Homeರಾಜ್ಯಸಂಪುಟ ವಿಸ್ತರಣೆ ಕುರಿತು ಅಕಾಂಕ್ಷಿಗಳಲ್ಲಿ ಹೆಚ್ಚಿದ ಕುತೂಹಲ

ಸಂಪುಟ ವಿಸ್ತರಣೆ ಕುರಿತು ಅಕಾಂಕ್ಷಿಗಳಲ್ಲಿ ಹೆಚ್ಚಿದ ಕುತೂಹಲ

Increased curiosity among aspirants about cabinet expansion

ಬೆಂಗಳೂರು, ಜು.24- ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಪ್ರತಿಭಟನೆಯ ಕಾವು ಕೊಂಚ ತಣ್ಣಗಾಗುತ್ತಿದ್ದಂತೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಮುನ್ನೆಲೆಗೆ ಬರಲಾರಂಭಿಸಿದೆ.
ಕಾಂಗ್ರೆಸ್‌‍ ಹೈಕಮಾಂಡ್‌ ನಾಯಕರಾದ ರಾಹುಲ್‌ ಗಾಂಧಿ, ಸೋನಿಯಾಗಾಂಧಿ, ಪ್ರಿಯಾಂಕ ಗಾಂಧಿ ನಿನ್ನೆಯವರೆಗೂ ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ದೌರ್ಜನ್ಯದ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.

ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಗಾಂಧಿ ಗುರುವಾರ ತಡರಾತ್ರಿ 8.30ರವರೆಗೂ ಗಾಂಧಿಸತಿ ಸ್ಥಳಕ್ಕೆ ಭೇಟಿ ನೀಡಿದ್ದರು. ಇಂಡಿಯಾ ಬ್ಲಾಕ್‌ನ ಎಲ್ಲಾ ಸಂಸದರೊಟ್ಟಿಗೆ ಸೇರಿ ಪ್ರಯಾಣಿಸುತ್ತಿದ್ದ ರಾಹುಲ್‌ ಗಾಂಧಿಯವರಿದ್ದ ಬಸ್‌‍ ಅನ್ನು ಪೊಲೀಸರು ತಡೆದರು. ಸುರಿಯುವ ಮಳೆಯಲ್ಲೇ ಬಸ್‌‍ನಿಂದ ಕೆಳಗೆ ಇಳಿದು ರಾಹುಲ್‌ಗಾಂಧಿ ಪಾದಯಾತ್ರೆ ನಡೆಸಿದ್ದರು. ಕೆ.ಸಿ.ವೇಣುಗೋಪಾಲ್‌ ಸೇರಿದಂತೆ ಎಲ್ಲಾ ಪ್ರಮುಖ ನಾಯಕರು ಅಲ್ಲಿಯೇ ಉಳಿದಿದ್ದರಿಂದ ರಾಜ್ಯ ನಾಯಕರಿಗೆ ಅವರೊಂದಿಗೆ ಯಾವುದೇ ಸಂವಹನ ಸಾಧ್ಯವಾಗಲಿಲ್ಲ.

ಮೂಲಗಳ ಪ್ರಕಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಇಂದು ಸಂಜೆ ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇತ್ತು. ನಾಳೆ ಮತ್ತು ನಾಡಿದ್ದು ಸಂಸತ್‌ ಕಲಾಪಕ್ಕೆ ಬಿಡುವು ಇರುವುದರಿಂದ ವರಿಷ್ಠ ನಾಯಕರು ಚರ್ಚೆಗೆ ಲಭ್ಯವಿರುತ್ತಾರೆ ಎಂಬ ಕಾರಣಕ್ಕೆ ದೆಹಲಿಗೆ ತೆರಳಲು ತಯಾರಿಗಳಾಗಿದ್ದವು. ಆದರೆ ಹೈಕಮಾಂಡ್‌ ನಾಯಕರ ಜೊತೆ ಸಂಪರ್ಕ ಸಾಧ್ಯವಾಗದೇ ಇದ್ದರಿಂದ ಪ್ರವಾಸ ಅನಿಶ್ಚಿತತೆಗೆ ಸಿಲುಕಿದೆ.

ದೆಹಲಿಯಲ್ಲಿ ಸಂಪುಟ ವಿಸ್ತರಣೆ, ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ, ವಿಧಾನ ಸಭಾಧ್ಯಕ್ಷರ ನೇಮಕ, ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಾಮ ನಿರ್ದೇಶನ, ಎರಡೂವರೆ ವರ್ಷ ಅವಧಿ ಕಳೆದ ನಿಗಮ ಮಂಡಳಿಗಳಿಗೆ ಹೊಸ ಅಧ್ಯಕ್ಷರ ನಿಯೋಜನೆ, ಕೆಪಿಸಿಸಿಯ ಎಲ್ಲಾ ಸಮಿತಿಗಳ ಪುನರ್‌ರಚನೆ, ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ, 2028ರ ವಿಧಾನಸಭೆ, 2029ರ ಲೋಕಸಭಾ ಚುನಾವಣೆ ಕುರಿತು ಹೈಕಮಾಂಡ್‌ ನಾಯಕರ ಜೊತೆ ರಾಜ್ಯದ ಮೂವರು ಪ್ರಮುಖ ನಾಯಕರು ಚರ್ಚೆ ನಡೆಸುವ ಸಾಧ್ಯತೆ ಇತ್ತು.

ಈ ನಡುವೆ ಜಾತಿಜನಗಣತಿಯ ವರದಿ ಅನುಷ್ಠಾನಗೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸುತ್ತಿದ್ದು, ಆ ಕುರಿತು ಹೈಕಮಾಂಡ್‌ ನಾಯಕರ ಜೊತೆ ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ಆದರೆ ಹೈಕಮಾಂಡ್‌ ನಾಯಕರು ನಿರ್ಧಿಷ್ಟ ಸಮಯದ ಕುರಿತು ಮಾಹಿತಿ ನೀಡದ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸದ ಬಗ್ಗೆ ಅಸ್ಪಷ್ಟತೆ ಇದೆ.

ನಾಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಬರ ನಿರ್ವಹಣೆ ಕುರಿತು ಬೆಂಗಳೂರು ವಿಭಾಗದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಹೈಕಮಾಂಡ್‌ ಸಮಯ ನೀಡಿದರೆ ಸಭೆ ಬಳಿಕ ಸಂಜೆಯ ನಂತರ ದೆಹಲಿಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿಗೆ ಮರಳುವ ಸಾಧ್ಯತೆಯಿರುವುದರಿಂದ ಬೆಂಗಳೂರಿನಲ್ಲೇ ಅವರೊಟ್ಟಿಗೆ ಚರ್ಚೆ ನಡೆಸಬಹುದು ಎಂದು ಹೇಳಲಾಗುತ್ತಿದೆ. ಆದರೆ ಸಂಪುಟ ವಿಸ್ತರಣೆ ಕುರಿತಂತೆ ರಾಹುಲ್‌ ಗಾಂಧಿಯವರೇ ಖುದ್ದು ಮೇಲುತ್ಸುವಾರಿ ನೋಡುತ್ತಿರುವುದರಿಂದ ಅವರೊಂದಿಗೆ ಚರ್ಚೆ ನಡೆಸುವುದು ಅನಿವಾರ್ಯವಾಗಿದೆ.ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಂಪುಟ ವಿಸ್ತರಣೆ ಕುರಿತು ಆತುರ-ಕಾತುರಗಳು ತೀವ್ರವಾಗಿ ಹೆಚ್ಚಾಗಿವೆ.

RELATED ARTICLES

Latest News