ಬೆಂಗಳೂರು, ಸೆ.9- ಈರುಳ್ಳಿ ಹೆಚ್ಚಾಗಿ ಕತ್ತರಿಸಿದಾಗ ಮಾತ್ರ ಕಣ್ಣಲ್ಲಿ ನೀರು ಬರುವುದು ಸಹಜ. ಆದರೆ ಇದೀಗ ಈರುಳ್ಳಿ ಖರೀದಿಸುವಾಗಲೂ ಗ್ರಾಹಕರ ಕಣ್ಣಲ್ಲಿ ನೀರು ಬರುವಂತಾಗಿದೆ.ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ, ಈರುಳ್ಳಿ ಬೆಲೆಯೂ ಶತಕದತ್ತ ಮುನ್ನುಗ್ಗುತ್ತಿದ್ದು, ಗ್ರಾಹಕರ ಜೇಬಿಗೆ ಹೊರೆಯಾಗುತ್ತಿದೆ.
ಈರುಳ್ಳಿ ಬೆಲೆ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಆರಂಭಿಸಿದ್ದರೂ, ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುವ ಬದಲು ಏರಿಕೆಯಾಗುತ್ತಲೇ ಇದೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕೆ ಅನುಗುಣವಾಗಿ ಕೆ.ಜಿ. ಈರುಳ್ಳಿ ದರ 70 ರೂ. ದಾಟಿದೆ.
ಮಾರುಕಟ್ಟೆಯಲ್ಲಿ ಎ ದರ್ಜೆಯ ಈರುಳ್ಳಿ ಕ್ವಿಂಟಾಲ್‌ಗೆ 5,300ರಿಂದ 6,000 ರೂ.ವರೆಗೆ ಮಾರಾಟವಾಗುತ್ತಿದೆ. ಕಳೆದ ತಿಂಗಳು ಕ್ವಿಂಟಾಲ್‌ಗೆ 4,000ರಿಂದ 4,500 ರೂ. ಆಸುಪಾಸಿನಲ್ಲಿದ್ದ ದರ ಸೆಪ್ಟೆಂಬರ್‌ನಲ್ಲಿ 1,000ರಿಂದ 1,500 ರೂ.ವರೆಗೆ ಏರಿಕೆಯಾಗಿದೆ.
ದೈನಂದಿನ ಅಡುಗೆಯಲ್ಲಿ ಈರುಳ್ಳಿ ಅತ್ಯವಶ್ಯಕವಾಗಿದ್ದು, ಅದರ ಬಳಕೆಯೂ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.ರಾಜ್ಯದಲ್ಲಿ ಮಾತ್ರವಲ್ಲದೆ ದೇಶದ ಇತರ ಭಾಗಗಳಲ್ಲೂ ಈರುಳ್ಳಿ ಬೆಲೆ ಏರಿಕೆಯಾಗಿದೆ. ಹೊರರಾಜ್ಯಗಳಿಂದ ಬೇಡಿಕೆ ಹೆಚ್ಚಿರುವುದರಿಂದಲೂ ಬೆಲೆ ಏರಿಕೆಯಾಗುತ್ತಿದೆ.
ಹಿಂಗಾರು ಬೆಳೆಯ ದಾಸ್ತಾನು ಬಹುತೇಕ ಮುಗಿದಿದ್ದು, ಹೊಸದಾಗಿ ಬರಬೇಕಿದ್ದ ಮುಂಗಾರು ಫಸಲು ವಿಳಂಬವಾಗಿದೆ. ರಾಜ್ಯದಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯುವ ಬಳ್ಳಾರಿ, ರಾಯಚೂರು, ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಬಿತ್ತನೆ ಕುಂಠಿತವಾಗಿರುವುದು ಪೂರೈಕೆಯ ಮೇಲೂ ಪರಿಣಾಮ ಬೀರಿದೆ.
ನೆರೆಯ ಮಹಾರಾಷ್ಟ್ರದಿಂದ ರಾಜ್ಯದ ವಿವಿಧ ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿತ್ತು. ಆದರೆ ಅಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಮಾರುಕಟ್ಟೆಗೆ ಬಾರದ ಹಿನ್ನೆಲೆಯಲ್ಲಿ ಕೊರತೆ ಉಂಟಾಗಿದ್ದು, ರಾಜ್ಯಕ್ಕೆ ಬರುತ್ತಿದ್ದ ಈರುಳ್ಳಿ ಪೂರೈಕೆಯ ಮೇಲೂ ಪರಿಣಾಮ ಬೀರಿದೆ.
ಅಗತ್ಯಕ್ಕೆ ತಕ್ಕಷ್ಟು ಮಾತ್ರ ಖರೀದಿಸಿ
ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಲವರು ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಖರೀದಿಸಿ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ವಾರ ಗೌರಿ-ಗಣೇಶ ಹಬ್ಬ ಇರುವುದರಿಂದ ಬೆಲೆ ಮತ್ತಷ್ಟು ಏರಿಕೆಯಾಗಬಹುದೆಂಬ ಆತಂಕದಿಂದಲೂ ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ.
ಆದರೆ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸರ್ಕಾರ ಹಾಗೂ ಮಾರುಕಟ್ಟೆ ಅಧಿಕಾರಿಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಬೆಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಹೀಗಾಗಿ ಹೆಚ್ಚಿನ ಬೆಲೆಗೆ ಈರುಳ್ಳಿ ಖರೀದಿಸಿ ದಾಸ್ತಾನು ಮಾಡಿಕೊಳ್ಳದೆ, ಅಗತ್ಯಕ್ಕೆ ತಕ್ಕಷ್ಟು ಮಾತ್ರ ಖರೀದಿಸುವುದು ಸೂಕ್ತ ಎಂದು ವ್ಯಾಪಾರಿ ರವೀಶ್ ತಿಳಿಸಿದ್ದಾರೆ.
