ಬೆಂಗಳೂರು,ಏ.4-ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದವಾರ ಆರ್‌ಸಿಬಿ -ಎಸ್‌ಆರ್‌ಹೆಚ್ ತಂಡದ ಕ್ರಿಕೆಟ್ ಪಂದ್ಯಾವಳಿ ವೇಳೆ ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿ 70 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಖದೀಮರು ಕ್ರಿಕೆಟ್ ವೀಕ್ಷಿಸಲು ಜಾರ್ಖಂಡ್‌ನಿಂದ ವಿಮಾನದಲ್ಲಿ ನಗರಕ್ಕೆ ಬಂದು ಹೋಟೆಲ್‌ನಲ್ಲಿ ಉಳಿದುಕೊಂಡು ಅಂದು ಪಂದ್ಯಾವಳಿ ಮುಗಿದ ನಂತರ ಕ್ರೀಡಾಂಗಣದ ಗೇಟ್ ಬಳಿ ಹೊರಗೆ ಹೋಗುತ್ತಿದ್ದ ಅಭಿಮಾನಿಗಳ ಮೊಬೈಲ್‌ಗಳನ್ನು ಎಗರಿಸಿದ್ದರು.
ಮೊಬೈಲ್ ಕಳ್ಳತನವಾಗಿರುವ ಬಗ್ಗೆ ಕೆಲವರು ಪೊಲೀಸ್ ಠಾಣೆಗೆ ದೂರು ನೀಡಿದರೇ ಇನ್ನೂ ಹಲವರು ಇ-ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದರು.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕ್ರೀಡಾಂಗಣದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿ ಒಂಬತ್ತು ಮಂದಿ ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.
ಇವರೆಲ್ಲರೂ ಜಾರ್ಖಂಡ್ ಮೂಲದವರಾಗಿದ್ದು, ಪಂದ್ಯದ ವೇಳೆ ಅಭಿಮಾನಿಗಳಂತೆ ಗುರುತಿಸಿಕೊಳ್ಳಲು ಆರ್‌ಸಿಬಿ ತಂಡದ ಟೀ ಶರ್ಟ್ ಧರಿಸಿಕೊಂಡು ಕ್ರೀಡಾಂಗಣದ ಒಳಗೆ ಪ್ರವೇಶಿಸಿ ಜನಜಂಗುಳಿಯಲ್ಲಿ ಮೊಬೈಲ್‌ಗಳನ್ನು ಎಗರಿಸಿದ್ದಾರೆ.
ಈ ಮೊಬೈಲ್ ಕಳ್ಳತನದ ಬೃಹತ್ ಜಾಲದ ಹಿಂದಿನ ಮಾಸ್ಟರ್ ಮೈಂಡ್ ಆರೋಪಿ ಶುಭಮ್ ಎಂಬಾತ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಶುಭಮ್ ಒಂಬತ್ತು ಮಂದಿ ಅಪ್ರಾಪ್ತರನ್ನು ಬಳಸಿಕೊಂಡು ನಗರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿಸುತ್ತಿದ್ದ ಎಂದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.ಆರೋಪಿಗಳಿಂದ 70 ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.
