ಬೆಂಗಳೂರು,ಫೆ.28- ನಗರದಲ್ಲಿ ಪೊಲೀಸರ ರಿವಾಲ್ವರ್ ಮತ್ತೆ ಸದ್ದು ಮಾಡಿದ್ದು, ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಕೊಲೆ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿ ಬಿದ್ದಿದ್ದಾನೆ.ಗಾಯಗೊಂಡಿರುವ ಆರೋಪಿ ರಂಜಿತ್(32)ನನ್ನು ಚಿಕಿತ್ಸೆಗಾಗಿ ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜಾನುಕುಂಟೆಯಲ್ಲಿ ಬೇಕರಿ ನಡೆಸುತ್ತಿದ್ದ ರೌಡಿ ಪವನ್‌ಕುಮಾರ್ ಫೆ.25 ರಂದು ವ್ಯಾಪಾರ ವಹಿವಾಟು ಮುಗಿಸಿ ರಾತ್ರಿ ತನ್ನ ಬೈಕ್‌ನಲ್ಲಿ ಥಣಿಸಂದ್ರದ ಅಮರಜ್ಯೋತಿ ಲೇಔಟ್‌ನಲ್ಲಿನ ಮನೆ ಬಳಿ ಬಂದು ಬೈಕ್ ನಿಲ್ಲಿಸುತ್ತಿದ್ದಂತೆ ಮೂರು ಬೈಕ್‌ಗಳಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಆರು ಮಂದಿ ದುಷ್ಕರ್ಮಿಗಳು ಆತನ ಮನೆ ಮುಂದೆ ತಾಯಿಯ ಎದುರೇ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಘಟನೆಯಿಂದ ಸ್ಥಳೀಯ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಈ ಪ್ರಕರಣದ ಆರೋಪಿಗಳಿಗಾಗಿ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರು.ಪವನ್‌ಕುಮಾರ್ ಡಿಜೆಹಳ್ಳಿ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದು, ಈತ ಕೊಲೆ ಪ್ರಕರಣವೊಂದರ ಆರೋಪಿ ಯಾಗಿದ್ದನು.
ಹಳೇ ದ್ವೇಷದಿಂದ ಈತನನ್ನು ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿ ಆ ನಿಟ್ಟಿನಲ್ಲಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು.ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ರಂಜಿತ್ ಎಂಬಾತ ಬಾಗಲೂರಿನ ನಿರ್ಜನ ಪ್ರದೇಶವಾದ ನೆಟ್ಟಿಗಾನಹಳ್ಳಿ ಕಸದ ಡಂಪಿಂಗ್ ಪ್ರದೇಶದ ಬಳಿ ಶೆಡ್‌ನಲ್ಲಿ ತಲೆ ಮರೆಸಿಕೊಂಡಿರುವ ಬಗ್ಗೆ ಸಂಪಿಗೆಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಈ ಮಾಹಿತಿ ಆಧಾರದ ಮೇಲೆ ಠಾಣೆಯ ಉಸ್ತುವಾರಿ ಇನ್ಸ್ ಪೆಕ್ಟರ್ ವೆಂಕಟೇಶ್ ಅವರು ಹೆಡ್‌ಕಾನ್‌ಸ್ಟೇಬಲ್ ಶಂಕರಪ್ಪ, ಕಾನ್‌ಸ್ಟೇಬಲ್ ಹನುಮಂತ ಅವರೊಂದಿಗೆ ಇಂದು ಬೆಳಗ್ಗೆ 6.30ರ ಸುಮಾರಿನಲ್ಲಿ ಸ್ಥಳಕ್ಕೆ ದಾವಿಸಿದ್ದಾರೆ.
ಆರೋಪಿ ರಂಜಿತ್ ಪೊಲೀಸರನ್ನು ನೋಡುತ್ತಿದ್ದಂತೆ ಡ್ರ್ಯಾಗರ್‌ನಿಂದ ಇನ್‌್ಸಪೆಕ್ಟರ್ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಇನ್ಸ್ ಪೆಕ್ಟರ್ ತಮ ರಿವಾಲ್ವರ್‌ನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ.
ಪೊಲೀಸರ ಮಾತಿಗೆ ಕಿವಿಕೊಡದೇ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಇನ್‌್ಸಪೆಕ್ಟರ್ ಹಾರಿಸಿದ ಗುಂಡು ಆತನ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಸುತ್ತುವರೆದು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಸಿಬ್ಬಂದಿ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
