ಬೆಂಗಳೂರು,ಮೇ 14- ದೇಶದಲ್ಲಿ ಎಲ್ಲರೂ ಮಿತವ್ಯಯ ವಾಗಿ ಡೀಸೆಲ್ ಮತ್ತು ಪೆಟ್ರೋಲ್ ಬಳಕೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟ ಹಿನ್ನೆಲೆಯಲ್ಲಿ ರಾಜ್ಯಪಾಲರು ತಮ್ಮ ಬೆಂಗಾವಲು ವಾಹನಗಳನ್ನು ಕಡಿತ ಮಾಡಿದ್ದಾರೆ.
ಸಿಐಎಸ್‌ಎಫ್ ಭದ್ರತೆ ಹೊಂದಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹಿಂದಿನಿಂದಲೇ ತಮ ಭದ್ರತಾ ಪಡೆಯ ವಾಹನಗಳನ್ನು ಗಣನೀಯವಾಗಿ ಇಳಿಕೆ ಮಾಡಿದ್ದಾರೆ. ರಾಜ್ಯಪಾಲರಿಗೆ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಿಐಎಸ್‌ಎಫ್ ಮತ್ತು ರಾಜ್ಯಸರ್ಕಾರದ ಭದ್ರತೆಯನ್ನು ನೀಡುತ್ತಿತ್ತು. ಹೀಗಾಗಿ ಯಾವುದೇ ಕಾರ್ಯಕ್ರಮಗಳಿಗೆ ತೆರಳಿದರೆ ಅವರಿಗೆ ಭಾರೀ ಭದ್ರತೆಯನ್ನು ಒದಗಿಸಲಾಗುತ್ತಿತ್ತು.
ಮಧ್ಯಪ್ರಾಚ್ಯದಲ್ಲಿ ತೈಲ ಬಿಕ್ಕಟ್ಟು ಎದುರಾಗಿರುವ ಕಾರಣ ದೇಶದ ಜನತೆ ಮಿತವಾಗಿ ಇಂಧನ ಬಳಸಬೇಕೆಂದು ಮೋದಿಯವರು ಕರೆ ಕೊಟ್ಟಿದ್ದರು. ಇದರ ಪರಿಣಾಮ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಸೇರಿದಂತೆ ಮತ್ತಿತರರು ತಮ ಭದ್ರತಾ ವಾಹನಗಳನ್ನು ಕಡಿತ ಮಾಡಿದ್ದಾರೆ. ಸ್ವತಃ ಪ್ರಧಾನಿಯವರೇ ತಮ ಬೆಂಗಾವಲು ಪಡೆಯ ವಾಹನಗಳನ್ನು ಕಡಿತಗೊಳಿಸಿದ್ದಾರೆ.
