ಬೆಂಗಳೂರು, ಜೂ. 15- ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಹೃದಯಾಘಾತವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿನ್ನೆ ಎಂದಿನಂತೆ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಸಂಜೆ ವೇಳೆಗೆ ಮನೆಗೆ ಮರಳಿದ್ದರು. ತಡರಾತ್ರಿ ಎದೆ ನೋವು ಕಾಣಿಸಿಕೊಂಡಿತ್ತು.
ಕುಟುಂಬದ ಸದಸ್ಯರು, ಆಪ್ತ ಸಹಾಯಕರು ಕೂಡಲೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತುರ್ತು ಚಿಕಿತೆ್ಸ ನೀಡಿದ್ದ ವೈದ್ಯರು, ಸ್ಟಂಟ್ ಅಳವಡಿಸಿದ್ದಾರೆ. ಶಾಸಕರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಡಿ.ಕೆ.ಸುರೇಶ್ ಇಂದು ಆಸ್ಪತ್ರೆಗೆ ಭೇಟಿ ನೀಡಿ ಶಾಸಕರ ಆರೋಗ್ಯ ವಿಚಾರಿಸಿದ್ದಾರೆ.ಇಕ್ಬಾಲ್ ಹುಸೇನ್, ಡಿ.ಕೆ.ಶಿವಕುಮಾರ್ ಅವರ ಪರಮಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಧಿಕಾರ ಹಂಚಿಕೆಗೂ ಮುನ್ನ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು, ಹಾಗೇ ಆಗುತ್ತಾರೆ ಎಂದು ಇಕ್ಬಾಲ್ ಹುಸೇನ್ ಹಲವಾರು ಬಾರಿ ವಕಾಲತು ವಹಿಸಿದ್ದರು.
ಕೆಪಿಸಿಸಿಯಿಂದ ನೋಟಿಸ್ ನೀಡಿದ ಹೊರತಾಗಿಯೂ ಹೇಳಿಕೆ ನೀಡುವುದನ್ನು ನಿಲ್ಲಿಸಿರಲಿಲ್ಲ. ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಅವರು ಸ್ವಕ್ಷೇತ್ರ ಕನಕಪುರದಲ್ಲಿ ಕೃತಜ್ಞತೆ ಸಮರ್ಪಣಾ ಜಾಥಾ ನಡೆಸಿದಾಗ ಇಕ್ಬಾಲ್ ಹುಸೇನ್ ಜೊತೆಯಲ್ಲೇ ನಿಂತು ಜಾಥಾದಲ್ಲಿ ಭಾಗವಹಿಸಿದ್ದರು.
