ಬೆಳಗಾವಿ, ಮೇ 13- ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಬಿರುಗಾಳಿಯಿಂದ ವಿದ್ಯುತ್ ಕಂಬಗಳು, ಮರಗಳು ಧರೆಗೆ ಉರುಳಿ ಬಿದ್ದಿವೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಅತಿ ಹೆಚ್ಚು ಹಾನಿಯಾಗಿದ್ದು, ಸಂಚಾರಕ್ಕೆ ತೀವ್ರ ಅಡ್ದಿಯಾಗಿದೆ. ರಸ್ತೆಗಳ ಮೇಲೆ ಬಿದ್ದ ಮರಗಳಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಬಾಗಲಕೋಟೆಯ ಬಾದಾಮಿಯಲ್ಲೂ ಇದೇ ರೀತಿಯ ಸನ್ನಿವೇಶವಿದ್ದು, ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಾಗಲಕೋಟೆ-ಬಾದಾಮಿ ರಸ್ತೆಯಲ್ಲಿ ಸಂಚಾರಕ್ಕೆ ಬಂದ್ ಆಗಿದೆ. ಕರಾವಳಿ ಮಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಸುರಿದ ಧಾರಾಕಾರ ಮಳೆಯಿಂದಾಗಿ ವಾಹನ ಸವಾರರು ಪರಿತಪ್ಪಿಸಿದ್ದಾರೆ.
ಕಾರವಾರ ಮತ್ತು ಹುಬ್ಬಳ್ಳಿಯಲ್ಲೂ ಭಾರಿ ಮಳೆಯಿಂದ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಗಿದೆ .ಬೆಳಿಗ್ಗೆ ಪಾಲಿಕೆ ಹಾಗಿ ವಿಪತ್ತು ನಿರ್ವಹಣಾ ಸಿಬ್ಬಂಧಿ ಪರಿಹಾರ ಕಾರ್ಯಾಚರಣೆ ನಡೆಸಿದ್ದಾರೆ. ಇದೇ ರೀತಿ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಿದೆ.
