Homeರಾಜ್ಯವ್ಯಾಪಕ ಮಳೆಯಿಂದ ಬೆಳೆ ನಾಶ, ಈರುಳ್ಳಿ ಬೆಲೆ ಏರಿಕೆ

ವ್ಯಾಪಕ ಮಳೆಯಿಂದ ಬೆಳೆ ನಾಶ, ಈರುಳ್ಳಿ ಬೆಲೆ ಏರಿಕೆ

Onion prices rise due to widespread rains

ಬೆಂಗಳೂರು, ಜು.6- ಕಳೆದ ಕೆಲವು ತಿಂಗಳುಗಳಿಂದ ಈರುಳ್ಳಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಸದ್ದಿಲ್ಲದೆ ದಿನದಿಂದ ದಿನಕ್ಕೆ ಏರುತ್ತಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಬೆಳೆ ನಾಶವಾಗಿದ್ದು, ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಾಲು ಬಾರದಿರುವುದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ.

ರಾಜ್ಯದಲ್ಲೇ ಹೆಚಾಗಿ ಈರುಳ್ಳಿ ಬೆಳೆಯುವ ಪ್ರದೇಶಗಳಾದ ಬೆಳಗಾವಿ, ಬಳ್ಳಾರಿ, ರಾಯಚೂರು, ಧಾರವಾಡ, ದಾವಣಗೆರೆ ಜಿಲ್ಲೆಗಳಲ್ಲಿ ಮಳೆ ಕೈಕೊಟ್ಟ ಕಾರಣ ಬಿತ್ತನೆ ವಿಳಂಬವಾಗಿದ್ದು, ಉತ್ಪಾದನೆ ಕುಂಠಿತವಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆಗೆ ಕಾರಣ ಒಂದೆಡೆಯಾದರೆ ರಾಜ್ಯಕ್ಕೆ ಹೆಚ್ಚಾಗಿ ಈರುಳ್ಳಿ ಸರಬರಾಜಾಗುವ ಮಹಾರಾಷ್ಟ್ರದಲ್ಲಿ ಇದೀಗ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಬೆಳೆ ನಾಶವಾಗಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಗುಣಮಟ್ಟದ ಈರುಳ್ಳಿ ಕೆಜಿಗೆ 25 ರೂ.ಗಳಿಂದ 30 ರೂ.ಗೆ ಮಾರಾಟವಾಗುತ್ತಿತ್ತು. ಕಳೆದ ವಾರದಿಂದ ಕೆಜಿಗೆ ದಿಢೀರನೇ 45 ರಿಂದ 50 ರೂ.ಗೆ ಮಾರಾಟವಾಗುತ್ತಿದೆ.ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಿಲ್ಲರೆಯಾಗಿ 100 ರೂ.ಗೆ ಎರಡೂವರೆಯಿಂದ ಮೂರು ಕೆಜಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ಹೊರೆಯಾಗಿದ್ದು, ಖರೀದಿ ಮಾಡುವಾಗ ಕಣ್ಣಲ್ಲಿ ನೀರು ಬರುವಂತಾಗಿದ್ದು, ಮಿತ ಬಳಕೆ ಮಾಡುವಂತಾಗಿದೆ.

ಮುಂಗಾರು ವಿಳಂಬವಾದ್ದರಿಂದ ಬಿತ್ತನೆ ಕಾರ್ಯ ಕುಂಠಿತವಾಗಿದ್ದು, ದಾಸ್ತಾನು ಮಾಡಲಾಗಿದ್ದ ಮಾಲು ಮಾತ್ರ ಇದುವರೆಗೂ ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದು, ಹೊಸ ಈರುಳ್ಳಿ ಮಾರುಕಟ್ಟೆಗೆ ಬರುವವರೆಗೂ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಜೊತೆಗೆ ಮೋಡ ಕವಿದ ವಾತಾವರಣವಿದ್ದು, ದಾಸ್ತಾನಿನಲ್ಲಿ ಈರುಳ್ಳಿ ಕೊಳೆಯುತ್ತಿದ್ದು, ಗುಣಮಟ್ಟದ ಈರುಳ್ಳಿ ಮಾರುಕಟ್ಟೆಗೆ ಬಾರದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳವಾಗಿದೆ.

RELATED ARTICLES
spot_img

Latest News