ಬೆಂಗಳೂರು,ಜ.17- ಬಾಂಗ್ಲಾದ ಅಕ್ರಮ ವಲಸಿಗರ ಶೆಡ್‌ಗಳಿಗೆ ಹೋಗಿ ಅವರ ಆಧಾರ್ ಕಾರ್ಡ್, ಗುರುತಿನ ಚೀಟಿ ಪರಿಶೀಲನೆ ನಡೆಸಲಾಗಿದೆ ಎಂಬ ದೂರಿನನ್ವಯ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶೆಡ್ ವಾಸಿಗಳ ಬಳಿ ರಾಷ್ಟ್ರೀಯತೆ ಬಗ್ಗೆ ಪ್ರಶ್ನೆ ಮಾಡಿದ್ದ ಹಿನ್ನೆಲೆ ಪುನೀತ್ ಕೆರೆಹಳ್ಳಿ ಹಾಗೂ ರಾಷ್ಟ್ರರಕ್ಷಣಾ ಪಡೆಯ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದ್ವೇಷದ ಮಾತಿನ ವಿರುದ್ಧ ಜನಾಂದೋಲನ ವತಿಯಿಂದ ಇಮೇಲ್ ಮೂಲಕ ಮನವಿ ಸಲ್ಲಿಸಲಾಗಿತ್ತು.
ಈ ಸಂಬಂಧ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆೆ.ಇತ್ತೀಚಿಗಷ್ಟೇ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಪೊಲೀಸರು ಶಂಕಿತ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಸರಣಿ ಕಾರ್ಯಾಚರಣೆ ನಡೆಸಿ ಒಟ್ಟು 34 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7ಕ್ಕೂ ಹೆಚ್ಚು, ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 16, ಹಾಗೂ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ಮಂದಿ ಶಂಕಿತ ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆ ವೇಳೆ ವಶಕ್ಕೆ ಪಡೆದ ಎಲ್ಲ ಶಂಕಿತರನ್ನು ದಾಖಲೆಗಳ ಪರಿಶೀಲನೆಗಾಗಿ ವಿದೇಶಿಯರ ಪ್ರದೇಶಿಕ ನೋಂದಣಾಧಿಕಾರಿಯವರ ಕಛೇರಿ (ಎಫ್‌ಆರ್‌ಆರ್‌ಒ) ಮುಂದೆ ಹಾಜರುಪಡಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಪೊಲೀಸರು ತಿಳಿಸಿದ್ದಾರೆ.
ಶಂಕಿತ ಅಕ್ರಮ ಬಾಂಗ್ಲಾ ವಲಸಿಗರ ರಾಷ್ಟ್ರೀಯತೆಯನ್ನು ಪುನೀತ್ ಕೆರೆಹಳ್ಳಿ ಹಾಗೂ ರಾಷ್ಟ್ರ ರಕ್ಷಣಾ ಪಡೆಯ ಸದಸ್ಯರು ಪ್ರಶ್ನಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬೆನ್ನಲ್ಲಿಯೇ ನಿನ್ನೆ ರಾತ್ರಿ ರಾಷ್ಟ್ರ ರಕ್ಷಣಾಪಡೆಯ ಪುನೀತ್ ಕೆರೆಹಳ್ಳಿ ಅವರನ್ನು ಬನ್ನೇರುಘಟ್ಟ ಪೊಲೀಸರು ವಶಕ್ಕೆ ಪಡೆದಿದ್ದಾರೆ.
