ಬೆಂಗಳೂರು, ಜು.31-ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ ಅರ್ಹರಾದ ಹಾಗೂ ಎನ್ಟಿಎ ಅರ್ಜಿಯಲ್ಲಿ ಕರ್ನಾಟಕ ಎಂದು ನಮೂದಿಸಿದ್ದ ಅಭ್ಯರ್ಥಿಗಳ ಅಂಕಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಅಖಿಲ ಭಾರತ ಮಟ್ಟದಲ್ಲಿ 20ನೇ ರ್ಯಾಂಕ್ ಪಡೆದಿರುವ ಅಭ್ಯರ್ಥಿ ರಾಜ್ಯದ ರ್ಯಾಂಕ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಒಟ್ಟು 69,170 ಮಂದಿಯ ಅಂಕಪಟ್ಟಿಯನ್ನು ಆರೋಹಣ ಕ್ರಮದಲ್ಲಿ ಪ್ರಕಟಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 3ರವರೆಗೆ ಅವಕಾಶ: ಯುಜಿ ನೀಟ್-2026ರ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ಗಳ ಪ್ರವೇಶಕ್ಕೆ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ತಮ ನೀಟ್ ರೋಲ್ ನಂಬರ್ ಅನ್ನು ಸಿಇಟಿ-2026 ಅರ್ಜಿ ಜತೆ ಜೋಡಿಸಲು ಪ್ರಾಧಿಕಾರದ ವೆಬ್ಸೈಟ್ನಲ್ಲಿ ಲಿಂಕ್ ಪ್ರಕಟಿಸಲಾಗಿದೆ.
ನೀಟ್ ರೋಲ್ ನಂಬರ್ ದಾಖಲಿಸಿದ ನಂತರ ಹೊಸದಾಗಿ ಅರ್ಜಿ ಮತ್ತು ವೆರಿಫಿಕೇಷನ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ. ನೀಟ್ ರೋಲ್ ನಂಬರ್ ದಾಖಲಿಸಲು ಆಗಸ್ಟ್ 3 ರವರೆಗೆ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
