ಚಿಕ್ಕಮಗಳೂರು,ಏ.10- ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣ ಶ್ರೀ ದತ್ತಾತ್ರೇಯ ಪೀಠ ಇನಾಂ ಬಾಬಾಬುಡನ್ ಗಿರಿಯ ಮಾಣಿಕ್ಯಧಾರ ಜಲಪಾತದ ಬಳಿ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ 10ನೇ ತರಗತಿ ವಿದ್ಯಾರ್ಥಿನಿ ಶ್ರೀನಂದಾ ನಾಪತ್ತೆಯಾಗಿ ಮೂರು ದಿನಗಳು ಕಳೆದರೂ ಆಕೆಯ ಸುಳಿವು ಸಿಗದಿರುವುದು, ತಾಯಿ ಹೇಳಿಕೆ ಈಗ ಪೊಲೀಸರ ತನಿಖೆ ದಿಕ್ಕನ್ನು ಬದಲಿಸುವಂತೆ ಮಾಡಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಕಣ್ಣೀರಿಡುತ್ತಾ ಮಾತನಾಡಿದ ಬಾಲಕಿಯ ತಾಯಿ, ರೋಹಿಣಿ ತನ್ನ ಮಗಳನ್ನು ಯಾರೋ ಅಪಹರಿಸಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ತನ್ನ ಮಗಳು ಜಲಪಾತದ ಬಳಿ ಆಕಸಿಕವಾಗಿ ಬಿದ್ದಿರಲು ಸಾಧ್ಯವೇ ಇಲ್ಲ. ಯಾರೋ ಅಪರಿಚಿತರು ಸಮಯ ಸಾಧಿಸಿ ಮಾದಕ ದ್ರವ್ಯ ನೀಡಿ ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿಕ್ಷಣದಲ್ಲಿ ಮುಂದಿದ್ದ ಮಗಳ ನಾಪತ್ತೆಯಿಂದ ಕಂಗಾಲಾಗಿರುವ ಪೋಷಕರು, ಹೇಗಾದರೂ ಮಾಡಿ ನನ್ನ ಮಗಳನ್ನು ಹುಡುಕಿಕೊಡಿ ಎಂದು ಪೊಲೀಸರಲ್ಲಿ ಹಾಗೂ ಸಾರ್ವಜನಿಕರಲ್ಲಿ ಕಣ್ಣೀರು ಹಾಕುತ್ತಾ ಮನವಿ ಮಾಡಿದ್ದಾರೆ. ಶ್ರೀನಂದ ರವರ ತಾಯಿ ರೋಹಿಣಿ ಕಣ್ಣೀರು ಹಾಕುತ್ತಾ ಆರೋಪಿಸಿರುವ ಹೇಳಿಕೆಯಿಂದ ಪೊಲೀಸರು ಹಾಗೂ ಶೋಧನಾ ತಂಡಗಳಲ್ಲಿ ಸಂಚಲನ ಮೂಡಿಸಿದೆ.
ಘಟನೆ ನಡೆದ ದಿನದಿಂದ ಪೊಲೀಸ್, ಅಗ್ನಿಶಾಮಕಾದಳ ಹಾಗೂ ಸ್ಥಳೀಯರು ಮಾಣಿಕ್ಯ ಧಾರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದಾರೆ ದಟ್ಟವಾದ ಮಂಜು ಮತ್ತು ಕಡಿದಾದ ಹಾದಿಗಳು ಶೋಧ ಕಾರ್ಯಕ್ಕೆ ಅಡ್ಡಿಯುಂಟು ಮಾಡುತ್ತಿದೆ ಬಾಲಕಿ ಆಕಸಿಕವಾಗಿ ಬಿದ್ದಿದ್ದರೆ ಇಷ್ಟೊತ್ತಿಗೆ ಆಗಲೇ ಏನಾದರೂ ಸುಳಿವು ಸಿಗಬೇಕಿತ್ತು ಆದರೆ ಯಾವುದೇ ಸುಳಿವು ಸಿಗದ ಕಾರಣ ಪೋಷಕರ ಅಪಹರಣ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ.
ಸದ್ಯ ಗಿರಿ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು ಪ್ರತಿಯೊಬ್ಬ ಪ್ರವಾಸಿಗರ ಮೇಲೆ ನಿಗಾ ಇಡಲಾಗುತ್ತಿದ್ದು ಬಾಲಕಿಯ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಪೋಷಕರು ಘೋಷಿಸಿದ್ದಾರೆ.
