Tuesday, April 14, 2026
Homeರಾಜ್ಯನಾಳೆ ಆದಿಚುಂಚನಗಿರಿ ಶ್ರೀ ಕ್ಷೇತ್ರಕ್ಕೆ ಪ್ರಧಾನಿ ಭೇಟಿ, ಮೋದಿಗಾಗಿ ವಿಶೇಷ ಮೈಸೂರು ಪೇಟ ಸಿದ್ದ

ನಾಳೆ ಆದಿಚುಂಚನಗಿರಿ ಶ್ರೀ ಕ್ಷೇತ್ರಕ್ಕೆ ಪ್ರಧಾನಿ ಭೇಟಿ, ಮೋದಿಗಾಗಿ ವಿಶೇಷ ಮೈಸೂರು ಪೇಟ ಸಿದ್ದ

Prime Minister's visit to Adichunchanagiri Sri Kshetra tomorrow

ಬೆಂಗಳೂರು,ಏ.14- ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಒಕ್ಕಲಿಗರ ಶಕ್ತಿ ಕೇಂದ್ರ ಎನಿಸಿದ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಶ್ರೀ ಕ್ಷೇತ್ರದ ಮಾಜಿ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಸರಣಾರ್ಥ ನಿರ್ಮಾಣಗೊಂಡಿರುವ ಭವ್ಯ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಪ್ರಧಾನಿ ಲೋಕಾರ್ಪಣೆಗೊಳಿಸಲಿದ್ದಾರೆ. ಬಳಿಕ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿಯಾಗಿದ್ದಾರೆ.

ನಾಳೆ ಬೆಳಿಗ್ಗೆ 10.05ಕ್ಕೆ ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿನ ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬೆಳಿಗ್ಗೆ 10.10ಕ್ಕೆ ವಿಮಾನ ನಿಲ್ದಾಣದಿಂದ ಹೊರಟು ಹೆಲಿಕಾಪ್ಟರ್‌ ಮೂಲಕ 10.50ಕ್ಕೆ ಚುಂಚನಗಿರಿ ಹೆಲಿಪ್ಯಾಡ್‌ಗೆ ಬಂದಿಳಿಯುತ್ತಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ಆಗಮಿಸುತ್ತಾರೆ. ಬೆಳಿಗ್ಗೆ 11 ಗಂಟೆಗೆ ಶ್ರೀ ಗುರು ಭೈರವೈಕ್ಯ ಬಾಲಗಂಗಾಧರನಾಥ ಶ್ರೀ ಮಂದಿರವನ್ನು ಉದ್ಘಾಟಿಸುತ್ತಾರೆ. ಉದ್ಘಾಟನೆಯ ನಂತರ ಮತ್ತೆ ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ಕೇರಳದ ತಿರುವಂತನಪುರಂಗೆ ತೆರಳುವರು.

ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಇಡೀ ಆದಿಚುಂಚನಗಿರಿ ಕ್ಷೇತ್ರ ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಭೈರವೈಕ್ಯ ಮಂದಿರವು ಹಲವು ವಿಶೇಷತೆಗಳಿಂದ ಕೂಡಿದೆ. ಕಾರ್ಯಕ್ರಮಕ್ಕಾಗಿ ಬಿಜಿಎಸ್‌‍ ಕ್ರೀಡಾಂಗಣದಲ್ಲಿ ಬೃಹತ್‌ ವೇದಿಕೆ ನಿರ್ಮಾಣವಾಗಿದ್ದು, ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಮುನ್ನೆಚ್ಚರಿಕಾ ಕ್ರಮವಾಗಿ 2000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಪ್ರಧಾನಿಗೆ ವಿಶೇಷ ಉಡುಗೊರೆ :
ಈ ಭೇಟಿಯ ವೇಳೆ ಪ್ರಧಾನಿ ಮೋದಿಯವರಿಗಾಗಿ ವಿಶೇಷ ಮೈಸೂರು ಪೇಟ ಸಿದ್ಧಪಡಿಸಲಾಗಿದೆ. ಮೈಸೂರಿನ ಕಲಾವಿದ ನಂದನ್‌ ಸಿಂಗ್‌ ಅವರು ಐದು ದಿನಗಳ ನಿರಂತರ ಶ್ರಮದಿಂದ ಇದನ್ನು ತಯಾರಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಧರಿಸುತ್ತಿದ್ದ ಮಾದರಿಯಲ್ಲಿರುವ ಈ ಪೇಟವು ಬನಾರಸ್‌‍ ಬಟ್ಟೆ ಮತ್ತು ಗಂಡಭೇರುಂಡ ವಿನ್ಯಾಸದಿಂದ ಕೂಡಿದೆ. ನಿರ್ಮಲಾನಂದನಾಥ ಶ್ರೀಗಳ ಅಣತಿಯಂತೆ ನಮೂರು ನಮೋರು ಸೇವಾ ಸಂಸ್ಥೆಯ ವತಿಯಿಂದ ಈ ಗೌರವ ಅರ್ಪಿಸಲಾಗುತ್ತಿದೆ.

ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ :
ಈ ಕಾರ್ಯಕ್ರಮಕ್ಕಾಗಿ ಮಂಡ್ಯ ಜಿಲ್ಲಾಡಳಿತ, ಪೊಲೀಸ್‌‍ ಇಲಾಖೆ ಮತ್ತು ದೇವಸ್ಥಾನದ ಅಧಿಕಾರಿಗಳು ಸಿದ್ಧತೆಗಳನ್ನು ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಬರುವುದರಿಂದ ಚುಂಚನಗಿರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ರಸ್ತೆಗಳು, ಹೆಲಿಪ್ಯಾಡ್‌ ಮತ್ತು ಮಂದಿರ ಪ್ರದೇಶದಲ್ಲಿ ವಿಶೇಷ ಏರ್ಪಾಟುಗಳನ್ನು ಮಾಡಲಾಗಿದೆ.

ಹಲವು ವಸ್ತುಗಳಿಗೆ ನಿರ್ಬಂಧ :
ಪ್ರಧಾನ ಮಂತ್ರಿಗಳ ಭದ್ರತಾ ಪಡೆಯಾದ ಈಗ ಇಡೀ ಕ್ಷೇತ್ರವನ್ನು ತನ್ನ ಸುಪರ್ದಿಗೆ ಪಡೆದಿದೆ. ಭದ್ರತಾ ದೃಷ್ಟಿಯಿಂದ ಬರೋಬ್ಬರಿ 15ಕ್ಕೂ ಹೆಚ್ಚು ವಸ್ತುಗಳನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಬಿಡಿ, ಸಿಗರೇಟ್‌, ಬೆಂಕಿಪೊಟ್ಟಣ, ಲೈಟರ್‌ ಹಾಗೂ ತಂಬಾಕು ಉತ್ಪನ್ನಗಳು ಸಂಪೂರ್ಣ ನಿಷೇಧ.

ಎಲೆಕ್ಟ್ರಾನಿಕ್‌ ವಸ್ತುಗಳು:
ರಿಮೋಟ್‌ ಕೀ, ಟಾರ್ಚ್‌, ಲೇಸರ್‌ ಲೈಟ್‌, ರೇಡಿಯೋ, ಎಲೆಕ್ಟ್ರಾನಿಕ್‌ ಗ್ಯಾಜೆಗಳು ಮತ್ತು ರಿಮೋಟ್‌ ಕಂಟ್ರೋಲರ್‌ ಗಳಿಗೆ ಅವಕಾಶವಿಲ್ಲ.ಬ್ಯಾಗ್‌ಗಳು: ಬ್ರೀಫ್‌ ಕೇಸ್‌‍, ಹ್ಯಾಂಡ್‌ ಬ್ಯಾಗ್‌ ಹಾಗೂ ಬ್ಯಾಕ್‌ ಪ್ಯಾಕ್‌ಗಳನ್ನು ತರುವಂತಿಲ್ಲ.

ಇತರ ವಸ್ತುಗಳು:
ವಾಟರ್‌ ಬಾಟಲ್‌, ತಿಂಡಿ ತಿನಿಸುಗಳು ಹಾಗೂ ಚಾಕುಗಳಂತಹ ಹರಿತವಾದ ವಸ್ತುಗಳನ್ನು ನಿರ್ಬಂಧಿಸಲಾಗಿದೆ.ಮೋದಿ ಆಗಮನದ ಹಿನ್ನೆಲೆಯಲ್ಲಿ ಕಾಲಭೈರವನ ದರ್ಶನಕ್ಕೆ ಹೋಗುವವರಿಗೆ ವಿಶೇಷ ಸೂಚನೆ ನೀಡಲಾಗಿದೆ. ಪ್ರಧಾನಿಗಳ ಕಾರ್ಯಕ್ರಮ ಮುಗಿಯುವವರೆಗೂ ಅಂದರೆ ಮಧ್ಯಾಹ್ನ 12.30ರವರೆಗೆ ದರ್ಶನಕ್ಕೆ ನಿರ್ಬಂಧವಿರಲಿದೆ. ಪ್ರಧಾನಿಗಳು ಶ್ರೀಗಿರಿ ತಪೋವನದ ಹೆಲಿಪ್ಯಾಡ್‌ನಿಂದ ರಸ್ತೆ ಮೂಲಕ ಮಂದಿರಕ್ಕೆ ಬರಲಿದ್ದು, ಕಾರ್ಯಕ್ರಮ ಮುಗಿದ ಬಳಿಕವಷ್ಟೇ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಸಿಗಲಿದೆ.

ಈ ನಿಟ್ಟಿನಲ್ಲಿ ಶ್ರೀ ಮಠ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕಳೆದ 8 ವರ್ಷಗಳಿಂದ ನಿರ್ಮಾಣದ ಹಂತದಲ್ಲಿದ್ದ ಮಂದಿರ ಇದೀಗ ಲೋಕಾರ್ಪಣೆಗೆ ಸಜ್ಜುಗೊಂಡಿದೆ.

3ನೇ ಬಾರಿ ಮಂಡ್ಯಕ್ಕೆ ಮೋದಿ :
ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದ ಅವರು, 2ನೇ ಭೇಟಿಯು ಅಭಿವೃದ್ಧಿ ಯೋಜನೆಯ ಉದ್ಘಾಟನೆಯಾಗಿತ್ತು. ಈಗ 3ನೇಯದ್ದು ಧಾರ್ಮಿಕ ಭೇಟಿಯಾಗಿದೆ.
2004ರ ವಿಧಾನಸಭೆ ಚುನಾವಣೆ ವೇಳೆ ಪ್ರಚಾರಕ್ಕಾಗಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ಬಂದಿದ್ದರು.

ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಮಹೇಶ್‌ಚಂದ್‌ ಪರವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದರು. 2023ರ ಮಾ. 12 ರಂದು ಬೆಂಗಳೂರು-ಮೈಸೂರು ಎಕ್‌್ಸಪ್ರೆಸ್‌‍ ಹೈವೇ ಉದ್ಘಾಟಿಸಿದ್ದರು. ಅಂದು ಮಂಡ್ಯದಲ್ಲಿ ರೋಡ್‌ ಶೋ ನಡೆಸಿದ್ದ ಪ್ರಧಾನಿ ಅವರು, ಮಂಡ್ಯ ತಾಲೂಕು ಹನಕೆರೆಯ ಸೇತುವೆ ಆರಂಭದ ಸ್ಥಳದಲ್ಲಿ ರಿಬ್ಬನ್‌ ಕತ್ತರಿಸುವ ಮೂಲಕ ಬೆಂಗಳೂರು-ಮೈಸೂರು ರಾಷ್ಟ್ರೀಯ ಎಕ್‌್ಸಪ್ರೆಸ್‌‍ ಹೈವೇಯನ್ನು ಲೋಕಾರ್ಪಣೆ ಮಾಡಿದ್ದರು. ನಂತರ ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೊನಿ ಬಳಿ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ್ದರು.

RELATED ARTICLES

Latest News