನ್ನು ಹುಚ್ಚಂಬಟ್ಟೆ ಏರಿಕೆ ಮಾಡಿದ್ದಾರೆ. ಇದು ಖಂಡಿತವಾಗಿಯೂ ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವೀರಶೈವ ಸಮುದಾಯ ಭವನ ಉದ್ಘಾಟನೆಗೆ ಆಗಮಿಸಿದ್ದ ಅವರು ಮಾಜಿ ಸಚಿವ ಸಿ.ಟಿ.ರವಿ ಅವರ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಆಡಳಿತ ವೈಫಲ್ಯವನ್ನೂ ಉಲ್ಲೇಖಿಸಿ ಸರಿಯಾಗಿ ಆಡಳಿತ ಮಾಡಲು ಬಾರದೆ, ಹಣಕಾಸಿನ ವ್ಯವಸ್ಥೆಯನ್ನು ಸರಿಪಡಿಸಲು ವಿಫಲವಾಗಿರುವ ಸರ್ಕಾರ ಈಗ ಬೇಕಾಬಿಟ್ಟಿಯಾಗಿ ವಿದ್ಯುತ್ ದರ ಹೆಚ್ಚಿಸಿದೆ ಎಂದು ಆರೋಪಿಸಿದರು.
ಈ ರೀತಿಯಾಗಿ ಏರಿಕೆಯಾದರೆ ಸಾಮಾನ್ಯ ಜನರು ಬದುಕೋದು ಕಷ್ಟವಾಗುತ್ತದೆ. ಸರ್ಕಾರ ಕೂಡಲೇ ಈ ನಿರ್ಧಾರವನ್ನು ವಾಪಸ್ ಪಡೆಯಬೇಕು. ಜನರಿಗೆ ನೆಮದಿಯಿಂದ ಬದುಕಲು ಅವಕಾಶ ಕಲ್ಪಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಮೀಸಲಾತಿ ಜಾರಿ ಮಾಡುತ್ತಿರುವುದು ರಾಜಕೀಯ ಲಾಭಕ್ಕಾಗಿ ಎಂಬುದು ತಪ್ಪು. ಒಳ್ಳೆಯ ನೀತಿ ಯಾವಾಗ ಬಂದರೂ ಒಳ್ಳೆಯದು ಬಸವಣ್ಣ, ಅಕ್ಕಮಹಾದೇವಿ ಅವರು ಅಂದೇ ಹೆಣ್ಣು-ಗಂಡು ಬೇದವಿಲ್ಲದೆ ಸಮಾನ ಹಕ್ಕಿಗಾಗಿ ಹೋರಾಡಿದರು. ಅದೇ ತತ್ವ ಮುಂದುವರಿಯಬೇಕೆಂದರೆ ರಾಜಕೀಯದಲ್ಲಿ ಮಹಿಳೆಯರಿಗೆ ರಾಜಕೀಯ ಪ್ರವೇಶ ಅವಕಾಶ ಕೊಡುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು.
ವಿರೋಧಪಕ್ಷಗಳು ವಿರೋಧ ಮಾಡುವುದು ಸರಿಯಲ್ಲ ಎಂದು ವಿಪಕ್ಷ ನಾಯಕರ ವಿರುದ್ಧ ಕಿಡಿಕಾರಿದರು. ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಅಂತರಿಂದ ಜಯಭೇರಿ ಬಾರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
