ಬೆಂಗಳೂರು,ಮೇ13- ಡೀಸೆಲ್ ಬೆಲೆ ಹೆಚ್ಚಾದರೆ ಸಾರಿಗೆ ಸಂಸ್ಥೆಗಳಿಗೆ ಹೊರೆಯಾಗಲಿದೆ. ಬಸ್ ಪ್ರಯಾಣ ದರ ಏರಿಕೆ ಬಗ್ಗೆ ಸದ್ಯಕ್ಕೆ ಯಾವುದೇ ಚಿಂತನೆ ಮಾಡಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಕುಮಾರಕೃಪ ಅತಿಥಿಗೃಹದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲ ಅಬ್ದುಲ್ ನಜೀರ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಡೀಸೆಲ್ ಬೆಲೆ ಹೆಚ್ಚಳವಾಗಿಲ್ಲ. ಒಂದು ವೇಳೆ ಹೆಚ್ಚಳವಾದರೆ ಏನು ಮಾಡಲಾಗುತ್ತದೆ. ಈಗಾಗಲೇ ಡೀಸೆಲ್ ಬೆಲೆ ಹೆಚ್ಚಿದೆ ಎಂದರು.
ಡೀಸೆಲ್ ಬೆಲೆ ಹೆಚ್ಚಳ ಮಾಡುತ್ತಿರುವ ಮಾಹಿತಿ ನನ್ನಗಿಲ್ಲ. ಮಾಡದಿದ್ದರೆ ಸಂತೋಷ ಎಂದ ಅವರು, ಸಾರಿಗೆ ಸಂಸ್ಥೆಗಳ ನೌಕರರ ವೇತನವನ್ನು ಪರಿಷ್ಕರಣೆ ಮಾಡಿದ್ದು, ಸರ್ಕಾರದ ತೀರ್ಮಾನವನ್ನು ಹೇಳಿದ್ದೇವೆ. ಆದರೆ ನೌಕರರು ಒಪ್ಪದಿರುವ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ 26 ಸಾವಿರ ಬಸ್ಗಳು ಹಾಗೂ 1700 ಎಲೆಕ್ಟ್ರಿಕ್ ಬಸ್ಗಳಿವೆ ಎಂದು ಅವರು ಮಾಹಿತಿ ನೀಡಿದರು.
ಚುನಾವಣೆ ಮಾಡಬೇಕು:
ಕಾಲ ಕಾಲಕ್ಕೆ ಗ್ರಾಮಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಪುರಸಭೆ, ನಗರಸಭೆ ಸೇರಿದಂತೆ ಜಿಬಿಎ ವ್ಯಾಪ್ತಿಕ ನಗರ ಪಾಲಿಕೆಗಳಿಗೂ ಚುನಾವಣೆಯಾಗಬೇಕು. ಜೂ.30ರೊಳಗೆ ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಬೇಕೆಂಬ ಸುಪ್ರೀಂಕೋರ್ಟ್ ಆದೇಶಕ್ಕೆ ಆಕ್ಷೇಪವನ್ನು ಸಲ್ಲಿಸಲಾಗಿದೆ. ಇದರ ಬಗ್ಗೆ ಉಪಮುಖ್ಯಮಂತ್ರಿಗಳೇ ಉತ್ತರ ನೀಡಬೇಕು ಎಂದರು.
ಜಿಬಿಎ ಚುನಾವಣೆ ವಿಳಂಬವಾಗುತ್ತಿರುವುದು ಆಕಾಂಕ್ಷಿಗಳಿಗೆ ಬೇಸರವಾಗುವುದು ಸಹಜ. ನಮಗೂ ಒತ್ತಡ ಹೆಚ್ಚಾಗುತ್ತದೆ. 1947ರಿಂದ ಇಲ್ಲಿಯವರೆಗೆ ಮೂಲಭೂತ ಸೌಕರ್ಯಗಳನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಹೆಚ್ಚು ಮಾಡಲಾಗಿದೆ. ಚುನಾವಣೆ ಏಕೆ ಮುಂದೂಡಲಾಗುತ್ತಿದೆ ಎಂಬುದನ್ನು ಉಪಮುಖ್ಯಮಂತ್ರಿಗಳನ್ನೇ ಕೇಳಬೇಕು.ಈಗಾಗಲೇ ನಾವು 5 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆದ್ದಿದ್ದೇವೆ. ಶಿಕ್ಷಕರ ಕ್ಷೇತ್ರದಲ್ಲೂ ಗೆದ್ದಿದ್ದೇವೆ. ಮತದಾರರು ಕಾಂಗ್ರೆಸ್ ಬಗ್ಗೆ ಒಲವು ತೋರುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರ ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲ. ಸಂಪುಟ ಪುನಾರಚನೆ ಬಗ್ಗೆ ಮಾತ್ರ ಗೊತ್ತು. 3 ವರ್ಷದಲ್ಲಿ ನಾನು ಮೂರು ಬಾರಿ ಮಾತ್ರ ದೆಹಲಿಗೆ ಹೋಗಿದ್ದೇನೆ. ದೆಹಲಿಗೆ ಹೋಗುವ ಅಭ್ಯಾಸ ನನಗಿಲ್ಲ. ಬೇಗ ಸಚಿವ ಸಂಪುಟ ವಿಸ್ತರಣೆಯಾದರೆ ಒಳ್ಳೆಯದು. ಎರಡೂವರೆ ವರ್ಷಕ್ಕೆ ಆಗುತ್ತದೆ ಎಂಬ ಮಾಹಿತಿ ಇತ್ತು. ಈಗಾಗಲೇ 6 ತಿಂಗಳು ತಡವಾಗಿದೆ ಎಂದು ಹೇಳಿದರು.
ಶ್ರೀಶೈಲದಲ್ಲಿ ನಿರ್ಮಿಸಿರುವ ಅತಿಥಿಗೃಹಗಳ ನವೀಕರಣ ಆಗಿರಲಿಲ್ಲ. ಹೀಗಾಗಿ ಆಂಧ್ರಪ್ರದೇಶದ ರಾಜ್ಯಪಾಲರನ್ನು ಭೇಟಿಯಾಗಿದ್ದಾಗ ಸಂಬಂಧಪಟ್ಟ ಸಚಿವರು, ಅಧಿಕಾರಿಗಳನ್ನು ಕರೆಸಿ ಕರ್ನಾಟಕ ಸರ್ಕಾರಕ್ಕೆ ಜಾಗ ಕೊಡುವಂತೆ ನಿರ್ದೇಶನ ಮಾಡಿದ್ದರು. 5 ಎಕರೆ ಜಾಗ ನೀಡಿರುವುದಕ್ಕೆ ಅವರಿಗೆ ಧನ್ಯವಾದ ಹೇಳಲು ಭೇಟಿಯಾಗಿದ್ದೆ. ಕಲ್ಯಾಣ ಕರ್ನಾಟಕ ಭಾಗದ ಸಾಕಷ್ಟು ಶ್ರೀಶೈಲಕ್ಕೆ ಹೋಗುತ್ತಾರೆ. ತಿರುಪತಿ ಮಾದರಿಯಲ್ಲಿ ವಸತಿಗೃಹ ನಿರ್ಮಾಣಾ ಮಾಡುವ ಉದ್ದೇಶವಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
