Homeರಾಷ್ಟ್ರೀಯಜಿಪಿಎಸ್‌‍ ಕಡ್ಡಾಯ, ಗಡಿ ಚೆಕ್‌ಪೋಸ್ಟ್‌‍ ವಿರೋಧಿಸಿ ಆ. 1ರಿಂದ ಸೌತ್‌ ಇಂಡಿಯಾ ಲಾರಿ ಮುಷ್ಕರದ ಎಚ್ಚರಿಕೆ

ಜಿಪಿಎಸ್‌‍ ಕಡ್ಡಾಯ, ಗಡಿ ಚೆಕ್‌ಪೋಸ್ಟ್‌‍ ವಿರೋಧಿಸಿ ಆ. 1ರಿಂದ ಸೌತ್‌ ಇಂಡಿಯಾ ಲಾರಿ ಮುಷ್ಕರದ ಎಚ್ಚರಿಕೆ

lorry strike from August 1st against mandatory GPS, border checkposts

ಬೆಂಗಳೂರು,ಜು.7- ಜಿಪಿಎಸ್‌‍ಪ್ಯಾನಿಕ್‌ ಬಟನ್‌ ಕಡ್ಡಾಯ, ಗಡಿ ಚೆಕ್‌ಪೋಸ್ಟ್‌ಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಗಸ್ಟ್‌ 1ರಿಂದ ದಕ್ಷಿಣ ಭಾರತದಾದ್ಯಂತ ಲಾರಿಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸೌತ್‌ ಇಂಡಿಯಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಭಯ ಪ್ರಕರಣದ ಬಳಿಕ 2012ರಲ್ಲಿ ಕೇಂದ್ರ ಸರ್ಕಾರ ವಾಣಿಜ್ಯ ವಾಹನಗಳಿಗೂ ಜಿಪಿಎಸ್‌‍ ಹಾಗೂ ಪ್ಯಾನಿಕ್‌ ಬಟನ್‌ ಕಡ್ಡಾಯಗೊಳಿಸಿತು. ಆದರೆ ಇದರ ಅನುಷ್ಠಾನದಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ಒಂದು ರಾಜ್ಯದಲ್ಲಿ ಜಿಪಿಎಸ್‌‍ಪ್ಯಾನಿಕ್‌ ಬಟನ್‌ ಅಳವಡಿಕೆಗೆ 3 ಸಾವಿರ, ಮತ್ತೊಂದು ರಾಜ್ಯದಲ್ಲಿ 15 ಸಾವಿರ ವಸೂಲಿ ಮಾಡಲಾಗುತ್ತಿದೆ. ಸರಕು ಸಾಗಣೆ ವಾಹನಗಳಿಗೆ ಈ ವ್ಯವಸ್ಥೆಯ ಅಗತ್ಯವಿಲ್ಲ. ಪ್ರಯಾಣಿಕರ ವಾಹನಗಳಲ್ಲಿ ಈಗಾಗಲೇ ಅಳವಡಿಸಲಾಗಿದ್ದರೂ ಇದುವರೆಗೆ ಯಾವುದೇ ಅಹಿತಕರ ಘಟನೆಗಳನ್ನು ತಡೆಯುವಲ್ಲಿ ಅದರ ಪರಿಣಾಮಕಾರಿತ್ವವನ್ನು ಸರ್ಕಾರಗಳು ಪರಿಶೀಲಿಸಿಲ್ಲ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ವಾಣಿಜ್ಯ ಸರಕು ಸಾಗಣೆ ವಾಹನಗಳಿಗೆ ಜಿಪಿಎಸ್‌‍ ಮತ್ತು ಪ್ಯಾನಿಕ್‌ ಬಟನ್‌ ಕಡ್ಡಾಯ ಬೇಡ ಎಂಬುದು ನಮ ಸಂಘದ ತೀರ್ಮಾನ ಎಂದು ತಿಳಿಸಿದರು.
ಗಡಿ ಚೆಕ್‌ಪೋಸ್ಟ್‌ಗಳ ವಿಷಯ ಪ್ರಸ್ತಾಪಿಸಿದ ಅವರು, ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಲಾಗಿದೆ. ತೆಲಂಗಾಣದಲ್ಲಿ ಆರು ತಿಂಗಳ ಹಿಂದೆ ಹಾಗೂ ಆಂಧ್ರಪ್ರದೇಶದಲ್ಲಿ ಸುಮಾರು ಒಂದೂವರೆ ವರ್ಷದ ಹಿಂದೆ ಅವುಗಳನ್ನು ತೆಗೆದುಹಾಕಲಾಗಿದೆ. ಆದರೆ ಕಾಂಗ್ರೆಸ್‌‍ ಆಡಳಿತವಿರುವ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾತ್ರ ಇನ್ನೂ ಚೆಕ್‌ಪೋಸ್ಟ್‌ಗಳು ಮುಂದುವರಿದಿವೆ ಎಂದು ಆರೋಪಿಸಿದರು.

ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಕೂಡಲೇ ಗಡಿ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಬೇಕು. ರಾಜ್ಯದ ನೂತನ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರು ಈ ಕುರಿತು ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜುಲೈ 30ರೊಳಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ಆಗಸ್ಟ್‌ 1ರಿಂದ ದಕ್ಷಿಣ ಭಾರತದ ಎಲ್ಲಾ ಲಾರಿಗಳು ನಿಂತಲ್ಲೇ ನಿಲ್ಲಲಿವೆ ಎಂದು ಎಚ್ಚರಿಕೆ ನೀಡಿದರು.ದಕ್ಷಿಣ ಭಾರತದಲ್ಲಿ ಸುಮಾರು 24 ಲಕ್ಷ ಲಾರಿಗಳಿದ್ದು, ಕರ್ನಾಟಕದಲ್ಲೇ 7 ಲಕ್ಷ ಲಾರಿಗಳಿವೆ. ಈ ಮುಷ್ಕರದಲ್ಲಿ ದಕ್ಷಿಣ ಭಾರತದ ಎಲ್ಲಾ ಲಾರಿಗಳು ಭಾಗವಹಿಸಲಿವೆ ಎಂದು ಷಣುಗಪ್ಪ ತಿಳಿಸಿದರು.

RELATED ARTICLES

Latest News