Thursday, April 16, 2026
Homeರಾಜ್ಯಬಾಲಕ ಮೇಲೆ ಚಿರತೆ ದಾಳಿ, ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರಲ್ಲಿ ಆತಂಕ

ಬಾಲಕ ಮೇಲೆ ಚಿರತೆ ದಾಳಿ, ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರಲ್ಲಿ ಆತಂಕ

Leopard attacks boy, worries among devotees going to Mahadeshwara hill

ಚಾಮರಾಜನಗರ,ಫೆ.11- ಜಿಲ್ಲೆಯ ಪ್ರಸಿದ್ಧ ಮಲೈಮಹದೇಶ್ವರ ಬೆಟ್ಟದಲ್ಲಿ ಮತ್ತೆ ಚಿರತೆ ದಾಳಿ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಬಾಲಕ ಪಾರಾಗಿದ್ದು, ಭಕ್ತರಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ. ಇತ್ತೀಚೆಗಷ್ಟೇ ಮಂಡ್ಯ ಜಿಲ್ಲೆಯ ಚೀರನಹಳ್ಳಿಯ ಪ್ರವೀಣ್‌ ಎಂಬ ಯುವಕ ಮಹದೇಶ್ವರ ಬೆಟ್ಟದ ರಂಗಸ್ವಾಮಿ ಒಡ್ಡು ಬಳಿ ಚಿರತೆ ದಾಳಿಗೆ ಬಲಿಯಾಗಿದ್ದ ಈ ಘಟನೆ ಮಾಸುವ ಮುನ್ನವೇ ನಿನ್ನೆ ಮತ್ತೊಂದು ಅವಘಡ ಸಂಭವಿಸಿದೆ.

ಪಾದಯಾತ್ರೆ ಮೂಲಕ ಬೆಟ್ಟಕ್ಕೆ ತೆರಳುತ್ತಿದ್ದ ಮಳವಳ್ಳಿ ತಾಲ್ಲೂಕಿನ ಭುವನಹಳ್ಳಿ ಗ್ರಾಮದ 10 ವರ್ಷದ ಚೇತನ್‌ ಎಂಬ ಬಾಲಕನ ಮೇಲೆ ತಾಳಬೆಟ್ಟದ ಎಂಟನೇ ತಿರುವಿನಲ್ಲಿ ಚಿರತೆ ದಾಳಿ ನಡೆಸಿದೆ.

ಜೊತೆಯಲ್ಲಿದ್ದ ಪಾದಯಾತ್ರಿಗಳು ಗಲಾಟೆ ಮಾಡುತ್ತಿದ್ದಂತೆ ಕಾಡಿನೊಳಗೆ ಚಿರತೆ ಓಡಿಹೋಗಿದೆ. ಬಾಲಕನ ಮುಖಕ್ಕೆ ಗಂಭೀರ ಗಾಯವಾಗಿದ್ದು, ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅದೃಷ್ಟವಶಾತ್‌ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಹೈ ಅಲರ್ಟ್‌ :
ಮಹಾಶಿವರಾತ್ರಿ ಪ್ರಯುಕ್ತ ಮಹದೇಶ್ವರ ಬೆಟ್ಟಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಕಾಲ್ನಡಿಗೆಯಲ್ಲಿ ಬರುತ್ತಿದ್ದು, ಅದರಲ್ಲೂ ಜಿಲ್ಲೆಯ ಗಡಿಭಾಗದಲ್ಲಿ ಹರಿಯುವ ಕಾವೇರಿ ನದಿಯನ್ನು ದಾಟಿ ಬೆಟ್ಟಕ್ಕೆ ತೆರಳುತ್ತಿದ್ದಾರೆ.ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು, ಎರಡೂ ದಡಗಳಲ್ಲಿ ಹಗ್ಗ ಕಟ್ಟಿದ್ದು, ಭದ್ರತಾ ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಸುರಕ್ಷಿತವಾಗಿ ಭಕ್ತರನ್ನು ನದಿ ದಾಟಿಸುತ್ತಿದ್ದಾರೆ.

ಜಿಲ್ಲಾಡಳಿತ, ಅರಣ್ಯ ಇಲಾಖೆ ಹಾಗೂ ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಕ್ರಮ ಕೈಗೊಂಡಿದ್ದು, ಪ್ರತಿ ಕಿಲೋಮೀಟರ್‌ಗೆ ತಂಡವೊಂದನ್ನು ನಿಯೋಜಿಸಿದ್ದು, ಆ ತಂಡದಲ್ಲಿ ನಾಲ್ವರು ಕಾರ್ಯ ನಿರ್ವಹಿಸುತ್ತಿದ್ದು, ಪಾದಯಾತ್ರಿಗಳ ಸುರಕ್ಷತೆಗೆ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಡ್ರೋನ್‌ ಕ್ಯಾಮೆರಾದ ಮೂಲಕ ಕಾಡುಪ್ರಾಣಿಗಳ ಚಲನವಲನಗಳನ್ನು ಗಮನಿಸಲಾಗುತ್ತಿದೆ.

ಇಷ್ಟೆಲ್ಲಾ ಸುರಕ್ಷತಾ ಕ್ರಮ ಕೈಗೊಂಡಿದ್ದರೂ ಸಹ ಚಿರತೆ ದಾಳಿ ನಡೆಸಿರುವುದು ಭಕ್ತರಲ್ಲಿ ಆತಂಕ ಸೃಷ್ಟಿಸಿದೆ.ಪಾದಯಾತ್ರೆ ಮೂಲಕ ಬೆಟ್ಟಕ್ಕೆ ತೆರಳುವವರು ಗುಂಪುಗುಂಪಾಗಿ ಹೋಗಬೇಕು. ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನಗಳಲ್ಲಿ ಹೋಗದಂತೆ ಎಚ್ಚರಿಕೆ ಕೂಡ ನೀಡಲಾಗಿದೆ.

ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಬೆಟ್ಟದಲ್ಲಿ ಭಕ್ತರ ಸಮೂಹ ಜೋರಾಗಿದ್ದು, ಮಾದಪ್ಪನನ್ನು ಕಣ್ತುಂಬಿಕೊಂಡು ಉಘೇ ಉಘೇ ಮಾದಪ್ಪ ಹರ್ಷೋದ್ಘಾರದ ನಡುವೆ ಭಕ್ತಿ ಸಮರ್ಪಿಸುತ್ತಿದ್ದಾರೆ.

RELATED ARTICLES

Latest News