ಬೆಂಗಳೂರು,ಮಾ.25- ಹಿಂದೂ, ಬೌದ್ದ ಮತ್ತು ಸಿಖ್ ಧರ್ಮೀಯರನ್ನು ಹೊರೆತುಪಡಿಸಿ ಉಳಿದ ಧರ್ಮದವರು ಮತಾಂತರಗೊಂಡರೆ, ಪರಿಶಿಷ್ಟ ಜಾತಿ(ಎಸ್ಸಿ)ಯ ಸ್ಥಾನಮಾನ ಸಿಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ನೀಡಿರುವ ಮಹತ್ವದ ತೀರ್ಪು, ಕರ್ನಾಟಕದ ಮೇಲೂ ಭಾರೀ ಪರಿಣಾಮ ಬೀರಲಿದ್ದು, 12 ಸಾವಿರಕ್ಕೂ ಅಧಿಕ ದಲಿತ ಕ್ರಿಶ್ಚಿಯನ್ನರಿಗೆ ಮೀಸಲಾತಿ ಕೈತಪ್ಪುವ ಆತಂಕ ಎದುರಾಗಿದೆ.
ಆಂಧ್ರಪ್ರದೇಶ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಪಿ.ಕೆ.ಮಿಶ್ರಾ ಹಾಗೂ ಎನ್.ವಿ.ಅಂಜಾರಿಯಾ ಅವರಿದ್ದ ಪೀಠ ನೀಡಿರುವ ಈ ಮಹತ್ವದ ಆದೇಶ ದೇಶದಲ್ಲಿ ಈಗಾಗಲೇ ಅನ್ಯ ಕಾರಣಗಳಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದಿದ್ದ ಲಕ್ಷಾಂತರ ಮಂದಿಗೆ ಎಸ್ಸಿ ಸ್ಥಾನಮಾನ ಕೈ ತಪ್ಪಲಿದೆ. ಹೀಗಾಗಿ ಹಳೆಯ ಗಂಡನ ಪಾದವೇ ಗತಿ ಎಂಬಂತೆ ಪುನಃ ತಮ ಪೂರ್ವಶ್ರಮದ ಜಾತಿಗೆ ಹಿಂತಿರುಗಬಹುದು.
ಸುಪ್ರೀಂಕೋರ್ಟ್‌ನ 2015ರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ದಲಿತ ಕ್ರಿಶ್ಚಿಯನ್ನರಿದ್ದಾರೆ. ಈ ತೀರ್ಪಿನಿಂದಾಗಿ, ಮತಾಂತರಗೊಂಡವರು ಎಸ್ಸಿ/ಎಸ್ಸಟಿ ಕಾಯ್ದೆಯ ರಕ್ಷಣೆ ಕಳೆದುಕೊಳ್ಳುತ್ತಾರೆ.
ಮತಾಂತರಗೊಂಡವರು ಈಗ ಧರ್ಮವನ್ನು ಆರಿಸಿಕೊಳ್ಳಬೇಕೋ ಅಥವಾ ತಮ ಸಾಂವಿಧಾನಿಕ ಹಕ್ಕುಗಳನ್ನು ಆಯ್ಕೆ ಮಾಡಿಕೊಳ್ಳಬೇಕೋ ಎಂಬ ಧರ್ಮಸಂಕಟಕ್ಕೆ ಸಿಲುಕಲಿದ್ದಾರೆ. ಇದು ಘರ್-ವಾಪಸಿ ಅಥವಾ ತಾವು ಮತಾಂತರಗೊಂಡಿರುವುದನ್ನು ಗೌಪ್ಯವಾಗಿಡಲು ಪ್ರಚೋದಿಸಬಹುದು.
ಕರ್ನಾಟಕದಲ್ಲಿರುವ ಇವರಿಗೆ ಶೇ.17ರಷ್ಟು ಎಸ್ಸಿ ಮೀಸಲಾತಿಯ ಲಾಭ ಸಿಗುವುದಿಲ್ಲ. ಅವರು ಒಬಿಸಿ ಅಥವಾ ಸಾಮಾನ್ಯ ವರ್ಗಕ್ಕೆ ಶಿಫ್ಟ್ ಆಗಲಿದ್ದಾರೆ. ಉದ್ಯೋಗದಲ್ಲಿ ಬಡ್ತಿ, ಸೀನಿಯಾರಿಟಿ ಕೂಡ ಇವರಿಗೆ ಈಗ ಸಿಗಲ್ಲ. ಇದರ ಜೊತೆ ನಗರದ ಕೊಳೆಗೇರಿಗಳಲ್ಲಿ ವಾಸಿಸುವ ಮತ್ತು ಸರ್ಕಾರಿ ಯೋಜನೆಗಳನ್ನೇ ನಂಬಿರುವ ಬಡದಲಿತ ಕುಟುಂಬಗಳಿಗೆ ದೊಡ್ಡ ಹೊಡೆತ ಬೀಳಲಿದೆ ಎನ್ನಲಾಗಿದೆ.
ರಾಜಕೀಯವಾಗಿ ನೋಡುವುದಾದರೆ, ಇದು ಬಿಜೆಪಿಯ ನಿಲುವಿಗೆ ಮತ್ತಷ್ಟು ಬಲ ತುಂಬಿದೆ. ಧರ್ಮಾಧಾರಿತ ಮೀಸಲಾತಿ ವಿರೋಧಿಸುವ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ಬೆಂಬಲಿಸುವ ಬಿಜೆಪಿಯ ವಾದಕ್ಕೆ ಈ ತೀರ್ಪು ಪೂರಕವಾಗಿದೆ. ಆದರೆ ದಲಿತ ವೋಟ್ ಬ್ಯಾಂಕ್‌ನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಇದು ದೊಡ್ಡ ತಲೆನೋವಾಗಿದೆ. ಕರಾವಳಿ ಭಾಗದಲ್ಲಿ ಕ್ರಿಶ್ಚಿಯನ್ ಮತದಾರರನ್ನು ಕಳೆದುಕೊಳ್ಳುವ ಭೀತಿಯೂ ಇದೆ. ಜೊತೆಗೆ ಹಿಂದೂ ಎಸ್ಸಿ ಮತಗಳ ಕ್ರೋಢೀಕರಣದ ಲೆಕ್ಕಾಚಾರಗಳೂ ಇವೆ.
ಕರ್ನಾಟಕದಲ್ಲಿ ಮೀಸಲಾತಿಯನ್ನು ಶೇ.50ರ ಮಿತಿಗಿಂತ ಹೆಚ್ಚಿಸಿರುವ 2022ರ ಕಾಯ್ದೆಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಸುಪ್ರೀಂಕೋರ್ಟ್‌ನ ಈ ಹೊಸ ತೀರ್ಪು ಆ ಪ್ರಕರಣಗಳ ಮೇಲೆ ನೇರ ಪರಿಣಾಮ ಬೀರದಿದ್ದರೂ, ಜಾತಿಪ್ರಮಾಣ ಪತ್ರಗಳ ಪರಿಶೀಲನೆಯನ್ನು ಮತ್ತಷ್ಟು ಬಿಗಿಗೊಳಿಸಲು ಸರ್ಕಾರಿ ಇಲಾಖೆಗಳಿಗೆ ದಾರಿ ಮಾಡಿಕೊಡಲಿದೆ. ಯಾರಾದರೂ ಮತಾಂತರಗೊಂಡಿದ್ದರೆ, ಆ ಘಟನೆಯ ಅಥವಾ ಕ್ಲೇಮ್ ಮಾಡುವ ಸಮಯದಲ್ಲಿ ಅವರ ಧರ್ಮ ಯಾವುದಿತ್ತು ಎಂಬುದನ್ನು ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಬೇಕಾಗುತ್ತದೆ.
ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರವಾದವರು ಈ ಜಾತಿ ಶೋಷಣೆಯಿಂದ ತಪ್ಪಿಸಿಕೊಳ್ಳಲು ಹೋಗಿರುತ್ತಾರೆ. ಆ ಧರ್ಮಗಳಲ್ಲಿ ಜಾತಿ ವ್ಯವಸ್ಥೆ ಇಲ್ಲ, ಅವು ವಿದೇಶಿ ಮೂಲದ ಧರ್ಮಗಳು. ಹೀಗಾಗಿ ಅಲ್ಲಿ ಅಸ್ಪಶ್ಯತೆ ಇದೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಒಂದು ವೇಳೆ ಮತಾಂತರಗೊಂಡವರಿಗೂ ಎಸ್‌ಸಿ ಸ್ಥಾನಮಾನ ನೀಡಿದರೆ, ನಿಜವಾಗಿಯೂ ಇಂದಿಗೂ ಅಸ್ಪಶ್ಯತೆ ಅನುಭವಿಸುತ್ತಿರುವ ಹಿಂದೂ ದಲಿತರ ಮೀಸಲಾತಿ ಪಾಲಿಗೆ ಕತ್ತರಿ ಬೀಳುತ್ತದೆ.
ಜೊತೆಗೆ ಇದು ಕೇವಲ ಸೌಲಭ್ಯಗಳಿಗಾಗಿ ಮತಾಂತರವಾಗುವುದನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂಬುದು ಸರ್ಕಾರದ ವಾದ. 2007ರಲ್ಲಿ ರಂಗನಾಥ್ ಮಿಶ್ರಾ ಆಯೋಗವು ಧರ್ಮಕ್ಕೂ ಎಸ್‌ಸಿ ಸ್ಥಾನಮಾನಕ್ಕೂ ಲಿಂಕ್ ಬೇಡ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ದಲಿತರಿಗೂ ಎಸ್‌ಸಿ ಸ್ಥಾನಮಾನ ಕೊಡಿ ಎಂದು ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಇದು ದೋಷಪೂರಿತ ವರದಿ ಎಂದು ಅದನ್ನು ತಿರಸ್ಕರಿಸಿತ್ತು.
ಅದರ ಬದಲಾಗಿ 2022ರಲ್ಲಿ ನ್ಯಾಯಮೂರ್ತಿ ಕೆಜಿ ಬಾಲಕೃಷ್ಣನ್ ಆಯೋಗವನ್ನು ರಚಿಸಿ, ಇದರ ಬಗ್ಗೆ ಮರುಪರಿಶೀಲನೆ ನಡೆಸುತ್ತಿದೆ. ಆದರೂ, ಪ್ರಸ್ತುತ ಸಂವಿಧಾನದ ಚೌಕಟ್ಟಿನಲ್ಲಿ ಮತಾಂತರಿಗಳಿಗೆ ಎಸ್‌ಸಿ ಮೀಸಲಾತಿ ನೀಡಲು ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಲೇ ಇದೆ.
ಸುಪ್ರೀಕೋರ್ಟ್ ತೀರ್ಪು ಏನು?:
ಸುಪ್ರೀಂ ಕೋರ್ಟ್‌ನ ಈ ತೀರ್ಪು ಬಹಳ ಸ್ಪಷ್ಟವಾದ ಸಂದೇಶವನ್ನು ರವಾನಿಸಿದೆ. ಸಂವಿಧಾನದಲ್ಲಿರುವ ಪರಿಶಿಷ್ಟ ಜಾತಿಯ ಮೀಸಲಾತಿ ಮತ್ತು ರಕ್ಷಣೆಯು ಕೇವಲ ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮದವರಿಗೆ ಮಾತ್ರ ಸೀಮಿತ. ಒಂದು ಬಾರಿ ಬೇರೆ ಧರ್ಮಕ್ಕೆ ಮತಾಂತರವಾದರೆ, ಆ ಎಲ್ಲಾ ಸೌಲಭ್ಯಗಳು ನಿಮ ಕೈತಪ್ಪಿ ಹೋಗುತ್ತವೆ. ಕೇವಲ ಹಳೇ ಎಸ್‌ಸಿ ಸರ್ಟಿಫಿಕೇಟ್ ಇಟ್ಟುಕೊಂಡು ಲಾಭ ಪಡೆಯಲು ಸಾಧ್ಯವಿಲ್ಲ. ಒಂದು ವೇಳೆ ಮರಳಿ ಮಾತೃ ಧರ್ಮಕ್ಕೆ ಬಂದು, ಆ ಸಮುದಾಯ ಅವರನ್ನು ಒಪ್ಪಿಕೊಂಡರೆ ಮಾತ್ರ ಮತ್ತೆ ಸ್ಥಾನಮಾನ ಸಿಗಬಹುದು ಎನ್ನುವುದನ್ನು ನ್ಯಾಯಾಲಯ ಪರೋಕ್ಷವಾಗಿ ಉಲ್ಲೇಖಿಸಿದೆ.
