ಬೆಂಗಳೂರು,ಅ.15-ನಡು ರಸ್ತೆಯಲ್ಲೇ ಹಣಕಾಸು ವಿಚಾರಕ್ಕೆ ಗಲಾಟೆ ನಡೆದು ವ್ಯಕ್ತಿ ಮೇಲೆ ಗುಂಡು ಹಾರಿಸಿದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಗೊಟ್ಟಿಗೆರೆಯ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಸಂಪಂಗಿ ಅವರ ಬಳಿ ಈ ಹಿಂದೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ವೀವರ್ಸ್ ಕಾನೋನಿ ನಿವಾಸಿ ಶ್ರೀನಿವಾಸ್ ಅಲಿಯಾಸ್ ಮೆಂಟಲ್ ಸೀನ ನಡುವೆ ನಿನ್ನೆ ಸಂಜೆ ಪಿಳ್ಳಗಾನಹಳ್ಳಿ ನೈಸ್ ಬ್ರಿಡ್್ಜ ಬಳಿ ರಿಯಲ್ ಎಸ್ಟೇಟ್ ವಿಚಾರವಾಗಿ ಗಲಾಟೆಯಾಗಿದೆ.
ಆ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದಾಗ ಕೋಪದಿಂದ ಸಂಪಂಗಿ ತನ್ನ ಬಳಿ ಇದ್ದ ಗನ್ನಿಂದ ಶ್ರೀನಿವಾಸ್ನ ಕಾಲಿಗೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದ.ಗುಂಡೇಟಿನಿಂದ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದುದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದು ಕೋಣನಕುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಗಾಯಾಳು ಶ್ರೀನಿವಾಸ್ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಸಂಪಂಗಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.ಹಳೇ ದ್ವೇಷದಿಂದ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿ ಆ ನಿಟ್ಟಿನಲ್ಲಿ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.
