Tuesday, April 21, 2026
Homeರಾಜ್ಯಅಧ್ಮಾತ್ಮ, ತ್ರಿವಿಧ ದಾಸೋಹದ ಧ್ರುವತಾರೆ ಬಾಲಗಂಗಾಧರನಾಥ ಶ್ರೀಗಳು : ಹೆಚ್ಡಿಕೆ ಬಣ್ಣನೆ

ಅಧ್ಮಾತ್ಮ, ತ್ರಿವಿಧ ದಾಸೋಹದ ಧ್ರುವತಾರೆ ಬಾಲಗಂಗಾಧರನಾಥ ಶ್ರೀಗಳು : ಹೆಚ್ಡಿಕೆ ಬಣ್ಣನೆ

HD Kuamraswamy on Sri Balagangadharanath Swamiji

ಆದಿಚುಂಚನಗಿರಿ, ಏ.15- ಕರ್ನಾಟಕದ ಆಧ್ಯಾತ್ಮಿಕ ಮತ್ತು ತ್ರಿವಿಧ ದಾಸೋಹದ ಇತಿಹಾಸದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿದ್ದ ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಅಜರಾಮರ ಧ್ರುವತಾರೆಯಾಗಿದ್ದಾರೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಬಣ್ಣಿಸಿದರು.

ಶ್ರೀಮಠದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಅಸಂಖ್ಯಾತ ಬಡ ಮಕ್ಕಳ ಪಾಲಿಗೆ ಜ್ಞಾನದ ಬೆಳಕಾಗಿ, ಅಸಂಖ್ಯಾತ ಬಡ ಕುಟುಂಬಗಳ ಪ್ರತ್ಯಕ್ಷ ದೈವವಾಗಿ ಮಹಾ ಸ್ವಾಮೀಜಿ ಅವರು ನಮ್ಮ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.

ಅಧ್ಯಾತ್ಮದ ಜತೆಗೆ ಶಿಕ್ಷಣ, ಆರೋಗ್ಯ, ಪರಿಸರ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮ ಜೀವಿತ ಕಾಲದುದ್ದಕ್ಕೂ ಅವಿರತವಾಗಿ ದುಡಿದ ಮಹಾ ಸ್ವಾಮೀಜಿಗಳು ತಮ್ಮ ಸಾಧನೆ ಮತ್ತು ಸಂದೇಶಗಳ ಮೂಲಕ ನಮಗೆಲ್ಲರಿಗೂ ದಾರಿದೀಪವಾಗಿದ್ದಾರೆ ಎಂದು ಹೇಳಿದರು.

ಸಣ್ಣ ಮಠವಾಗಿದ್ದ ಆದಿಚುಂಚನಗಿರಿ ಕ್ಷೇತ್ರವನ್ನು ಜಾಗತಿಕ ಶ್ರದ್ಧಾ ಕೇಂದ್ರವನ್ನಾಗಿ ಬೆಳೆಸಿ ಮಹಾವೃಕ್ಷವನ್ನಾಗಿ ರೂಪಿಸಿದ 71ನೆ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಭೈರವೈಕ್ಯ ಮಂದಿರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿರುವುದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಕರ್ನಾಟಕದಲ್ಲಿ ಶಿಕ್ಷಣ, ಪರಿಸರ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ವೌನಕ್ರಾಂತಿ ಮಾಡಿದವರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು. ಜೋಳಿಗೆ ಹಿಡಿದು ಹಳ್ಳಿ ಹಳ್ಳಿ ಸುತ್ತಿ ರೈತಾಪಿ ಮಕ್ಕಳ ಜ್ಞಾನಾರ್ಜನೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ನಗರಗಳಿಗೆ ಸೀಮಿತವಾಗಿದ್ದ ಗುಣಮಟ್ಟದ ಆರೋಗ್ಯ ಸೇವೆಯನ್ನು ಹಳ್ಳಿಗಳಿಗೂ ಅದರಲ್ಲೂ ಬಡ ರೈತರ ಮನೆ ಬಾಗಿಲಿಗೆ ವಿಸ್ತರಿಸಿದ ಖ್ಯಾತಿ ಪೂಜ್ಯರಿಗೆ ಸಲ್ಲುತ್ತದೆ ಎಂದು ಅವರು ಬಣ್ಣಿಸಿದರು.

ಪರಿಸರ ಕ್ಷೇತ್ರದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಕೊಡುಗೆ ಅನನ್ಯ. ಸುಮಾರು 5 ಕೋಟಿ ಸಸಿಗಳನ್ನು ಬೆಳೆಸಿದ ಮಹಾನ್‌ ತಪಸ್ವಿ. ಅವರು ನೆಟ್ಟ ಸಣ್ಣ ಸಣ್ಣ ಸಸಿಗಳು ಇಂದು ಮಹಾವೃಕ್ಷಗಳಾಗಿ ಬೆಳೆದಿವೆ. ಆದಿಚುಂಚನಗಿರಿ ಕ್ಷೇತ್ರ ಬಹುವಿಧ ದಾಸೋಹಗಳಲ್ಲಿ ದೊಡ್ಡ ಹೆಸರು ಮಾಡಿದೆ. ಕಷ್ಟ ಎಂದು ಬರುವ ದೀನದಲಿತರಿಗೆ ಕಲ್ಪವೃಕ್ಷವಾಗಿದೆ. ಜ್ಞಾನ ಎಂದು ಬರುವವರಿಗೆ ಕಾಮಧೇನು. ಸನಾತನ ಪರಂಪರೆ ಮತ್ತು ಆಧುನಿಕತೆಯ ಮಹಾಸಂಗಮವಾಗಿ, ಮೇರು ಮಹಾ ಪುಣ್ಯಕ್ಷೇತ್ರವಾಗಿ ನಮಗೆಲ್ಲರಿಗೂ ದಾರಿದೀಪವಾಗಿದೆ ಎಂದು ಅವರು ಹೇಳಿದರು.

ಶ್ರೀಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸೂರ್ತಿ ಪಡೆಯೋಣ. ಪ್ರಧಾನಮಂತ್ರಿ ನರೇಂದ್ರಮೋದಿ ಅವರ ನಾಯಕತ್ವವು ಕೇವಲ ಮೆಚ್ಚುಗೆಗೆ ಪಾತ್ರವಾಗಿಲ್ಲ. ಈ ರಾಷ್ಟ್ರದ ಲಕ್ಷಾಂತರ ಹೃದಯಗಳಲ್ಲಿ ಆಳವಾಗಿ ನೆಲೆಸಿದೆ. ಅವರ ನಾಯಕತ್ವದಲ್ಲಿ ರಾಷ್ಟ್ರವು ಶಕ್ತಿ, ಕರುಣೆ ಮತ್ತು ಪ್ರಗತಿಯರ ನಿರಂತರ ಅನ್ವೇಷಣೆಯನ್ನು ನೋಡುತ್ತಿದೆ. ಇಂದು ಲೋಕಾರ್ಪಣೆಗೊಂಡಿರುವ ಮಂದಿರವು ಮುಂದಿನ ಪೀಳಿಗೆಗೆ ಮಾರ್ಗದರ್ಶಕ ಬೆಳಕಾಗಿ ನಿಲ್ಲಲಿ. ಸೇವೆ, ಆಧ್ಯಾತ್ಮಿಕತೆ ಮತ್ತು ಏಕತೆಯನ್ನು ನಮಗೆ ನೆನಪಿಸಲಿ ಎಂದು ಕುಮಾರಸ್ವಾಮಿ ಹೇಳಿದರು.

RELATED ARTICLES

Latest News