ಬೆಂಗಳೂರು,ಮೇ 2- ಕಳೆದ ಮೂರ್ನಾಲ್ಕು ದಿನಗಳಿಂದ ಆರ್ಭಟಿಸುತ್ತಿರುವ ಪೂರ್ವ ಮುಂಗಾರು ಮಳೆ ಚೇತರಿಕೆಯಾಗಿದ್ದು ಇನ್ನೂ ಒಂದು ವಾರ ಕಾಲ ಮುಂದುವರೆಯುವ ಮುನ್ಸೂಚನೆಗಳಿವೆ.ರಾಜ್ಯಾದ್ಯಂತ ಒಣಹವೆ ಮುಂದುವರೆ ಯಲಿದ್ದು, ಹಗಲಿನ ವೇಳೆ ಬಿಸಿಲಿನ ತೀವ್ರತೆ ಹೆಚ್ಚಾಗಿರಲಿದೆ.
ಈಗಾಗಲೇ ಗರಿಷ್ಠ ತಾಪಮಾನ ಹೆಚ್ಚಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ತೀವ್ರವಾಗಿದೆ. ಅಲ್ಲಿ 40 ಡಿ.ಸೆ. ಗಿಂತ ಹೆಚ್ಚಾಗಿದ್ದು, ಜನರು ತತ್ತರಿಸುವಂತಾಗಿದೆ.ಈ ನಡುವೆ ಅಲ್ಲಲ್ಲಿ ಚದುರಿದಂತೆ ಮಳೆ ಬೀಳುತ್ತಿರುವುದು ವಾತಾವರಣವನ್ನು ಅಲ್ಪಮಟ್ಟಿಗೆ ತಂಪಾಗಿಸುತ್ತಿದೆ. ಅಲ್ಲದೆ ಮಳೆ ಬಿದ್ದ ಕಡೆಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಮಧ್ಯಾಹ್ನದ ನಂತರ ಅಲ್ಲಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಗಳಿವೆ. ಕೆಲವೆಡೆ ಗುಡುಗು, ಸಿಡಿಲು, ಆಲಿಕಲ್ಲು ಹಾಗೂ ಜೋರಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.
ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಆದರೆ ವ್ಯಾಪಕವಾಗಿ ರಾಜ್ಯಾದ್ಯಂತ ಮಳೆಯಾಗುತ್ತಿಲ್ಲ. ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಗಳಿವೆ. ಮೇ 8 ರವರೆಗೂ ಹೆಚ್ಚೂ ಕಡಿಮೆ ಇದೇ ರೀತಿ ಮಳೆ ಮುಂದುವರೆಯುವ ಸಂಭವವಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದಲೂ ಮಳೆ ಬೀಳುತ್ತಿದೆ. ಇಂದು ಮತ್ತು ನಾಳೆ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿದ್ದು, ಆನಂತರ ಮತ್ತೆ ಮಳೆ ಚುರುಕಾಗುವ ಮುನ್ಸೂಚನೆಗಳಿವೆ.
ಮಳೆ ವಿವರ :
ನಿನ್ನೆ ಸಂಜೆ ಹಾಗೂ ರಾತ್ರಿ ಬೆಂಗಳೂರಿನ ದೊರೆಸಾನಿಪಾಳ್ಯ, ಮೈಸೂರಿನ ಜಯಪುರ ತಲಾ – 27.5 ಮಿ.ಮೀ., ಚನ್ನರಾಯಪಟ್ಟಣ ತಾಲ್ಲೂಕಿನ ಮಟ್ಟನವಿಲೆ – 24.5 ಮಿ.ಮೀ., ಚಿಕ್ಕಮಗಳೂರು ಜಿಲ್ಲೆಯ ಮಂಚೇನಹಳ್ಳಿ – 23 ಮಿ.ಮೀ., ಹೆಗ್ಗಡದೇವನಕೋಟೆ ತಾಲ್ಲೂಕಿನ ಬಿದರಹಳ್ಳಿ, ಪಾಂಡವರಪುರ ತಾಲ್ಲೂಕಿನ ಗುಮನಹಳ್ಳಿ, ಮಧುಗಿರಿ ತಾಲ್ಲೂಕಿನ ಚಿಕ್ಕಮಾಲೂರುಗಳಲ್ಲಿ – ತಲಾ 22 ಮಿ.ಮೀ., ಮಧುಗಿರಿ ತಾಲ್ಲೂಕಿನ ಕೊಂಡವಾಡಿ, ಚನ್ನರಾಯಪಟ್ಟಣ ತಾಲ್ಲೂಕಿನ ಕುಂಬೇನಹಳ್ಳಿ, ಹುಣಸೂರು ತಾಲ್ಲೂಕಿನ ಸಿಂಗರಾಮನಹಳ್ಳಿಗಳಲ್ಲಿ – ತಲಾ 21 ಮಿ.ಮೀ., ಹೆ ಡಿ ಕೋಟೆ ತಾಲ್ಲೂಕಿನ ಹೆಬ್ಬಾಲಗುಪ್ಪೆ – 20 ಮಿ.ಮೀ., ಕೋರಮಂಗಲ – 19.5 ಮಿ.ಮೀ., ಕೆ.ಆರ್.ಪೇಟೆ ತಾಲ್ಲೂಕಿನ ಇಕ್ಕನಹಳ್ಳಿ, ಹೆ ಡಿ ಕೋಟೆ ತಾಲ್ಲೂಕಿನ ಮನುಗನಹಳ್ಳಿಯಲ್ಲಿ – ತಲಾ 19 ಮಿ.ಮೀ., ಹೊಳೆನರಸೀಪುರ ತಾಲ್ಲೂಕಿನ ದೊಡ್ಡಹಳ್ಳಿ, ಬೆಂಗಳೂರಿನ ಮಾದಾವರ, ಚನ್ನರಾಯಪಟ್ಟಣ ತಾಲ್ಲೂಕಿನ ಕಾಳೇನಹಳ್ಲಿಯಲ್ಲಿ – ತಲಾ 17.5 ಮಿ.ಮೀ., ಕೆ.ಆರ್.ಪೇಟೆ ತಾಲ್ಲೂಕಿನ ತೆಂಡೆಕೆರೆ – 17 ಮಿ.ಮೀ, ಹಾಸನ ಜಿಲ್ಲೆಯ ಹರಳಹಳ್ಳಿ – 16.5 ಮಿ.ಮೀ., ತುರುವೇಕೆರೆ ತಾಲ್ಲೂಕಿನ ಅರೆಮಾಲೇನಹಳ್ಳಿ – 15 ಮಿ.ಮೀ. ಸೇರಿದಂತೆ ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಿದೆ.
