ಬೆಂಗಳೂರು, ಜೂ.16- ಇಂದು ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪತ್ತು ಬಯಲಿ ಗೆಳೆದಿದ್ದಾರೆ. ಅಕ್ರಮದ ಬಗ್ಗೆ ಬಂದ ದೂರುಗಳ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಇಂದು ರಾಜ್ಯದ 40 ಕ್ಕೂ ಹೆಚ್ಚು ಕಡೆ ಕಾರ್ಯಾಚರಣೆ ಕೈಗೊಂಡು ಸರ್ಕಾರಿ ಅಧಿಕಾರಿಗಳ ಸ್ಥಿರಚರಾಸ್ತಿ, ಕೋಟ್ಯಂತರ ರೂ. ನಗದು, ವಿವಿಧ ವಲಯಗಳಲ್ಲಿ ಹೂಡಿಕೆ, ಚಿನ್ನಾಭರಣ ಸೇರಿದಂತೆ ಐಶಾರಾಮಿ ವಸ್ತುಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ಬೆಂಗಳೂರು, ಕಲಬುರಗಿ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಧಾರವಾಡ ಸೇರಿದಂತೆ ಹಲವೆಡೆ ದಾಳಿ ನಡೆದಿದೆ.ದಾವಣಗೆರೆಯ ಲೋಕಾ ಯುಕ್ತ ಎಸ್ಪಿ ಎಂ.ಎಸ್.ಕೌಲಾಪುರ ನೇತೃತ್ವದಲ್ಲಿ ಹುಬ್ಬಳ್ಳಿಯ ಕೆಎಸ್‌ಆರ್‌ಟಿಸಿ (ವಾಯವ್ಯ) ಮುಖ್ಯ ಮೆಕ್ಯಾನಿಕ್ ಆಗಿರುವ ಸಿದ್ದೇಶ್ವರ ಹೆಬ್ಬಾಳ್ ಅವರಿಗೆ ಸೇರಿದ ವಾಣಿಜ್ಯ ಮಳಿಗೆಗಳು, ಕಚೇರಿ, ಮನೆ ಸೇರಿದಂತೆ 12ಕ್ಕೂ ಹೆಚ್ಚು ಕಡೆ ಶೋಧ ಕಾರ್ಯಾಚರಣೆ ನಡೆದಿದೆ.
ದಾವಣಗೆರೆ ನಗರದ ಆಂಜನೇಯ ಬಡಾವಣೆಯಲ್ಲಿ ರುವ ಮನೆ, ಹುಬ್ಬಳ್ಳಿಯ ಕಚೇರಿ ಸೇರಿದಂತೆ ಹಲವೆಡೆ ದಾಳಿ ನಡೆದಿದ್ದು, ಈ ವೇಳೆ ಮನೆಯಲ್ಲಿ ಸುಮಾರು 40 ಲಕ್ಷ ರೂ. ಹಣ ಪತ್ತೆಯಾಗಿದೆ. ಇದಲ್ಲದೆ ಕೆಜಿಗಟ್ಟಲೆ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು ಸೇರಿದಂತೆ ರಾಜ್ಯದ ಹಲವೆಡೆ ನಿವೇಶನಗಳು ಮತ್ತು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡಿರುವುದು ಕಂಡುಬಂದಿದೆ.
ಚಿತ್ರದುರ್ಗದಲ್ಲಿ ಬಯಲು ಸೀಮೆ ಪ್ರಾಧಿಕಾರದ ಕೃಷ್ಣಾನಾಯಕ್‌ಗೂ ಲೋಕಾಯುಕ್ತ ಶಾಕ್ ನೀಡಿದೆ. ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಅವರ ಮನೆ, ಚಿತ್ರದುರ್ಗದ ಕಚೇರಿ ಸೇರಿ 5 ಕಡೆ ದಾಳಿ ನಡೆಸಲಾಗಿದ್ದು, ಇವರ ಐಶಾರಾಮಿ ಮನೆಯಲ್ಲಿ ಬೆಲೆ ಬಾಳುವ ಅಲಂಕಾರಿಕ ವಸ್ತುಗಳು ಪತ್ತೆಯಾಗಿವೆ. ಇದಲ್ಲದೆ ಹಲವೆಡೆ ಕೃಷಿ ಜಮೀನು, ನಿವೇಶನಗಳು ಇವರ ಕುಟುಂಬದವರ ಹೆಸರಿನಲ್ಲಿರುವುದು ಪತ್ತೆಯಾಗಿದ್ದು, ಹಲವೆಡೆ ಎಪಿಎಂಸಿ ಮಳಿಗೆಯನ್ನೂ ಕೂಡಾ ಬೇನಾಮಿಯಾಗಿ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಳಗಾವಿಯಲ್ಲಿ ಕೆಆರ್‌ಡಿಎಲ್ ಅಧೀಕ್ಷಕ ಎಂಜಿನಿಯರ್ ಸಣ್ಣ ಕೆಂಚಪ್ಪ ಅವರ ಮೂಲ ಚಿತ್ರದುರ್ಗ, ದಾವಣಗೆರೆ ಸೇರಿದಂತೆ 5ಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ. ಹಳ್ಳಿಕೇಡಿ ಗ್ರಾಮದಲ್ಲಿರುವ ತೋಟದ ಮನೆ, ಹುಮ್ನಾಬಾದ್‌ನಲ್ಲಿರುವ 2 ವಾಣಿಜ್ಯ ಕಾಂಪ್ಲೆಕ್ಸ್ ಗಳ ಮೇಲೂ ದಾಳಿ ನಡೆದಿದೆ.
ಲೋಕಾಯುಕ್ತ ಎಸ್ಪಿ ಸಿದ್ಧರಾಜು ನೇತೃತ್ವದಲ್ಲಿ ಬೆಳ್ಳಂಬೆಳಿಗ್ಗೆ ಅವರ ಮನೆಗೆ ಭೇಟಿ ನೀಡಿದ ಅಧಿಕಾರಿಗಳನ್ನು ಕಂಡು ಕುಟುಂಬಸ್ಥರು ಶಾಕ್ ಆಗಿದ್ದಾರೆ. ಮನೆಯಲ್ಲಿ ತಪಾಸಣೆ ವೇಳೆ ಆಸ್ತಿ ದಾಖಲೆಗಳು, ವಿದೇಶಿ ವಾಚ್‌ಗಳು ಸೇರಿದಂತೆ ಚಿನ್ನಾಭರಣ, ನಗದು ಪತ್ತೆಯಾಗಿದ್ದು, ಹಲವೆಡೆ ನಿವೇಶನಗಳನ್ನು ಹೊಂದಿರುವ ಮಾಹಿತಿ ಇದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.ಕಲಬುರಗಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ನ ನಿವೃತ್ತ ಸೂಪರಿಡೆಂಟೆಂಟ್ ಇಂಜಿನಿಯರ್ ನಿವಾಸದದಲ್ಲೂ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದು ಕುತೂಹಲ ಕೆರಳಿಸಿದೆ.
ಸ್ವತಃ ಲೋಕಾಯುಕ್ತ ಎಸ್ಪಿ ಸಿದ್ಧರಾಜು ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಇವರು ಕರ್ತವ್ಯದಲ್ಲಿದ್ದಾಗ ಅಕ್ರಮದ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಮೂಲತಃ ಬೀದರ್‌ನವರಾದ ಇವರ ಹುಮ್ನಾಬಾದ್‌ನಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದು, ಇವರಿಗೆ ಹಳ್ಳಿಖೇಡ ಗ್ರಾಮದಲ್ಲಿ ತೋಟದ ಮನೆ ಹಾಗೂ ಹುಮ್ನಾಬಾದ್‌ನಲ್ಲೇ 2 ವಾಣಿಜ್ಯ ಕಾಂಪ್ಲೆಕ್‌್ಸಗಳಿರುವುದು ಗೊತ್ತಾಗಿದೆ.ಚಿಕ್ಕಮಗಳೂರಿನಲ್ಲಿ ಎಸಿಎಫ್ ಮೋಹನ್ ಅವರ ಕಚೇರಿ ಹಾಗೂ ಕಡೂರಿನಲ್ಲಿರುವ ಅವರ ನಿವಾಸ ಹಾಗೂ ಅವರ ಸಂಬಂಧಿಕರ ಮನೆಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಇವರ ಮನೆಯಲ್ಲಿ ಕೆಲವು ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಕೃಷಿ ಜಮೀನು ಹಾಗೂ ವಾಣಿಜ್ಯ ಮಳಿಗೆಗಳು ಕೂಡಾ ಹೊಂದಿರುವುದು ಗೊತ್ತಾಗಿದೆ. ಇವರ ಸಂಬಂಧಿಕರ ಹೆಸರಿನಲ್ಲಿ ರೆಸಾರ್ಟ್ ಕೂಡಾ ಇದೆ ಎಂದು ಹೇಳಲಾಗುತ್ತಿದ್ದು, ಅಪಾರವಾದ ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
