ನೆಲಮಂಗಲ,ಫೆ.6- ರಾಜ್ಯದಲ್ಲಿ ಇತ್ತೀಚೆಗೆ ಖಾಸಗಿ ಬಸ್ ಸರಣಿ ಬೆಂಕಿ ಅವಘಡ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು ಮುಂಜಾನೆ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ -48ರ ಹನುಮಂತಪುರ ಗೇಟ್ ಬಳಿ ಖಾಸಗಿ ಬಸ್ಸೊಂದು ಹೊತ್ತಿ ಉರಿದಿರುವ ಘಟನೆ ನಡೆದಿದೆ.
ಬೆಂಗಳೂರಿನಿಂದ ಕಲಬುರಗಿ ಕಡೆಗೆ ಹೊರಟಿದ್ದ ಸಂಜನಾ ಟ್ರಾವಲ್ಸ್ ಸ್ಲೀಪರ್ ಕೋಚ್ ಖಾಸಗಿ ಬಸ್ ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಬಸ್ಸಿನಲ್ಲಿದ್ದ ಸುಮಾರು 40 ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ರಸ್ತೆ ಪಕ್ಕದ ಹಳ್ಳಕ್ಕೆ ಇಳಿದಿದ್ದು, ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ವಿದ್ಯುತ್ ಪ್ರವರಿಸಿ, ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.ಅಪಘಾತವಾಗುತ್ತಿದ್ದಂತೆಯೇ ಎಚ್ಚೆತ್ತ ಚಾಲಕ ಹಾಗೂ ಪ್ರಯಾಣಿಕರು ಬಸ್‌ನಿಂದ ಕೆಳಗಿಳಿದ ಕ್ಷಣಮಾತ್ರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ ಧಗಧಗನೆ ಹೊತ್ತಿ ಉರಿದ ದೃಶ್ಯ ಭಯಾನಕವಾಗಿತ್ತು.ಲಗೇಜ್ ಬಾಕ್ಸ್ ನಲ್ಲಿಟ್ಟಿದ್ದ ಪ್ರಯಾಣಿಕರ ಲಗ್ಗೇಜ್‌ಗಳು ಸುಟ್ಟು ಭಸವಾಗಿವೆ. ಟೋಲ್ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ರಾಯಚೂರಿಗೆ ಹೊರಟಿದ್ದ ಖಾಸಗಿ ಬಸ್ಸು ಅನಂತಪುರದ ಬಳಿ ಬೆಂಕಿಗೆ ಆಹುತಿಯಾಗಿದ್ದು, ಯಾವುದೇ ಜೀವಹಾನಿಯಾಗಿರಲಿಲ್ಲ. ಮತ್ತೊಂದೆಡೆ ಬೆಂಗಳೂರಿನಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಬಸ್ಸು ಹಿರಿಯೂರು ಬಳಿ ಬೆಂಕಿಗೆ ಆಹುತಿಯಾಗಿ ಪ್ರಾಣಹಾನಿ ಸಂಭವಿಸಿತ್ತು. ಇಂದು ನೆಲಮಂಗಲದ ಬಳಿ ಮತ್ತೊಂದು ಬೆಂಕಿ ದುರಂತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಹುಬ್ಬಳ್ಳಿಯಲ್ಲೂ ಸಹ ಇಂದು ಖಾಸಗಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು. ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೊರಟಿದ್ದ ಬಸ್ಸಿನ ಹಿಂಬದಿಯ ಚಕ್ರದ ಬದಿಯಲ್ಲಿ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಕೂಡಲೇ ಬಸ್ಸನ್ನು ನಿಲ್ಲಿಸಿ ಬೆಂಕಿಯನ್ನು ನಂದಿಸಿದ್ದಾರೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪದೇಪದೇ ಖಾಸಗಿ ಬಸ್ಸುಗಳು ಬೆಂಕಿಗೆ ಆಹುತಿಯಾಗುತ್ತಿದ್ದು, ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.
