ಬೆಂಗಳೂರು, ಜೂ. 17- ರಾಜ್ಯ ಸಾರಿಗೆ ಇಲಾಖೆಯಲ್ಲಿ ಶೇ.50ಕ್ಕಿಂತಲೂ ಹೆಚ್ಚಿನ ಹುದ್ದೆಗಳು ಖಾಲಿಯಿರುವುದರಿಂದ ದಿನನಿತ್ಯದ ಸಾರಿಗೆ ಇಲಾಖೆಯ ದೈನಂದಿನ ಚಟುವಟಿಕೆಗಳಿಗೆ ತೀವ್ರ ಅಡಚಣೆಯಾಗುತ್ತಿದ್ದು, ಬಾಕಿ ಹುದ್ದೆಗಳ ಭರ್ತಿಗೆ ನೂತನ ಸಚಿವರಿಗೆ ಸವಾಲಾಗಿದೆ.
ಹಿಂದೆ ಸಾರಿಗೆ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಬಾಕಿ ಹುದ್ದೆಗಳ ಭರ್ತಿಗೆ ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಒಳಮೀಸಲಾತಿಯ ಕಾರಣಕ್ಕಾಗಿ ಅದು ಸಾಧ್ಯವಾಗಲಿಲ್ಲ. ಸಾರಿಗೆ ಇಲಾಖೆಯ ಆಡಳಿತ ಮತ್ತು ಕಾರ್ಯಾಂಗಕ್ಕೆ ಒಟ್ಟು 2800 ಹುದ್ದೆಗಳು ಮಂಜೂರಾಗಿವೆ. ಅವುಗಳ ಪೈಕಿ 1541 ಹುದ್ದೆಗಳು ಖಾಲಿಯಿದ್ದು, ಶೇಕಡವಾರು 45 ರಷ್ಟು ಸಿಬ್ಬಂದಿಗಳ ಕೊರತೆಯಿದೆ. ಈಗ ಒಳಮೀಸಲಾತಿಯ ವಿವಾದ ಬಗೆಹರಿದಿರುವುದರಿಂದ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸುತ್ತಿರುವುದಾಗಿ ಸಾರಿಗೆ ಇಲಾಖೆ ತಿಳಿಸಿದೆ.
ಆದರೆ ಆರ್ಥಿಕ ಇಲಾಖೆಯ ಅನುಮೋದನೆ ಸಿಕ್ಕಿರುವುದು ಬೆರಳೆಣಿಕೆಯ ಹುದ್ದೆಗಳಿಗಷ್ಟೆ. ಅನುಮೋದಿತ ಹುದ್ದೆಗಳು ನೇಮಕವಾದರೂ ಕೂಡ ಸಾರಿಗೆ ಇಲಾಖೆಯ ಕಾರ್ಯನಿರ್ವಹಣೆ ಚುರುಕು ಪಡೆಯಲು ಸಾಧ್ಯವಿಲ್ಲ. ಭಾರೀ ಸಂಖ್ಯೆಯಲ್ಲಿ ಸಿಬ್ಬಂದಿಗಳ ಕೊರತೆಯನ್ನು ಅನುಭವಿಸುತ್ತಿರುವ ಸಾರಿಗೆ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ನಿಧಾನಗತಿಗೆ ದಿನನಿತ್ಯ ಜನಸಾಮಾನ್ಯರು ಇಡೀ ಶಾಪ ಹಾಕುತ್ತಿದ್ದಾರೆ.
ಚಾಲನ ಪರವಾನಗಿ, ವಾಹನಗಳ ನೋಂದಣಿ, ಎಫ್ಸಿ ನವೀಕರಣ ಸೇರಿದಂತೆ ಪ್ರಮುಖ ಕೆಲಸ ಕಾರ್ಯಗಳಿಗೆ ತೀವ್ರ ಅಡಚಣೆಯಾಗುತ್ತಿದೆ. ರಾಜ್ಯದಲ್ಲಿ 71 ಪ್ರಾದೇಶಿಕ ಸಾರಿಗೆ ಕಚೇರಿಗಳನ್ನು ಆರಂಭಿಸುವ ಉದ್ದೇಶವಿದೆ. ಆದರೆ ಈವರೆಗೂ 67 ಕಚೇರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 4 ಕಚೇರಿಗಳು ಬಾಕಿ ಉಳಿದಿವೆ. 430 ಮೋಟಾರ್ ವಾಹನ ನಿರೀಕ್ಷಕರ ಹುದ್ದೆಗಳು ಮಂಜೂರಾಗಿದ್ದು, 156 ಮಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಶೇ.63ರಷ್ಟು ಹುದ್ದೆಗಳು ಖಾಲಿ ಇವೆ. 435 ಎಫ್ಡಿಎ ಪೈಕಿ ಇನ್ನೂ ಶೇ. 16ರಷ್ಟು ಹುದ್ದೆಗಳು ಭರ್ತಿಯಾಗಬೇಕು. ಎಸ್ಡಿಎಗಳ ಪೈಕಿ 345 ಅಂದರೆ ಸುಮಾರು ಶೇ.63 ರಷ್ಟು ಹುದ್ದೆಗಳು ಖಾಲಿ ಇವೆ.
ಆರ್ಟಿಓ ಹುದ್ದೆಗಳು ಮಂಜೂರಾತಿಯೇ ಕಡಿಮೆ ಇದೆ. ಈ ಹಿಂದೆ 47 ಸಾರಿಗೆ ಕಚೇರಿಗಳಿದ್ದವು. ಅದಕ್ಕನುಗುಣವಾಗಿ ಹುದ್ದೆಗಳನ್ನು ಮಂಜೂರು ಮಾಡಲಾಗಿತ್ತು. ಕಾಲಾ ನಂತರ 20 ಸಾರಿಗೆ ಕಚೇರಿಗಳು ಹೆಚ್ಚಾಗಿವೆ. ಆದರೆ ಅದಕ್ಕನುಗುಣವಾಗಿ ಆರ್ಟಿಓ ಹುದ್ದೆಗಳು ಮಂಜೂರಾಗಿಲ್ಲ, ಸಾರಿಗೆ ಇಲಾಖೆಯಲ್ಲಿ ನೇಮಕಾತಿ ಗೊಂಡವರು ಎರವಲು ಸೇವೆಯ ಮೇಲೆ ಅನ್ಯ ಇಲಾಖೆಗಳತ್ತ ವಲಸೆ ಹೋಗಿದ್ದಾರೆ. ಸಚಿವರ ಕಚೇರಿ ಹಾಗೂ ಇತರ ಆಯಾ ಕಟ್ಟಿನ ಸ್ಥಳಗಳಲ್ಲಿ ಬಿಗಿಪಟ್ಟು ಹಾಕಿ ಕುಳಿತ್ತಿರುವ ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕರೆಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನಗಳಾಗಿಲ್ಲ.
ರಾಜ್ಯ ಸರ್ಕಾರ ಅನಗತ್ಯ ವಿವಾದಗಳಲ್ಲೇ ಕಾಲಾಹರಣ ಮಾಡುತ್ತಿದ್ದು, ಸಿಬ್ಬಂದಿಗಳ ನೇಮಕಾತಿ ವಿಚಾರವನ್ನು ಉದ್ದೇಶ ಪೂರಕವಾಗಿ ಕಡೆಗಣಿಸಿದಂತ್ತಿದೆ. ಒಟ್ಟು 43 ಇಲಾಖೆಗಳಿಂದ 2.84 ಲಕ್ಷ ಹುದ್ದೆಗಳು ಖಾಲಿ ಉಳಿದಿವೆ. ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 56 ಸಾವಿರ ಹುದ್ದೆಗಳ ನೇಮಕಾತಿಗೆ ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಆದರೆ ನೇಮಕಾತಿ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ.
ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರ್ನಾಟಕ ಲೋಕಸೇವಾ ಆಯೋಗದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದರು. ಆಯ್ಕೆ ಪ್ರಕ್ರಿಯೆಯನ್ನು ಲೋಕಸೇವಾ ಆಯೋಗಕ್ಕೆ ನೀಡಬೇಕೇ? ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಬೇಕೇ? ಎಂಬ ಬಗ್ಗೆ ಇನ್ನೂ ಗೊಂದಲಗಳಿವೆ. ಹೀಗಾಗಿ ಖಾಲಿ ಹುದ್ದೆಗಳ ಭರ್ತಿ ವಿಳಂಬವಾಗುತ್ತಿದ್ದು, ಜನ ಸಾಮಾನ್ಯರು ನಿತ್ಯ ನರಕ ಅನುಭವಿಸುತ್ತಿದ್ದಾರೆ.ಶೇ. 63ರಷ್ಟು ಮೋಟಾರು ಇನ್್ಸಪೆಕ್ಟರ್ಗಳ ಹುದ್ದೆ ಖಾಲಿ ಇದ್ದಾಗ ಇಲಾಖೆಯನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ.
