Homeರಾಜ್ಯಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌‍ವೇಯಲ್ಲಿ ಪುಂಡರ ಅಟ್ಟಹಾಸ, ಕುಟುಂಬದ ಮೇಲೆ ಹಲ್ಲೆ

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌‍ವೇಯಲ್ಲಿ ಪುಂಡರ ಅಟ್ಟಹಾಸ, ಕುಟುಂಬದ ಮೇಲೆ ಹಲ್ಲೆ

ಬೆಂಗಳೂರು,ಜು.7- ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌‍ವೇಯಲ್ಲಿ ಪುಂಡರ ದಾಂಧಲೆ ಮುಂದುವರಿದಿದ್ದು, ಓವರ್‌ಟೇಕ್‌ ವಿಚಾರವಾಗಿ ನಡೆದ ವಾಗ್ವಾದವು ಕುಟುಂಬವೊಂದರ ಮೇಲೆ ಮಾರಣಾಂತಿಕ ಹಲ್ಲೆಗೆ ಕಾರಣವಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಫ್ಲೈಓವರ್‌ನಲ್ಲಿ ನಡೆದಿದೆ. ಬೆಂಗಳೂರು ನಿವಾಸಿ ಸಾಗರ್‌ ಅವರು ಪತ್ನಿ, ಮಕ್ಕಳು ಹಾಗೂ ತಾಯಿಯೊಂದಿಗೆ ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಜು.5 ರಂದು ರಾತ್ರಿ ಪ್ರಯಾಣಿಸುತ್ತಿದ್ದರು.

ಈ ವೇಳೆ ಶ್ರೀರಂಗಪಟ್ಟಣದ ಸರ್ವಿಸ್‌‍ ರಸ್ತೆಯಲ್ಲಿ ಓವರ್‌ಟೇಕ್‌ ವಿಚಾರವಾಗಿ ಮತ್ತೊಂದು ಕಾರಿನಲ್ಲಿದ್ದ ಪುಂಡರ ಗುಂಪು ಅವರೊಂದಿಗೆ ಜಗಳ ಆರಂಭಿಸಿತು.ಸಾಗರ್‌ ಕುಟುಂಬ ಅಲ್ಲಿಂದ ಮುಂದೆ ತೆರಳಿದರೂ, ಎರಡು ಕಾರುಗಳಲ್ಲಿ ಅವರನ್ನು ಬೆನ್ನಟ್ಟಿಕೊಂಡು ಮದ್ದೂರು ಎಕ್ಸ್ ಪ್ರೆಸ್‌‍ವೇ ಫ್ಲೈಓವರ್‌ವರೆಗೆ ಪುಂಡರು ಬಂದಿದ್ದಾರೆ.

ಫ್ಲೈಓವರ್‌ ಮೇಲೆ ಸಿನಿಮಾ ಶೈಲಿಯಲ್ಲಿ ಸಾಗರ್‌ ಅವರ ಕಾರನ್ನು ಅಡ್ಡಗಟ್ಟಿ, ಅವರನ್ನು ಹೊರಗೆಳೆದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಜಾಕ್‌ ರಾಡ್‌ನಿಂದ ಸಾಗರ್‌ ಅವರ ತಲೆಗೆ ಬಲವಾಗಿ ಹೊಡೆದಿದ್ದಾರೆ.

ಸಾಗರ್‌ ಅವರ ಪತ್ನಿ ಹಾಗೂ ತಾಯಿ ಕೈಮುಗಿದು ಬೇಡಿಕೊಂಡರೂ ಆರೋಪಿಗಳು ಹಲ್ಲೆ ನಿಲ್ಲಿಸಲಿಲ್ಲ. ತಂದೆಯನ್ನು ರಕ್ಷಿಸಲು ಬಂದ 8 ವರ್ಷದ ಮಗುವಿನ ಕೈಯನ್ನೂ ಆರೋಪಿಗಳು ಕ್ರೂರವಾಗಿ ತಿರುಚಿದ್ದಾರೆ ಎಂದು ಆರೋಪಿಸಲಾಗಿದೆ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮದ್ದೂರು ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಸಾಗರ್‌ ಕುಟುಂಬವನ್ನು ರಕ್ಷಿಸಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಆರೋಪಿಗಳ ವಿರುದ್ಧ ಮದ್ದೂರು ಪೊಲೀಸ್‌‍ ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌‍ವೇಯಲ್ಲಿ ಸರಣಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ.

RELATED ARTICLES

Latest News