ಬೆಂಗಳೂರು, ಮೇ 16- ರಾಜ್ಯ ಸರ್ಕಾರವು 2026ನೇ ಸಾಲಿನಿಂದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ನೀಟ್ಪರೀಕ್ಷೆಯನ್ನು ರದ್ದುಪಡಿಸಿ, ರಾಜ್ಯಗಳಿಗೆ ತಮ್ಮದೇ ಆದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಲು ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಮತ್ತೊಮೆ ಬಲವಾಗಿ ಆಗ್ರಹಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಒತ್ತಾಯಿಸಿದ್ದಾರೆೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ಪಾರದರ್ಶಕ ಹಾಗೂ ವಿದ್ಯಾರ್ಥಿ ಸ್ನೇಹಿ ರೀತಿಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುವ ವ್ಯವಸ್ಥೆಯನ್ನು ಪುನಃ ಜಾರಿಗೆ ತರಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕವು ಹಲವು ದಶಕಗಳಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಅತ್ಯಂತ ಪಾರದರ್ಶಕ, ನ್ಯಾಯಸಮತ ಹಾಗೂ ಶಿಸ್ತಿನ ರೀತಿಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ರಾಜ್ಯದ ವ್ಯವಸ್ಥೆ ಗ್ರಾಮೀಣ, ಮಧ್ಯಮ ವರ್ಗ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸಿ, ಅವರ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕರ್ನಾಟಕದ ವ್ಯವಸ್ಥೆ ವಿದ್ಯಾರ್ಥಿಗಳಲ್ಲಿ ಶಿಕ್ಷಣ ವ್ಯವಸ್ಥೆಯ ಮೇಲೆ ನಂಬಿಕೆ ಮೂಡಿಸುವುದರ ಜೊತೆಗೆ, ಶುದ್ಧ ಪ್ರತಿಭೆ ಮತ್ತು ಪರಿಶ್ರಮದ ಆಧಾರದ ಮೇಲೆ ವೃತ್ತಿಪರ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದ ಅತ್ಯಂತ ವಿಶ್ವಾಸಾರ್ಹ ಮಾದರಿಯಾಗಿದೆ ಎಂದಿದ್ದಾರೆ.
ಆದರೆ ಕಳೆದ ಕೆಲವು ವರ್ಷಗಳಿಂದ ನೀಟ್ ಪರೀಕ್ಷೆ ನಡೆಯುವಿಕೆಗೆ ಸಂಬಂಧಿಸಿದಂತೆ ದೇಶಾದ್ಯಂತ ಗಂಭೀರ ಆತಂಕಗಳು ವ್ಯಕ್ತವಾಗುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆ, ನಕಲಿ ಅಭ್ಯರ್ಥಿಗಳ ಮೂಲಕ ಪರೀಕ್ಷೆ ಬರೆಯಿಸುವುದು, ಸಂಘಟಿತ ಅಕ್ರಮ ಜಾಲಗಳು, ಅಂಕಗಳ ತಿರುಚಾಟ, ತಾಂತ್ರಿಕ ದೋಷಗಳು ಹಾಗೂ ಪರೀಕ್ಷಾ ಪ್ರಕ್ರಿಯೆಯಲ್ಲಿನ ಅನೇಕ ಅವ್ಯವಸ್ಥೆಗಳ ಕುರಿತು ನಿರಂತರವಾಗಿ ಆರೋಪಗಳು ಕೇಳಿಬರುತ್ತಿವೆ.
ಇವುಗಳೆಲ್ಲವೂ ನಡೆಸುತ್ತಿರುವ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆ ಗಂಭೀರ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿವೆ ಎಂದು ಹೇಳಿದ್ದಾರೆ.
ಇತ್ತೀಚಿನ ನೀಟ್ ಪರೀಕ್ಷೆಗಳ ಸುತ್ತಲಿನ ವಿವಾದಗಳು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಭಾರೀ ಆತಂಕ, ಮಾನಸಿಕ ಒತ್ತಡ ಮತ್ತು ಅನಿಶ್ಚಿತತೆಯನ್ನು ಉಂಟುಮಾಡಿವೆ. ರಾಷ್ಟ್ರಮಟ್ಟದಲ್ಲಿ ಇಂತಹ ಪ್ರಮುಖ ಪರೀಕ್ಷೆಯನ್ನು ಸಂಪೂರ್ಣ ಪಾರದರ್ಶಕ ಹಾಗೂ ದೋಷರಹಿತ ರೀತಿಯಲ್ಲಿ ನಡೆಸುವಲ್ಲಿ ಕೇಂದ್ರ ಸರ್ಕಾರ ಮತ್ತು ಎನ್ಟಿಎ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಇದು ಈ ವರ್ಷ ಮಾತ್ರವಲ್ಲ, ಪ್ರತಿ ವರ್ಷವೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ. ಹಿನ್ನೆಲೆಯನ್ನು ಗಮನಿಸಿದರೆ, ವೈದ್ಯಕೀಯ ಶಿಕ್ಷಣದ ಸೀಟುಗಳನ್ನು ಮಾರಾಟಮಾಡಿಕೊಳ್ಳುವ ದುರುದ್ದೇಶದಿಂದ ಅಪರಾಧ ಮಾಡುತ್ತಿರುವುದು ಕಂಡು ಬರುತ್ತಿದೆ ಎಂದು ದೂರಿದ್ದಾರೆ.
ವೈದ್ಯಕೀಯ ಶಿಕ್ಷಣವು ಭವಿಷ್ಯದ ಆರೋಗ್ಯ ವ್ಯವಸ್ಥೆಯನ್ನು ರೂಪಿಸುವ ಅತ್ಯಂತ ಮಹತ್ವದ ಕ್ಷೇತ್ರವಾಗಿದೆ. ಇಂತಹ ಕ್ಷೇತ್ರಕ್ಕೆ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ, ಭ್ರಷ್ಟಾಚಾರರಹಿತ ಮತ್ತು ವಿದ್ಯಾರ್ಥಿ ಕೇಂದ್ರಿತವಾಗಿರಬೇಕು. ಪದೇ ಪದೇ ಅಕ್ರಮಗಳ ಆರೋಪಗಳಿಗೆ ಒಳಗಾಗುತ್ತಿರುವ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯನ್ನು ಈಗಾಗಲೇ ಯಶಸ್ವಿಯಾಗಿ ಮತ್ತು ನಿಷ್ಠೆಯಿಂದ ಪರೀಕ್ಷೆಗಳನ್ನು ನಡೆಸುತ್ತಿರುವ ರಾಜ್ಯಗಳ ಮೇಲೆ ಬಲವಂತವಾಗಿ ಹೇರಬಾರದು ಎಂದು ಒತ್ತಾಯಿಸಿದ್ದಾರೆ.
ರಾಜ್ಯಗಳ ಶಿಕ್ಷಣ ವ್ಯವಸ್ಥೆ, ಭಾಷಾ ವೈವಿಧ್ಯತೆ, ಪಠ್ಯಕ್ರಮ ಮತ್ತು ವಿದ್ಯಾರ್ಥಿಗಳ ಸಾಮಾಜಿಕ-ಆರ್ಥಿಕ ಹಿನ್ನೆಲೆಗಳನ್ನು ರಾಜ್ಯ ಸರ್ಕಾರಗಳೇ ಉತ್ತಮವಾಗಿ ಅರ್ಥಮಾಡಿಕೊಳ್ಳಬಲ್ಲವು. ಕರ್ನಾಟಕದ ಸಿಇಟಿ ವ್ಯವಸ್ಥೆ ಪ್ರತಿಭೆ ಮತ್ತು ಸಾಮಾಜಿಕ ನ್ಯಾಯ ಎರಡನ್ನೂ ಸಮತೋಲನಗೊಳಿಸಿ, ರಾಜ್ಯದ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳನ್ನು ಒದಗಿಸಿತ್ತು.
ನೀಟ್ ಪರೀಕ್ಷೆಯನ್ನು ರದ್ದುಪಡಿಸಿ ರಾಜ್ಯದಲ್ಲಿ ಸಿಇಟಿ ವ್ಯವಸ್ಥೆಯನ್ನು ಪುನಃ ಜಾರಿಗೆ ತರಲು ಅವಕಾಶ ನೀಡುವಂತೆ ಕರ್ನಾಟಕ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಪತ್ರ ಬರೆದಿದೆ. ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳ ಪಾತ್ರ ಮತ್ತು ಹಕ್ಕುಗಳನ್ನು ಗೌರವಿಸುವುದು ಸಂವಿಧಾನದ ಫೆಡರಲ್ ವ್ಯವಸ್ಥೆಯ ಆತವಾಗಿದೆ ಎಂಬ ನಿಲುವನ್ನು ರಾಜ್ಯ ಸರ್ಕಾರ ನಿರಂತರವಾಗಿ ಪ್ರತಿಪಾದಿಸುತ್ತಿದೆ ಎಂದಿದ್ದಾರೆ.
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಕನಸುಗಳನ್ನು ಪರೀಕ್ಷಾ ಅವ್ಯವಸ್ಥೆಗಳ ಕಾರಣಕ್ಕೆ ಹಾಳುಮಾಡಲು ಅವಕಾಶ ನೀಡಲಾಗುವುದಿಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ರಕ್ಷಿಸುವ ಅಗತ್ಯ ಇದೆ ಎಂದು ಅವರು ಹೇಳಿದ್ದಾರೆ.
ಎಂಬಿಬಿಎಸ್ ಸೀಟ್ಗಳ ಹೆಚ್ಚಳ:
ವೈದ್ಯಕೀಯ ಶಿಕ್ಷಣದಲ್ಲಿ 11 ಸರ್ಕಾರಿ ಎಂಬಿಬಿಎಸ್ ಕಾಲೇಜುಗಳಲ್ಲಿ 550 ಎಂಬಿಬಿಎಸ್ ಸೀಟ್ಗಳನ್ನು ಹಾಗೂ 23 ಶಿಕ್ಷಣ ಸಂಸ್ಥೆಗಳಲ್ಲಿ 572 ಸ್ನಾತಕೋತ್ತರ ಕೋರ್ಸ್ಗಳ ಸೀಟ್ಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಈ ಮೊದಲು 1,700 ಸೀಟ್ಗಳು ಲಭ್ಯವಿದ್ದವು. 550 ಸೇರ್ಪಡೆಯಿಂದ 2,250 ಸೀಟುಗಳಾಗಿವೆ. ಇದಕ್ಕಾಗಿ ಕೇಂದ್ರ ಸರ್ಕಾರ 495, ರಾಜ್ಯ ಸರ್ಕಾರ 330 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಸ್ನಾತಕೋತ್ತರ ಕೋರ್ಸ್ಗಳಲ್ಲಿ 1,673 ಸೀಟ್ಗಳ ಜೊತೆಗೆ 572 ಸೇರಿ ಒಟ್ಟು 2,245 ಸೀಟ್ಗಳಾಗಲಿದ್ದು ಇದಕ್ಕಾಗಿ ಕೇಂದ್ರ ಸರ್ಕಾರ 541, ರಾಜ್ಯ ಸರ್ಕಾರ 316 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ ಎಂದು ಹೇಳಿದರು.
ಖಾಸಗಿ ಹಾಗೂ ಇತರ ಸಂಸ್ಥೆಗಳ ಅಧೀನದಲ್ಲಿರುವ ಕಾಲೇಜುಗಳಲ್ಲಿ 450 ಸೀಟ್ಗಳನ್ನು ಹೆಚ್ಚಿಸಲಾಗಿದ್ದು, ಈ ಮೊದಲಿದ್ದ 3,800 ಸೀಟ್ಗಳನ್ನು ಒಳಗೊಂಡಂತೆ ಒಟ್ಟು 4,250 ವೈದ್ಯಕೀಯ ಸೀಟ್ಗಳು ಲಭ್ಯವಾಗುತ್ತಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಒಟ್ಟು 72 ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಂದ 13,945 ಹಾಗೂ ಸ್ನಾತಕೋತ್ತರದಲ್ಲಿ 7,727 ಸೀಟ್ಗಳು ಲಭ್ಯವಾದಂತಾಗಲಿವೆ ಎಂದು ತಿಳಿಸಿದ್ದಾರೆ.
