ಬೆಂಗಳೂರು,ಮೇ 12- ಕಗ್ಗಲಿಪುರದ ತಾತಗುಣಿ ಬಳಿಯ ಒಡೆಯರಹಳ್ಳಿ ಗೇಟ್ ಸಮೀಪ ಜಿಲೆಟಿನ್ ಕಡ್ಡಿಗಳನ್ನು ಇಟ್ಟು ಪರಾರಿಯಾಗಿರುವ ದುಷ್ಕರ್ಮಿಗಳ ಬಗ್ಗೆ ಯಾವುದೇ ಸುಳಿವು ಸದ್ಯಕ್ಕೆ ಸಿಕ್ಕಿಲ್ಲ. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೊನ್ನೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಸಾಗುತ್ತಿದ್ದ ರಸ್ತೆಯಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಕಗ್ಗಲೀಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿರುವ ಬೆನ್ನಲ್ಲೇ ನಾಲ್ಕು ತನಿಖಾತಂಡಗಳು ಸಹ ದುಷ್ಕರ್ಮಿಗಳ ಪತ್ತೆಗೆ ಶೋಧ ನಡೆಸುತ್ತಿವೆ.
ಈ ನಡುವೆ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಸಹ ಮಧ್ಯ ಪ್ರವೇಶಿಸಿ ತನಿಖೆ ನಡೆಸುತ್ತಿದೆ. ಜಿಲೆಟಿನ್ ಕಡ್ಡಿ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಸಹ ತನಿಖೆ ನಡೆಸುತ್ತಿದ್ದು, ಈ ಸ್ಫೋಟಕ ವಸ್ತು ಈ ಸ್ಥಳದಲ್ಲಿ ಹೇಗೆ ಬಂತು?, ಯಾರಾದರೂ ತಂದಿಟ್ಟಿದ್ದಾರೆಯೇ? ಎಂಬಿತ್ಯಾದಿ ಮಾಹಿತಿಗಳನ್ನು ಸಂಗ್ರಹಿಸುತ್ತಿವೆ.
ಜಿಲೆಟಿನ್ ಕಡ್ಡಿ ಪತ್ತೆಯಾದ ಸುತ್ತಮುತ್ತಲಿನ ಕಲ್ಲುಕ್ವಾರಿ ಮಾಲೀಕರು ಹಾಗೂ ಕಾರ್ಮಿಕರಿಂದಲೂ ಸಹ ವಿವರಗಳನ್ನು ಪಡೆದುಕೊಳ್ಳಲಾಗುತ್ತಿದೆ.
ಕಲ್ಲು ಕ್ವಾರಿಗಳ ಸ್ಫೋಟಕಕ್ಕೆ ಜಿಲೆಟಿನ್ ಕಡ್ಡಿ ಬಳಸಲಾಗುತ್ತದೆ. ಹಾಗಾಗಿ ಈ ಮಾರ್ಗದಲ್ಲಿ ಸಾಗಿಸುವಾಗ ಏನಾದರೂ ಆಕಸಿಕವಾಗಿ ಬಿದ್ದಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಜಿಲೆಟಿನ್ ಕಡ್ಡಿ ಪತ್ತೆಯಾದ ರಸ್ತೆಯಲ್ಲಿ ಯಾವುದೇ ಸಿಸಿ ಕ್ಯಾಮೆರಾಗಳಿಲ್ಲ. ಆದರೂ ಸಹ ಈ ಮಾರ್ಗದ ಪ್ರವೇಶದ್ವಾರಗಳಲ್ಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಅದರಲ್ಲಿರುವ ದೃಶ್ಯಾವಳಿಗಳನ್ನು ಸೂಕವಾಗಿ ಗಮನಿಸಲಾಗುತ್ತಿದೆ.
ಈ ಮಾರ್ಗದ ಟವರ್ ಲೊಕೇಷನ್ ಸೇರಿದಂತೆ ವಿವಿಧ ತಾಂತ್ರಿಕ ಆಧಾರದಲ್ಲಿ ತನಿಖೆ ನಡೆಯುತ್ತಿದೆ. ಜಿಲೆಟಿನ್ ಕಡ್ಡಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ.ಒಟ್ಟಾರೆ ಈ ಜಿಲೆಟಿನ್ ಕಡ್ಡಿ ಪತ್ತೆಯಾದ ಬಗ್ಗೆ ಪೊಲೀಸರು ನಾನಾ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
