Thursday, April 16, 2026
Homeರಾಜ್ಯಹೋಳಿ, ರಂಜಾನ್‌ ಹಬ್ಬದ ವೇಳೆ ಶಾಂತಿ ಕದಡಿದರೆ ಕಠಿಣ ಕ್ರಮ : ಪರಮೇಶ್ವರ್‌ ಎಚ್ಚರಿಕೆ

ಹೋಳಿ, ರಂಜಾನ್‌ ಹಬ್ಬದ ವೇಳೆ ಶಾಂತಿ ಕದಡಿದರೆ ಕಠಿಣ ಕ್ರಮ : ಪರಮೇಶ್ವರ್‌ ಎಚ್ಚರಿಕೆ

Strict action if peace is disturbed during Holi, Ramzan: Parameshwara warns

ಬೆಂಗಳೂರು, ಫೆ.23- ರಂಜಾನ್‌ ಮತ್ತು ಹೋಳಿ ಹಬ್ಬಗಳ ಆಚರಣೆಯ ವೇಳೆ ಕಾನೂನು ಕೈಗೆತ್ತಿಕೊಂಡು ಶಾಂತಿ ಕದಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಬ್ಬ ಇರುವುದು ಸಂತೋಷದಿಂದ ಆಚರಣೆ ಮಾಡಲು. ಅಂತಹ ಸಂದರ್ಭಗಳಲ್ಲಿ ಶಾಂತಿ ಭಂಗಕ್ಕೆ ಪ್ರಯತ್ನಿಸಿದರೆ. ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು. ಬಾಂಗ್ಲಾದಿಂದ ಬಂದಿರುವ ಅಕ್ರಮ ವಾಸಿಗಳ ವಿರುದ್ಧ ಒಂದು ತಿಂಗಳಿನಿಂದಲೂ ತಪಾಸಣಾ ಕಾರ್ಯ ಕೈಗೊಳ್ಳಲಾಗಿದೆ.

ಈ ಬಗ್ಗೆ ವಿರೋಧ ಪಕ್ಷಗಳ ಮುಖಂಡರು ಕೂಡ ಟೀಕೆ ಮಾಡಿದ್ದರು. ಕಾಫಿ ತೋಟಗಳಲ್ಲಿ, ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರಗಳ ಎಸ್ಪಿಗಳಿಗೆ, ಬೆಂಗಳೂರಿನಲ್ಲಿ ಡಿಎಸ್‌‍ಪಿಗಳಿಗೆ ಕಠಿಣ ಸಂದೇಶ ರವಾನಿಸಿ, ಅಭಿಯಾನದ ಮಾದರಿಯಲ್ಲಿ ತಪಾಸಣೆ ನಡೆಸುತ್ತಿದ್ದೇವೆ ಎಂದರು.

ಕೊರಟಗೆರೆಯಲ್ಲಿ ದಲಿತ ಕುಟುಂಬವನ್ನು ದೇವಸ್ಥಾನದ ಒಳಗೆ ಬಿಡದೆ ಅಪಮಾನ ಮಾಡಲಾಗಿದೆ ಎಂಬ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.ಕಾಂಗ್ರೆಸ್ಸಿನಲ್ಲಿ ನಾಯಕತ್ವದ ವಿಚಾರವಾಗಿ ಯಾವುದೇ ಗೊಂದಲ ಇಲ್ಲ. ಎಲ್ಲವೂ ವಿರೋಧ ಪಕ್ಷದವರ ಸೃಷ್ಟಿ.

ರಾಜ್ಯದಲ್ಲಿ ಆಡಳಿತ ಸುಗಮವಾಗಿ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಬಜೆಟ್‌ ಪೂರ್ವ ತಯಾರಿಕೆಗೆ ಒಂದು ತಿಂಗಳಿನಿಂದಲೂ ನಿರಂತರವಾಗಿ ಸಭೆ ನಡೆಸಿ ಚರ್ಚಿಸುತ್ತಿದ್ದಾರೆ. ನಮಲ್ಲಿ ಯಾವುದೇ ಗೊಂದಲಗಳಿಲ್ಲ . ವಿರೋಧ ಪಕ್ಷಗಳು ತಮ ಲೋಪಗಳನ್ನು ಮುಚ್ಚಿಟ್ಟುಕೊಳ್ಳಲು ಮುಖ್ಯಮಂತ್ರಿ ಬದಲಾವಣೆ ಎಂಬ ಅನಗತ್ಯ ಗೊಂದಲವನ್ನು ಹುಟ್ಟು ಹಾಕಿದ್ದಾರೆ ಎಂದರು.ಕಾಂಗ್ರೆಸ್‌‍ ಹೊರತುಪಡಿಸಿ ಬೇರೆ ಯಾವ ಪಕ್ಷದಲ್ಲೂ ದಲಿತರನ್ನು ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ. ದಲಿತರಿಗೆ ಯಾವಾಗ ಅವಕಾಶ ಸಿಗುತ್ತದೆ ಎಂಬುದನ್ನು ಹೈಕಮಾಂಡ್‌ ನಾಯಕರು ನಿರ್ಧರಿಸುತ್ತಾರೆ ಎಂದರು.

ಭ್ರಷ್ಟಾಚಾರದ ಬಗ್ಗೆ ಬಿಜೆಪಿಯವರು ಬಹಳ ಪಾಠ ಮಾಡುತ್ತಾರೆ. ಆದರೆ ಶಿರಹಟ್ಟಿ ಕ್ಷೇತ್ರದ ಶಾಸಕರ ಚಂದ್ರು ಲಮಾಣಿ ಬಂಧನದ ಬಗ್ಗೆ ಏಕೆ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ಶಾಸಕರ ಬಂಧನದಲ್ಲಿ ಕಾಂಗ್ರೆಸ್‌‍ ಪಕ್ಷದ ಷಡ್ಯಂತ್ರ ಇದೆ ಎಂದು ಮಾತನಾಡುವುದು ಸುಲಭ. ಆದರೆ ಲೋಕಾಯುಕ್ತರು ಎಲ್ಲವನ್ನು ಅಧ್ಯಯನ ಮಾಡಿ, ಹಿನ್ನೆಲೆ ಹಾಗೂ ಪ್ರಸಕ್ತ ವಿದ್ಯಮಾನಗಳನ್ನು ಆದರಿಸಿಯೇ ದಾಳಿ ಮಾಡಿರುತ್ತಾರೆ. ಅನಗತ್ಯವಾಗಿ ಅಥವಾ ಆಧಾರದ ರಹಿತವಾಗಿ ಕಾರ್ಯಾಚರಣೆ ಮಾಡಿರುವುದಿಲ್ಲ ಎಂದರು.

ಶಾಲೆಗಳಲ್ಲಿ ಮೊಬೈಲ್‌ ನಿಷೇಧಿಸಲು ಚಿಂತನೆ ನಡೆದಿದೆ. 16 ವರ್ಷದ ಒಳಗಿನ ಮಕ್ಕಳಿಗೆ ಮೊಬೈಲ್‌ ಕೊಟ್ಟರೆ ಅಧ್ಯಯನದ ಮೇಲೆ ಕೆಲಸ ಪರಿಣಾಮವಾಗಲಿದೆ ಎಂದು ಹಲವು ಅಧ್ಯಯನ ವರದಿಗಳು ತಿಳಿಸಿವೆ.

ಹೀಗಾಗಲೇ ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್‌ ಬಳಕೆಯನ್ನು ನಿಷೇಧಿಸಲಾಗಿದೆ. ರಾಜ್ಯದಲ್ಲಿಯೂ ಅದೇ ರೀತಿಯ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಯವರು ವರದಿ ಕೇಳಿದ್ದಾರೆ ಎಂದರು.

ಕಾಲೇಜು ವಿದ್ಯಾರ್ಥಿ ಸಂಘಗಳ ಚುನಾವಣೆ ಹಿನ್ನೆಲೆಯಲ್ಲಿ ಎರಡು ಮೂರು ಗುಂಪುಗಳಾಗಿ ಸಂಘರ್ಷಗಳಾಗುತ್ತಿತ್ತು. ಕೆ.ಹೆಚ್‌.ರಂಗನಾಥ್‌ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ರದ್ದು ಮಾಡಿದ್ದರು. ತಾವು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಸಿಂಡಿಕೇಟ್‌ ಗೆ ನಡೆಯುತ್ತಿದ್ದ ಚುನಾವಣೆಯನ್ನು ನಿಷೇಧ ಮಾಡಲಾಗಿತ್ತು. ಈಗ ಮತ್ತೆ ಮರುಪರಿಶೀಲಿಸುವ ಚರ್ಚೆಗಳು ನಡೆಯುತ್ತಿವೆ. ಸಚಿವ ಸಂಪುಟದಲ್ಲಿ ಯಾವ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡುವುದಾಗಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ನಡುವೆ ನಡೆಯುತ್ತಿರುವ ಜಟಾಪಟಿಗೆ ಸಂಬಂಧಪಟ್ಟಂತೆ ತಾವು ಪ್ರತಿಕ್ರಿಯಿಸುವುದಿಲ್ಲ. ಸಿದ್ದರಾಮಯ್ಯನವರು ಹಿಂದೆ ಜೆಡಿಎಸ್‌‍ನಲ್ಲಿದ್ದವರು. ಆ ಪಕ್ಷದಿಂದ ಅವರನ್ನು ಹೊರಹಾಕಲಾಯಿತು. ಜೆಡಿಎಸ್‌‍ ನಾಯಕರು ಮತ್ತು ಸಿದ್ದರಾಮಯ್ಯ ಅವರ ನಡುವೆ ಏನಿವೆಯೋ ನಮಗೇನು ಗೊತ್ತು ಎಂದರು.

ಸಿದ್ದರಾಮಯ್ಯ ತಮ ಜೀವನದ್ದಕ್ಕೂ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿಯೇ ಕೆಲಸ ಮಾಡಿದ್ದಾರೆ. ಅವರ ರಾಜಕೀಯ ಜೀವನದ ಅಡಿಪಾಯವು ಅದರ ಆಧಾರದ ಮೇಲೆಯೇ ನಿಂತಿದೆ. ಹೊಸದಾಗಿ ಅವರು ಏನನ್ನೂ ಮಾಡಬೇಕಿಲ್ಲ ಎಂದರು.

RELATED ARTICLES

Latest News